ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಪ್ರದರ್ಶನ ನೀಡಿ ಮತ್ತೊಂದು ಅವಧಿಗೆ ಅಧಿಕಾರ ಹಿಡಿಯುವಲ್ಲಿ ಸಫಲವಾಗಿದೆ. ರಾಹುಲ್ ಗಾಂಧಿ ಅವರ ಆಕರ್ಷಕ ನ್ಯಾಯ್ ಯೋಜನೆಯ ಆಶ್ವಾಸನೆಯ ನಡುವೆಯೂ ದೇಶಾದ್ಯಂತ ಮೋದಿ ಅಲೆ ಎದ್ದು ಎನ್ಡಿಎಯನ್ನು ತಡ ಸೇರಿಸಿದೆ. ಈ ಚುನಾವಣೆಯಲ್ಲಿ ಅನೇಕ ಅಚ್ಚರಿಗಳಿವೆ. ಅದರಲ್ಲಿ ಪಶ್ಚಿಮ ಬಂಗಾಳದ ಫಲಿತಾಂಶವೂ ಒಂದು. ಮಮತಾ ಬ್ಯಾನರ್ಜಿ ಅವರ ತೃಣಮೂಲ ಪಕ್ಷ ಹಾಗೂ ಕಮ್ಯೂನಿಸ್ಟ್ ಪಕ್ಷಗಳ ಭದ್ರಕೋಟೆ ಎನಿಸಿರುವ ಈ ರಾಜ್ಯದ 42 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆದ್ದು ಎಲ್ಲರನ್ನೂ ಚಕಿತಗೊಳಿಸಿದೆ. ಮಮತಾ ಬ್ಯಾನರ್ಜಿ ಅವರ ಬಿಗಿಮುಷ್ಠಿಯಲ್ಲಿರುವ ಬಂಗಾಳದಲ್ಲಿ ಬಿಜೆಪಿಯ ಈ ಪರಿ ಸಾಧನೆಯನ್ನು ನಿರೀಕ್ಷಿಸಿದ್ದವರು ಹೆಚ್ಚು ಮಂದಿ ಇಲ್ಲ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಇಷ್ಟರ ಮಟ್ಟಕ್ಕೆ ಬೆಳೆಯಲು ಕಾರಣ ನೀಡುವ ಎರಡು ಪ್ರಮುಖ ವಾದಗಳಿವೆ. ಮೊದಲನೆಯದು, ನರೇಂದ್ರ ಮೋದಿ ಅಲೆ ದೀದಿ ಕೋಟೆಯನ್ನು ಘಾಸಿಗೊಳಿಸಿತು ಎಂಬ ವಾದ. ಎರಡನೆಯದು, ಮಮತಾ ಬ್ಯಾನರ್ಜಿ ಅವರ ಜನಪ್ರಿಯತೆ ಕುಂದುಹೋಗಿದೆ ಎಂಬುದು. ಈ ಎರಡೂ ಅಂಶಗಳು ಸ್ವಲ್ಪ ಪೂರಕವಾಗಿ ಬಿಜೆಪಿ ಪರ ಕೆಲಸ ಮಾಡಿರಬಹುದಾದರೂ ಅದಕ್ಕೂ ಮಿಗಿಲಾದ ಹಾಗೂ ಪ್ರಮುಖವಾದ ಬೇರೆ ಕಾರಣಗಳಿವೆ.
