ಅಮೇರಿಕ : ಈಗೀಗ ಮೊಬೈಲ್ ಗೇಮ್, ನೆಟ್ ಚಾಟ್, ಸರ್ಚ್ ಅಂತಾ ಕಾಲ ಕಳೆಯುವ ಹುಡುಗರೇ ಹೆಚ್ಚು. ಈ ಜಮಾನನೇ ಹೀಗಿದೆ. ದೈಹಿಕ ಶ್ರಮ ಹೆಚ್ಚಾಗದ ಕಾರಣ ಬಾಲ್ಯದಲ್ಲೇ ಮಕ್ಕಳಿಗೆ ಬೊಜ್ಜು ಆವರಿಸಿಕೊಳ್ಳುತ್ತೆ. ಆದರೆ, ಇಲ್ಲೊಬ್ಬ ಪೋರ ತನ್ನ 52 ಕೆಜಿ ಹೆಚ್ಚುವರಿ ತೂಕವನ್ನ ತುಂಬಾ ಸಿಂಪಲಾಗಿ ಇಳಿಸಿದ್ದಾನೆ.
ದೇಹದ ತೂಕ ಇಳಿಸಲು ಅವನು ಮಾಡಿದ್ದು ಬರೀ ನಡಿಗೆ ಮಾತ್ರ.ನಿಮಗೆ ಇದು ಆಶ್ಚರ್ಯ ಅಂತಾ ಅನ್ನಿಸಬಹುದು. ಅಮೇರಿಕಾದ ಮೈಕಲ್ ವಾಟ್ಸನ್ ಎಂಬ ಬಾಲಕ ಈ ಸಾಧನೆ ಮಾಡಿ ಸ್ಲಿಮ್ ಆಗಿದ್ದಾನೆ.
ವಾಟ್ಸನ್ ಎರಡು ವರ್ಷದ ಹಿಂದೆ ಬರೋಬ್ಬರಿ 152 ಕೆಜಿ ತೂಕ ಮತ್ತು 6.4 ಅಡಿ ಎತ್ತರ ಹೊಂದಿದ್ದ. ಇದರಿಂದಾಗಿ ಸ್ನೇಹಿತರೆಲ್ಲ ದಢೂತಿ, ಡುಮ್ಮ, ಆಲೂ ಅಂತೆಲ್ಲಾ ಮೂದಲಿಸುತ್ತಿದ್ದರಂತೆ. ಜತೆಗೆ ತನ್ನ ಮೇಲೆ ತನಗೇ ವಿಶ್ವಾಸ ಹೊಂದಿರಲಿಲ್ಲ.ತನ್ನ ತೂಕದ ಬಗ್ಗೆ ತನಗೇ ಬೇಸರ ಉಂಟಾಗಿ ವಾಟ್ಸನ್ ಒಂದು ನಿರ್ಧಾರ ಮಾಡಿದ್ದ.
ನಿತ್ಯ ಶಾಲೆಗೆ ಇನ್ಮೇಲೆ ಕಾಲು ನಡಿಗೆಯಲ್ಲೇ ಹೋಗೋದಾಗಿ ಶಪಥಗೈದಿದ್ದ. ಅದರಂತೆ ನಿತ್ಯ ಶಾಲೆಗೆ ಹೋಗುವಾಗ ಮತ್ತು ಶಾಲೆಯಿಂದ ಮನೆಗೆ ಬರುವಾಗ 20 ನಿಮಿಷಗಳ ಕಾಲ ವಾಟ್ಸನ್ ಕಾಲು ನಡಿಗೆ ಮಾಡುತ್ತಿದ್ದ. ಜತೆಗೆ ಸಿಕ್ಕ ಸಿಕ್ಕಂಗೆ ತಿನ್ನೋದನ್ನೂ ಒಂದಿಷ್ಟು ಕಡಿಮೆ ಮಾಡಿದ.
ಇದೀಗ 18ರ ಇದೇ ಯುವಕ 52 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾನೆ. ವಾಟ್ಸನ್ ತನ್ನ ಪದವಿ ಶಿಕ್ಷಣವನ್ನು ಕೂಡ ಕಾಲು ನಡಿಗೆಯಲ್ಲೇ ಮುಗಿಸಬೇಕೆಂದು ನಿರ್ಧರಿಸಿದ್ದಾನಂತೆ. ಇಡುವ ಒಂದೊಂದು ಹೆಜ್ಜೆ ನಿಮ್ಮ ಆರೋಗ್ಯದಲ್ಲಿ ಹೇಗೆಲ್ಲ ಬದಲಾವಣೆ ತರುತ್ತೆ ಅನ್ನೋದಕ್ಕೆ ಇದೊಂದು ಒಳ್ಳೇ ಉದಾಹರಣೆ. ಯಾವುದೇ ಶ್ರಮವಿಲ್ಲದೇ ನಡಿಗೆಯ ಕಡೆಗೆ ಗಮನ ಹರಿಸಿ ದೈಹಿಕ ಕ್ಷಮತೆ ಹೆಚ್ಚಿಸಿಕೊಳ್ಳಬಹುದು ಅನ್ನೋದನ್ನ ಮೈಕಲ್ ಸಾಬೀತುಪಡಿಸಿದ್ದಾನೆ.