ಕರ್ನಾಟಕ

ಬಿರುಗಾಳಿ, ಮಳೆ ಆರ್ಭಟ; ಮಣ್ಣು ಪಾಲಾಯಿತು ರೈತರ ಫಸಲು

Pinterest LinkedIn Tumblr


ಗದಗ(ಮೇ 24): ಸತತ ಬರಗಾಲಕ್ಕೆ ಸಿಲುಕಿ ನರಳಾಡುತ್ತಿದ್ದ ಉತ್ತರ ಕರ್ನಾಟದ ರೈತರಿಗೆ ಈಗ ಮತ್ತೊಂದು ಬರಸಿಡಿಲು ಅಪ್ಪಳಿಸಿದೆ. ಗದಗ ಜಿಲ್ಲೆಯಾದ್ಯಂತ ನಿನ್ನೆ ಬೀಸಿದ ರಕ್ಕಸ ಬಿರುಗಾಳಿ ಮತ್ತು ಮಳೆಯಿಂದ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಕಟಾವಿಗೆ ಬಂದಿದ್ದ ಬಾಳೆ ಹಣ್ಣು, ಮಾವು ಫಸಲು ಸಂಪೂರ್ಣ ಮಣ್ಣು ಪಾಲಾಗಿದೆ. ಗದಗ, ಲಕ್ಷ್ಮೇಶ್ವರ, ಶಿರಹಟ್ಟಿ ತಾಲೂಕು ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ಬೆಳೆ ಹಾನಿಯಾಗಿದೆ. ಅದ್ರಲ್ಲೂ ಬಾಳೆ ಬೆಳೆದ ರೈತರು ಬದುಕು‌ ಮಣ್ಣು ಪಾಲಾಗಿದೆ. ರೈತರ ಬದುಕಲ್ಲಿ ಸಿಹಿಯಾಗಬೇಕಿದ್ದ ಬಾಳೆ ಕಹಿಯಾಗಿದೆ. ಹುಲಕೋಟಿ, ಹರ್ತಿ, ಶ್ಯಾಗೋಟಿ, ಕಳಸಾಪೂರ, ಚಿಕ್ಕಸವಣೂರ, ಸೂರಣಗಿ ಸೇರಿದಂತೆ ಜಿಲ್ಲೆಯಲ್ಲಿ 50 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ನೆಲಕ್ಕುರುಳಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆದ ಫಸಲು ರಕ್ಕಸ ಬಿರುಗಾಳಿಗೆ ನೆಲಕಚ್ಚಿದೆ.

ಈ ಬಾರಿ ವರುಣದೇವ ಕೃಪೆ ತೋರದಿದ್ದರೂ ಹರಸಾಹಸ ಪಟ್ಟು ಹನಿ ನೀರಾವರಿ ಮೂಲಕ ಫಸಲಿಗೆ ನೀರುಣಿಸಿದ್ದ ರೈತರು, ಲಕ್ಷಾಂತರ ಸಾಲ ಮಾಡಿಕೊಂಡು ಬೆಳೆ ಉಳಿಸಿಕೊಂಡಿದ್ದರು. ರೈತರ ಶ್ರಮಕ್ಕೆ ಸಾಥ ನೀಡಿದ್ದ ಭೂತಾಯಿ ಉತ್ತಮ ಇಳುವರಿಯನ್ನು ಸಹ ನೀಡಿದ್ದಳು. ಹೀಗಾಗಿ ಫಸಲು ಕೈಗೆ ಬಂದ್ರೆ ಈ ಬಾರಿ ಉತ್ತಮ ವರಮಾನ ಗ್ಯಾರಂಟಿ ಅಂದುಕೊಂಡಿದ್ದ ಅನ್ನದಾತನಿಗೆ ನಿನ್ನೆ ಪಕೃತಿಯ ಚಲ್ಲಾಟದಿಂದ ಬದುಕು ಬೀದಿಗೆ ಬರುವಂತಾಗಿದೆ. ಅಚ್ಚಳ್ಳಿ ರೈತ ಕುಟುಂಬಕ್ಕೆ ಸುಮಾರು 20 ಲಕ್ಷ ಹಾನಿಯಾಗಿದೆ.