ಈಗ್ಗೆ ಮೂರ್ನಾಲ್ಕು ವರ್ಷಗಳಲ್ಲಿ ಬಿಜೆಪಿಯ ಪರವಾಗಿ ಇಲ್ಲಿ ಗಣನೀಯ ಪರಿವರ್ತನೆ ಆಗಿದ್ದು ಅನೇಕರ ಗಮನಕ್ಕೆ ಬಂದಿರುವುದಿಲ್ಲ. 2014ರಲ್ಲಿ ನರೇಂದ್ರ ಮೋದಿ ಅವರ ಪ್ರಬಲ ಅಲೆ ದೇಶವ್ಯಾಪಿ ಇದ್ದ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ದಕ್ಕಿದ್ದು ಕೇವಲ 2 ಸೀಟು ಮಾತ್ರ. ಅದಾದ ಬಳಿಕ ಪಂಚಾಯಿತಿ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯ ಸ್ಥಿತಿ ಇನ್ನೊಂದಿಷ್ಟು ಉತ್ತಮಗೊಂಡಿತೇ ಹೊರತು ಗಣನೀಯ ಎನ್ನುವ ಮಟ್ಟಕ್ಕೆ ಏರಲಿಲ್ಲ.
ಮಮತಾ ಬ್ಯಾನರ್ಜಿಗೆ ಹಿನ್ನಡೆಯಾಗಿದೆಯಾ?
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆದ್ದಿರುವುದ ಉತ್ತರ ಭಾಗ ಮತ್ತು ನೈಋತ್ಯ(South West) ಭಾಗಗಳಲ್ಲೇ. ಆದರೆ, ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷವು ಈ ಭಾಗಗಳಲ್ಲಿ ಅಷ್ಟೇ ಪ್ರಬಲವಾಗಿಲ್ಲ. ಕೋಲ್ಕತಾ ಹಾಗೂ ದಕ್ಷಿಣ ಭಾಗದ ಜಿಲ್ಲೆಗಳು ದೀದಿಯ ಭದ್ರಕೋಟೆಗಳು. ಇಲ್ಲಿ ಆ ಪಕ್ಷಕ್ಕೆ ಧಕ್ಕೆಯಾಗುವಂಥ ಫಲಿತಾಂಶ ಈ ಬಾರಿ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಹಿನ್ನಡೆಯಾಗುವಂಥ ಬೆಳವಣಿಗೆ ಇದೇನಲ್ಲ. ಹಾಗಾಗಿ, ಮಮತಾ ಬ್ಯಾನರ್ಜಿ ಅವರು ಈ ಫಲಿತಾಂಶದಿಂದ ಅಷ್ಟೇನೂ ಕಳವಳಗೊಂಡಿಲ್ಲ.
ಹಾಗಾದರೆ, ಬಿಜೆಪಿ ಇಷ್ಟೊಂದು ಸ್ಥಾನ ಗೆಲ್ಲಲು ಕಾರಣಗಳೇನಿರಬಹುದು? ಒಂದು, ಬಂಗಾಳದಲ್ಲಿ ಟಿಎಂಸಿಗೆ ಒಂದು ಪ್ರಬಲ ಪರ್ಯಾಯ ಶಕ್ತಿ ಇಲ್ಲದಿರುವುದು. ಇನ್ನೊಂದು, ಇಲ್ಲಿ ಮೂರ್ನಾಲ್ಕು ವರ್ಷಗಳಿಂದ ಬಿಜೆಪಿ ಮತ್ತು ಆರೆಸ್ಸೆಸ್ ಸಂಘಟನೆಯ ಕೆಲಸಗಳು ಚುರುಕುಗೊಂಡಿದ್ದು. ಮತ್ತೊಂದು, ಟಿಎಂಸಿಗೆ ಪರ್ಯಾಯವಾಗಬೇಕಿದ್ದ ಕಮ್ಯೂನಿಸ್ಟರು ತಮ್ಮ ಜವಾಬ್ದಾರಿಯನ್ನು ಪರೋಕ್ಷವಾಗಿ ಬಿಜೆಪಿಗೆ ವರ್ಗಾಯಿಸಿದ್ದು. ಮಗದೊಂದೆಂದರೆ, ರಾಷ್ಟ್ರೀಯ ಪೌರತ್ವ ಕಾನೂನು ಮೂಲಕ ಬಾಂಗ್ಲಾದಲ್ಲಿರುವ ವಿದೇಶೀಯರನ್ನು ಗುರುತಿಸಿ ಹೊರಕಳುಹಿಸುತ್ತೇವೆಂಬ ಸಂದೇಶವನ್ನು ಬಿಜೆಪಿ ಮುಟ್ಟಿಸಿದ್ದು.
