ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತು ಸುಣ್ಣವಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಾಳೆ ದೆಹಲಿಯಲ್ಲಿ ಎಲ್ಲ ರಾಜ್ಯಗಳ ಕಾರ್ಯಕಾರಿಣಿ ಮುಖಂಡರ ಸಭೆ ಕರೆದಿದ್ದಾರೆ. ಏತನ್ಮಧ್ಯೆ, ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಆದ ತೀವ್ರ ಮುಖಭಂಗದಿಂದಾಗಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜ್ ಬಬ್ಬರ್ ರಾಜೀನಾಮೆ ನೀಡಿದ್ದಾರೆ.
ಶುಕ್ರವಾರ ಯುಪಿಸಿಸಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಬ್ಬರ್, ರಾಜೀನಾಮೆ ಪತ್ರವನ್ನು ರಾಹುಲ್ ಗಾಂಧಿಗೆ ತಲುಪಿಸಿದ್ದಾರೆ. ಸಂಸತ್ತಿಗೆ 80 ಸದಸ್ಯರನ್ನು ಕಳುಹಿಸುವ ರಾಜ್ಯದಲ್ಲಿ ಕಾಂಗ್ರೆಸ್ ತೀರಾ ಕಳಪೆ ಪ್ರದರ್ಶನ ನೀಡಿದೆ. ಈ ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಉತ್ತರಪ್ರದೇಶ ಫಲಿತಾಂಶ ಕಾಂಗ್ರೆಸ್ಗೆ ತೀರಾ ಹತಾಶೆ ಮೂಡಿಸಿದೆ. ಇದರ ಜವಾಬ್ದಾರಿಯನ್ನು ನಾನೇ ಹೊತ್ತುಕೊಳ್ಳುತ್ತೇನೆ. ಗೆದ್ದಿರುವ ಎಲ್ಲ ನೂತನ ಸಂಸದರಿಗೆ ಶುಭಾಶಯಗಳನ್ನು ತಿಳಿಸುತ್ತೇನೆ ಎಂದು ಬಬ್ಬರ್ ಟ್ವೀಟ್ ಮಾಡಿದ್ದಾರೆ.
ಉತ್ತರಪ್ರದೇಶದ 80 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕೇವಲ ಒಂದು ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸಿದೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ರಾಯ್ಬರೇಲಿ ಕ್ಷೇತ್ರದಿಂದ ಗೆಲುವು ಕಂಡಿದ್ದಾರೆ. ಇನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಆಮೇಥಿಯಲ್ಲೂ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಸುಮಾರು 55 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಇದು ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಿದೆ. ಅಷ್ಟೇ ಅಲ್ಲದೇ, ಫತೇಪುರ್ ಸಿಕ್ರಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ರಾಜ್ ಬಬ್ಬರ್ ಹೀನಾಯವಾಗಿ ಸೋತು ಹೋಗಿದ್ದಾರೆ. ಈ ರಾಜ್ಯದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷ ಅಪ್ನ ದಳ (ಎಸ್) 64 ಕ್ಷೇತ್ರಗಳಲ್ಲಿ ಗೆಲುವುದ ಸಾಧಿಸಿದ್ದರೆ, ಬಿಎಸ್ಪಿ ಮತ್ತು ಎಸ್ಪಿ ಮೈತ್ರಿ 15 ಕ್ಷೇತ್ರಗಳಲ್ಲಿ ಗೆಲುವಿ ಕಂಡಿವೆ.
ಓಡಿಶಾ ಕಾಂಗ್ರೆಸ್ ಮುಖ್ಯಸ್ಥ ನಿರಂಜನ್ ಪಾಟ್ನಾಯಕ್ ಕೂಡ ಸೋಲಿನ ನೈತಿಕ ಹೊಣೆ ಹೊತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ರಾಜ್ಯದಲ್ಲಿ ಕಾಂಗ್ರೆಸ್ ಕೇವಲ 9 ವಿಧಾನಸಭಾ ಕ್ಷೇತ್ರಗಳಲ್ಲಿ ಹಾಗೂ ಒಂದು ಲೋಕಸಭಾ ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಕಂಡಿದೆ. 2014ರ ಚುನಾವಣೆಯಲ್ಲಿ ವಿಧಾನಸಭೆಯಲ್ಲಿ 147 ಕ್ಷೇತ್ರಗಳಲ್ಲಿ 16ರಲ್ಲಿ ಗೆಲುವು ಕಂಡಿತ್ತು. 21 ಲೋಕಸಭಾ ಸದಸ್ಯ ಬಲದಲ್ಲಿ ಒಂದೇ ಒಂದು ಕ್ಷೇತ್ರದಲ್ಲಿ ಖಾತೆ ತೆರೆಯುವಲ್ಲಿ ವಿಫಲವಾಗಿತ್ತು.