ಕರ್ನಾಟಕ

ಸಿದ್ದರಾಮಯ್ಯ ದುರಹಂಕಾರಿ, ಗುಂಡೂರಾವ್ ಫ್ಲಾಪ್ ಶೋ ಅಧ್ಯಕ್ಷ: ಕಾಂಗ್ರೆಸ್ ನಾಯಕರ ವಿರುದ್ಧವೇ ಟೀಕಾಸ್ತ್ರ ಪ್ರಯೋಗಿಸಿದ ರೋಷನ್ ಬೇಗ್

Pinterest LinkedIn Tumblr

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದುರಹಂಕಾರ ಹಾಗೂ ಫ್ಲಾಪ್ ಶೋ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಂದಾಗಿಯೇ ಈ ಬಾರಿ ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಫ್ಲಾಫ್​ ಶೋ ನೀಡಲಿದೆ ಎಂದು ಮಾಜಿ ಸಚಿವ ಶಾಸಕ ರೋಷನ್ ಬೇಗ್ ಭವಿಷ್ಯ ನುಡಿದಿದ್ದಾರೆ.

ಇಂದು ಪತ್ರಿಕಾಗೋಷ್ಠಿ ನಡೆಸಿ ಸ್ವಪಕ್ಷೀಯ ನಾಯಕರ ವಿರುದ್ಧವೇ ಟೀಕಾಸ್ತ್ರ ಪ್ರಯೋಗಿಸಿರುವ ರೋಷನ್ ಬೇಗ್, “ಚುನಾವಣೋತ್ತರ ಸಮೀಕ್ಷೆಗಳು ನಿಜವಾಗಲಿದೆ. ಎನ್​ಡಿಎ ಮೈತ್ರಿಕೂಟ ಮತ್ತೊಮ್ಮೆ ಬಹುಮತದ ಸರ್ಕಾರ ರಚಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಸಮೀಕ್ಷೆಯ ಕುರಿತು ನನಗೆ ಯಾವುದೇ ಆಶ್ಚರ್ಯವಿಲ್ಲ. ರಾಜ್ಯದಲ್ಲೂ ಕಾಂಗ್ರೆಸ್ ಅಧಃಪತನದತ್ತ ಸಾಗುತ್ತಿದೆ. ಇದಕ್ಕೆ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಅವರ ಕೆಟ್ಟ ನಿರ್ಧಾರಗಳು ಹಾಗೂ ಅಹಂಕಾರದ ನಡೆ ಕಾರಣ ಎಂದು ಕಿಡಿಕಾರಿದ್ದಾರೆ.

ಎಚ್​ಡಿಕೆ ಗೆ ಸರ್ಕಾರ ನಡೆಸಲು ಸಿದ್ದು ಬಿಡುತ್ತಿಲ್ಲ ; ಸಿದ್ದರಾಮಯ್ಯ ಅವರನ್ನು ದುರಹಂಕಾರಿ ಎಂದು ಜರಿದು ಕೆಂಡಕಾರಿರುವ ರೋಷನ್​ ಬೇಗ್, “ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 79 ಸ್ಥಾನ ಗಳಿಸಲು ಸಿದ್ದರಾಮಯ್ಯನವರೇ ನೇರ ಕಾರಣ. ಅವರು ಲಿಂಗಾಯತ ಧರ್ಮದ ವಿಚಾರಕ್ಕೆ ಕೈ ಹಾಕಿದ್ದು ಪಕ್ಷದ ಪಾಲಿಗೆ ದುಬಾರಿಯಾಗಿತ್ತು. ಈ ನಿರ್ಣಯದಿಂದ ಪಕ್ಷ 25 ಸ್ಥಾನಗಳನ್ನು ಕಳೆದುಕೊಂಡಿತ್ತು. ಇದೇ ಕಾರಣಕ್ಕೆ ಕಾಂಗ್ರೆಸ್​ಗೆ ಬಹುಮತ ಲಭ್ಯವಾಗಿರಲಿಲ್ಲ.