ಬಿಜೆಪಿ ಗೆದ್ದಿರುವ ಉತ್ತರ ಮತ್ತು ನೈಋತ್ಯ ಭಾಗಗಳು ಎಡಪಕ್ಷಗಳ ಭದ್ರಕೋಟೆಯಾಗಿದ್ದಂತಹವು. ಇಲ್ಲಿಯೇ ಬಿಜೆಪಿ ಗೆದ್ದಿರುವುದು ಈ ಮೇಲಿನ ಅಂಶಗಳಿಗೆ ಪೂರಕವಾಗಿದೆ. ಕಮ್ಯೂನಿಸ್ಟ್ ಪಕ್ಷಗಳಿಗೆ ಸಾಂಪ್ರದಾಯಿಕವಾಗಿ ಬೀಳುತ್ತಿದ್ದ ಮತಗಳು ಈ ಬಾರಿ ಕಮಲ ಹಿಡಿದುಕೊಂಡಿವೆ. ಮಮತಾ ಬ್ಯಾನರ್ಜಿ ಅವರನ್ನು ಎದುರಿಸುವಷ್ಟು ಪ್ರಬಲ ಪರ್ಯಾಯ ಶಕ್ತಿಯಾಗಿ ಬಿಜೆಪಿಯು ತೋರಿಸಿಕೊಂಡಿತ್ತು. ಈ ರೀತಿಯ ವಾತಾರಣ ನಿರ್ಮಾಣ ಮಾಡಲು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಅವರ ಅವಿರತ ಶ್ರಮದ ಕೊಡುಗೆ ಇದೆ. ಹಾಗೆಯೇ, ಆರೆಸ್ಸೆಸ್ ಸಂಘಟನೆ ಇಲ್ಲೆಲ್ಲಾ ಅವ್ಯಾಹತವಾಗಿ ಜನ ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಕೆಲಸ ಮಾಡಿತು. ಇದರ ಪರಿಣಾಮವನ್ನು 2017ರ ಏಪ್ರಿಲ್ 5ರಂದು ರಾಮನವಮಿ ಆಚರಣೆಯಲ್ಲಿ ಕಾಣಬಹುದಾಗಿತ್ತು. ಬಂಗಾಳದಲ್ಲಿ ದುರ್ಗಾಪೂಜೆ ಪ್ರಮುಖವಾದುದು. ಆದರೆ, ಅಂದಿನ ರಾಮನವಮಿ ದಿನದಲ್ಲಿ ಬಂಗಾಳದ ಅನೇಕ ಭಾಗಗಳು ಕೇಸರೀಮಯಗೊಂಡಿದ್ದವು. ಸ್ವತಃ ಮಮತಾ ಬ್ಯಾನರ್ಜಿ ಅವರಿಗೇ ಅಚ್ಚರಿ ತಂದಿದ್ದವು. ತತ್ಪರಿಣಾಮವಾಗಿ ಅನೇಕ ತೃಣಮೂಲ ನಾಯಕರು ಖುದ್ದಾಗಿ ರಾಮನವಮಿ ಹಬ್ಬ ಆಚರಿಸಲು ಅಡಿ ಇಟ್ಟಿದ್ದು ಸುಳ್ಳಲ್ಲ. ಅಂದು ಸೃಷ್ಟಿಯಾದ ಪ್ರಬಲ ಕೇಸರಿ ಅಲೆಯು ಬಂಗಾಳದಲ್ಲಿ ತೃಣಮೂಲ ಪಕ್ಷಕ್ಕೆ ಪರ್ಯಾಯ ಶಕ್ತಿಯನ್ನು ಪೊಡಮೂಡಿಸಿತು.