ಬರೀ ಬಾಳೆ ಬೆಳೆ ಮಾತ್ರವಲ್ಲ ಹುಲಕೋಟಿ, ಶ್ಯಾಗೋಟಿ, ಹೊಸಳ್ಳಿ ಭಾಗದಲ್ಲಿ ಅಪಾರ ಮಾವು ಗಾಳಿಗೆ ನೆಲಕಚ್ಚಿದೆ. ಮಾವಿನ ಗಿಡಗಳು ನೆಲಕ್ಕುರುಳಿವೆ. ಮಾತ್ರವಲ್ಲ ಕಬ್ಬು ಕೂಡ ಬಿರುಗಾಳಿಗೆ ಸಿಕ್ಕು ಹಾಸಿಗೆ ಹಾಕಿದಂತಾಗಿದೆ.

ಹುಲಕೋಟಿ ಸಾವಯವ ಬಾಳೆಗೊನೆಗೆ ರಾಜ್ಯದಲ್ಲಿ ಭಾರೀ ಬೇಡಿಕೆ ಇದೆ. ಸ್ವಾದ ಮತ್ತು ಗುಣಮಟ್ಟದಲ್ಲಿ ಉತ್ಕೃಷ್ಟತೆ ಹೊಂದಿದೆ. ಹೀಗಾಗಿ ಭಾರಿ ಬೇಡಿಕೆ. ಇನ್ನೇನು ತಿಂಗಳಲ್ಲಿ ಬಾಳೆ ಕಟಾವಿಗೆ ಬಂದಿತ್ತು. ಅಷ್ಟರಲ್ಲೇ ಬಿರುಗಾಳಿ ಸಹಿತ ಮಳೆ ರೈತರ ಕನಸು ಮಣ್ಣುಪಾಲು ಮಾಡಿದೆ. ಆದ್ರೆ ಕಳೆದ ಐದಾರು ವರ್ಷಗಳಿಂದ ಸತತ ಬರಗಾಲಕ್ಕೆ ತುತ್ತಾದ್ದರಿಂದಾಗಿ ಬಾಳೆ ಮತ್ತು ಮಾವು ಬೆಳೆ ಉಳಿಸಿಕೊಳ್ಳುವುದೆ ದೊಡ್ಡ ಸವಾಲಾಗಿತ್ತು. ಆದ್ರೂ ಉತ್ತಮ ಆದಾಯ ಬರುತ್ತದೆ ಅಂದುಕೊಂಡು ಸಾಲ ಮಾಡಿ ಫಸಲು ಉಳಿಸಿಕೊಂಡಿದ್ದರು. ಆದ್ರೆ ಪಕೃತಿಯ ಮುನಿಸಿಗೆ ಬೆಳೆ ಮಣ್ಣು ಪಾಲಾಗಿ ರೈತರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಹಾನಿ ವಿಷಯ ತಿಳಿದ ತೋಟಗಾರಿಕೆ ಉಪನಿರ್ದೇಶಕ ಪ್ರದೀಪ್ ನೇತೃತ್ವದಲ್ಲಿ ಭೇಟಿ ಮಾಡಿ ಪರಿಶೀಲನೆ ಮಾಡಿದ್ದಾರೆ.

ಒಟ್ಟಿನಲ್ಲಿ ಉತ್ತರದ ಅನ್ನದಾತನಿಗೆ ಸವಾಲುಗಳು ಮುಗಿಯುವಂತೆ ಕಾಣುತ್ತಿಲ್ಲ. ಸದಾ ಒಂದಿಲ್ಲೊಂದು ಸಮಸ್ಯೆಯೊಂದಿಗೆ ಹೋರಾಡುತ್ತಿರೋ ರೈತರ ನೆರವಿಗೆ ಸರ್ಕಾರ ಕೂಡಲೇ ಧಾವಿಸಬೇಕಿದೆ. ಅಲ್ಲದೇ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ಜತೆ ನಿಂತು ನೋವಿಗೆ ಸ್ಪಂದಿಸಬೇಕಿದೆ.

Comments are closed.