ಆದರೆ, ಫಲಿತಾಂಶದ ನಂತರ ಇವರೇ ಎಚ್​​ಡಿಕೆ ಮನೆ ಬಾಗಿಲಿಗೆ ಹೋಗಿ ಒಟ್ಟಿಗೆ ಸರ್ಕಾರ ರಚಿಸೋಣ, ನೀವೆ ಸಿಎಂ ಆಗಬೇಕೆಂದು ಕೇಳಿಕೊಂಡರು. ಆದರೆ ಸರ್ಕಾರ ರಚನೆಯಾದ ಬಳಿಕ ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಆಗ್ತೀನಿ ಅಂತ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಇದು ಸರಿಯಲ್ಲ” ಎಂದು ನೇರಾ ನೇರ ಕಿಡಿಕಾರಿದ್ದಾರೆ.

ಅಲ್ಲದೇ ಪಕ್ಷದಲ್ಲಿ ಅಲ್ಪ ಸಂಖ್ಯಾತರಿಗೆ ಸ್ಥಾನ ನೀಡುತ್ತಿಲ್ಲ. ಕ್ರಿಶ್ಚಿಯನ್ನರಿಗೆ ಕನಿಷ್ಟ ಮೂರು ಸ್ಥಾನ ನೀಡಬೇಕು ಆದರೆ ಒಂದೇ ಒಂದು ಸ್ಥಾನ ನೀಡಲ್ಲ. ಇನ್ನೂ ಮುಸ್ಲಿಂರಿಗೂ ಪಕ್ಷದಲ್ಲಿ ಸ್ಥಾನಮಾನ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ರೋಷನ್​ ಬೇಗ್ ವಿರುದ್ಧ ತಿರುಗಿ ಬಿದ್ದ ಕಾಂಗ್ರೆಸ್ 

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ವಿರುದ್ಧ ರೋಷನ್​ ಬೇಗ್ ಹೇಳಿಕೆಗೆ ಪಕ್ಷದ ಪ್ರಮುಖರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್, “ಕೆಲವರ ಅನಾವಶ್ಯಕ ಹೇಳಿಕೆಗೆ ಈಗಲೇ ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ. ಇನ್ನೂ ಚುನಾವಣೋತ್ತರ ಸಮೀಕ್ಷೆ ಕುರಿತು ರೋಷನ್​ ಬೇಗ್ ಈಗಲೇ ಹೇಳಿಕೆ ನೀಡುವ ಅಗತ್ಯ ಇರಲಿಲ್ಲ. ಮೇ.23ರವರೆಗೆ ಕಾದು ನೋಡಿ ನಂತರ ಮಾತನಾಡಬಹುದಿತ್ತು. ಮಾಧ್ಯಮಗಳ ಸಮೀಕ್ಷೆಗಳನ್ನು ಸುಳ್ಳು ಮಾಡುವ ರೀತಿ ಮೈತ್ರಿ ಪಕ್ಷ 18ಕ್ಕೂ ಅಧಿಕ ಸ್ಥಾನ ಗೆಲ್ಲಲಿದೆ” ಎಂದು ಭರವಸೆ ನೀಡಿದ್ದಾರೆ.