ಇದರ ಜೊತೆಗೆ, ಅಸ್ಸಾಮ್ನಲ್ಲಿ ಎನ್ಡಿಎ ಸರಕಾರ ಜಾರಿಗೆ ತರುತ್ತಿರುವ ರಾಷ್ಟ್ರೀಯ ಪೌರತ್ವ ನೊಂದಣಿ ಯೋಜನೆಯು ಬಂಗಾಳದಲ್ಲಿ ಸಕಾರಾತ್ಮಕವಾಗಿ ಕೆಲಸ ಮಾಡಿರುವಂತಿದೆ. ಅಕ್ರಮ ಬಾಂಗ್ಲಾದೇಶೀ ವಲಸಿಗರ ಸಮಸ್ಯೆಯು ಪಶ್ಚಿಮ ಬಂಗಾಳದ ಸ್ಥಳೀಯರಿಗೆ ಒಳಗೊಳಗೇ ಬಾಧೆಯಾಗಿತ್ತು. ತಮ್ಮ ಅಳಲನ್ನು ಕೇಳುವ ಪ್ರಬಲ ಪಕ್ಷವಾಗಿ ಬಿಜೆಪಿಯು ಜನರ ಕಣ್ಣಿಗೆ ಕಂಡಿದೆ. ಜನರು ಬಿಜೆಪಿಯ ಕೈ ಹಿಡಿಯಲು ಇದೂ ಪ್ರಮುಖ ಕಾರಣವಾಗಿರಬಹುದು.
ಬಿಜೆಪಿ ಪ್ರವರ್ಧಮಾನಕ್ಕೆ ಬಂದು ತಾನು ರಾಜ್ಯದಲ್ಲಿ ತೃತೀಯ ಶಕ್ತಿಯಾಗಿ ಕೆಳ ತಳ್ಳಲ್ಪಟ್ಟಿರುವ ಕಮ್ಯೂನಿಸ್ಟರು ತಮ್ಮ ನೆಲೆಯನ್ನು ಹೇಗೆ ಕಂಡುಕೊಳ್ಳುತ್ತಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕು. ಕಮ್ಯೂನಿಸ್ಟ್ ಜಾಗದಲ್ಲಿ ತೃಣಮೂಲಕ್ಕೆ ವಿರುದ್ಧವಾಗಿ ಪರ್ಯಾಯ ಶಕ್ತಿಯಾಗಿ ಬೆಳೆದಿರುವ ಬಿಜೆಪಿಗೆ 2022ರ ವಿಧಾನಸಭಾ ಚುನಾವಣೆಯು ನಿಜವಾದ ಅಗ್ನಿಪರೀಕ್ಷೆಯಾಗಲಿದೆ. ಎರಡು ಅವಧಿ ಅಧಿಕಾರ ನಡೆಸಿರುವ ಮಮತಾ ಬ್ಯಾನರ್ಜಿ ವಿರುದ್ಧದ ಆಡಳಿತವಿರೋಧಿ ಅಲೆಯು ಬಿಜೆಪಿಗೆ ಎಷ್ಟರಮಟ್ಟಿಗೆ ಉಪಯೋಗವಾಗುತ್ತದೆ ಎಂಬುದನ್ನು ಕಾದುನೋಡಬೇಕು.
ಕೊನೆಯಲ್ಲಿ ಒಂದು ವಿಚಾರ: ಬಿಜೆಪಿಯ ಪೂರ್ವಾಶ್ರಮದ ಪಕ್ಷವಾದ ಜನಸಂಘವನ್ನು ಸ್ಥಾಪಿಸಿದ್ಧೇ ಶ್ಯಾಮ್ ಪ್ರಸಾದ್ ಮುಖರ್ಜಿ ಎಂಬ ಬಂಗಾಳಿ.
Comments are closed.