ಇನ್ನೂ ರೋಷನ್​ ಬೇಗ್ ವಿರುದ್ಧ ಕಿಡಿಕಾರಿರುವ ಸಚಿವ ಎಂಟಿಬಿ ನಾಗರಾಜ್, “ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ರೋಷನ್​ ಬೇಗ್ 5 ವರ್ಷ ಸಚಿವರಾಗಿದ್ದರು. ಕಾಂಗ್ರೆಸ್ ಪಕ್ಷ ಅವರನ್ನು ನಾಲ್ಕೈದು ಬಾರಿ ಸಚಿವರನ್ನಾಗಿ ಮಾಡಿದೆ. ಆದರೆ, ಈ ಬಾರಿ ಬೇರೆಯವರಿಗೂ ಅವಕಾಶ ನೀಡುವ ಸಲುವಾಗಿ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು. ಇಷ್ಟು ವರ್ಷ ಅಧಿಕಾರ ಅನುಭವಿಸಿದ ಅವರು ಇಷ್ಟು ಕ್ಷುಲ್ಲಕ ಕಾರಣಕ್ಕೆ ಪಕ್ಷದ ವಿರುದ್ಧ ಹೇಳಿಕೆ ನೀಡುವುದು ಸರಿಯಲ್ಲ” ಎಂದಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಕಿಡಿ
ರೋಷನ್​ ಬೇಗ್ ಹೇಳಿಕೆಗೆ ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸಹ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, “ಪಕ್ಷ ಎಂದಮೇಲೆ ಎಲ್ಲರಿಗೂ ಕೆಲವು ಅಸಮಾಧಾನವಿರುತ್ತದೆ. ಹಾಗೆಂದ ಮಾತ್ರಕ್ಕೆ ಎಲ್ಲವನ್ನೂ ಹೀಗೆ ಮಾಧ್ಯಮದ ಮುಂದೆ ಹೇಳಿಕೆ ನೀಡುತ್ತಾ ವಿವಾದ ಸೃಷ್ಟಿ ಮಾಡಬೇಕೆ. ಇದರಿಂದ ಪಕ್ಷದ ವರ್ಚಸ್ಸು ಹಾಗೂ ಘನತೆಗೆ ಹಾನಿಯಾಗುತ್ತದೆ. ಇದರ ಬದಲಿಗೆ ಏನೇ ಭಿನ್ನಾಭಿಪ್ರಾಯ ಇದ್ದರೂ ಪಕ್ಷದ ಹಿರಿಯ ನಾಯಕರ ಬಳಿ ಹೇಳಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಿತ್ತು. ರೋಷನ್ ಬೇಗ್ ಅವರ ಈ ಹೇಳಿಕೆ ನಿಜಕ್ಕೂ ಉದ್ಧಟತನದ ಹೇಳಿಕೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಮೈತ್ರಿ ಸರ್ಕಾರದಲ್ಲಿ ಈವರೆಗೆ ಯಾವುದೂ ಸರಿಯಿಲ್ಲ ಎಂಬ ಅಭಿಪ್ರಾಯ ಆಗಾಗ್ಗೆ ಹೊಗೆಯಾಡುತ್ತಲೇ ಇತ್ತು. ಸಿದ್ದು ಮತ್ತೆ ಸಿಎಂ ಎಂಬ ಘೋಷಣೆ ಅಲ್ಲಲ್ಲಿ ಮೊಳಗುತ್ತಾ ಎಚ್.ಡಿ. ಕುಮಾಸ್ವಾಮಿಯನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಇನ್ನೂ ಚುನಾವಣೋತ್ತರ ಸಮೀಕ್ಷೆಗಳು ನಿಜವಾದರೆ ಮೇ 23ರ ನಂತರ ಸರ್ಕಾರ ಉರುಳಲಿದೆ ಎಂದೇ ಹೇಳಲಾಗುತ್ತಿದೆ. ಇದೀಗ ಹಿರಿಯ ಕಾಂಗ್ರೆಸ್ ನಾಯಕ ರೋಷನ್​ ಬೇಗ್ ಹೇಳಿಕೆ ಮತ್ತೊಂದು ಸುತ್ತಿನ ವಿವಾದಕ್ಕೆ ಕಾರಣವಾಗಿದ್ದು, ರೋಷನ್​ ಬೇಗ್ ಪಕ್ಷವನ್ನು ತ್ಯಜಿಸುತ್ತಾರಾ ಎಂಬ ಪ್ರಶ್ನೆಯನ್ನು ಮುಂದಿಟ್ಟಿದೆ. ಮೇ 23ರ ನಂತರ ಈ ಎಲ್ಲಾ ಪ್ರಶ್ನೆಗಳಿಗೆ ನಿಖರ ಉತ್ತರ ಸಿಗಲಿದೆ.

Comments are closed.