ಅಂತರಾಷ್ಟ್ರೀಯ

ಪಾಕಿಸ್ತಾನದ ಪಾರ್ಲಿಮೆಂಟಿನಲ್ಲಿ ಅಧ್ಯಕ್ಷ ಸ್ಥಾನ ಪಡೆದ ಹಿಂದೂ ಮಹಿಳೆ!

Pinterest LinkedIn Tumblr


ಪಾಕಿಸ್ತಾನ ಸಂಸತ್ತಿನ ಮೇಲ್ಮನೆ ಅಧಿವೇಶನದಲ್ಲಿ ಅಧ್ಯಕ್ಷತೆವಹಿಸಿದ ಹಿಂದೂ ದಲಿತ ಸಮುದಾಯದ ಮೊದಲ ಮಹಿಳಾ ಸೆನೆಟರ್​ ಆಗಿ ಕೃಷ್ಣ ಕುಮಾರಿ ಕೊಹ್ಲಿ ಆಯ್ಕೆಯಾದರು. ಮಹಿಳಾ ದಿನಾಚರಣೆ ಪ್ರಯುಕ್ತ ಶುಕ್ರವಾರ ನಡೆದ ಅಧಿವೇಶನದಲ್ಲಿ ಕೃಷ್ಣ ಕುಮಾರಿ ಅವರಿಗೆ ಪಾಕ್ ಸಂಸತ್ ಅಧ್ಯಕ್ಷ ಸ್ಥಾನ ನೀಡುವ ಮೂಲಕ ವಿಶೇಷ ಗೌರವ ಸಲ್ಲಿಸಿದೆ.

ಮಹಿಳೆಯರ ದಿನವಾದ ಇಂದು (ಮಾರ್ಚ್​ 8) ನಮ್ಮ ಸಹೋದ್ಯೋಗಿ ಕೃಷ್ಣ ಕುಮಾರಿ ಕೊಹ್ಲಿಯವರಿಗೆ ಲೋಕಸಭೆಯ ಅಧಿವೇಶನದ ಸಭಾಪತಿ ಸ್ಥಾನ ನೀಡಲು ನಿರ್ಧರಿಸಿದ್ದೇವೆ ಎಂದು ಸೆನೆಟರ್ ಫೈಝಲ್ ಜಾವೇದ್ ಟ್ವೀಟ್ ಮಾಡಿ ತಿಳಿಸಿದ್ದರು. ಅದರಂತೆ 40ರ ಹರೆಯದ ಕೃಷ್ಣ ಕುಮಾರಿ ಸಭಾಪತಿ ಸ್ಥಾನ ಅಲಂಕರಿಸಿದ ಪಾಕ್​ನ ಮೊದಲ ಹಿಂದೂ ದಲಿತ ಮಹಿಳೆ ಎನಿಸಿಕೊಂಡಿದ್ದಾರೆ.

2018 ರ ಮಾರ್ಚ್​ನಲ್ಲಿ ಕೃಷ್ಣ ಕುಮಾರಿ ಕೊಹ್ಲಿ ಸಂಸದೆಯಾಗಿ ಚುನಾಯಿತರಾದರು. ಮುಸ್ಲಿಂ ಬಾಹುಳ್ಯವಿರುವ ಪಾಕಿಸ್ತಾನದಲ್ಲಿ ಕೃಷ್ಣ ಕುಮಾರಿ ಅನೇಕ ವರ್ಷಗಳಿಂದ ಜೀತ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದಾರೆ. ಸಿಂಧ್ ಪ್ರಾಂತ್ಯದ ಥಾರಿ ಸಮುದಾಯಕ್ಕೆ ಸೇರಿದ ಇವರು ಅನೇಕ ಹೋರಾಟಗಳಲ್ಲೂ ಮುಂಚೂಣಿ ವಹಿಸಿದ್ದರು.

ಸಂಸತ್ ಅಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ನಾನು ತುಂಬಾ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ ಎಂದು ಅಧಿವೇಶನವನ್ನು ಪ್ರಾರಂಭಿಸುವ ಮುನ್ನ ಕೃಷ್ಣ ಕುಮಾರಿ ಹೇಳಿದರು. ತಮ್ಮ 16ನೇ ವಯಸ್ಸಿನಲ್ಲೇ ವಿವಾಹಿತರಾಗಿದ್ದ ಕೃಷ್ಣ ಕುಮಾರಿ, 2013 ರಲ್ಲಿ ಸಿಂಧ್ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದರು. ಬಳಿಕ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯಲ್ಲಿ ಸಾಮಾಜಿಕ ಕಾರ್ಯಕರ್ತೆಯಾಗಿ ಸೇರಿದ ಅವರು, ಬರ್ನಾನಾದ ಯೂನಿಯನ್ ಕೌನ್ಸಿಲ್​ನ ಅಧ್ಯಕ್ಷರಾಗಿ ಆಯ್ಕೆಯಾದರು. ಮಹಿಳಾ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಪರವಾಗಿ ಧ್ವನಿಯೆತ್ತಿದ ಕೃಷ್ಣ ಕುಮಾರಿ ಅವರಿಗೆ ಪಾಕ್​ ಸಂಸತ್ತಿನಲ್ಲಿ ಸಿಕ್ಕಿರುವ ಗೌರವ ಅವರ ಹೋರಾಟದ ಮತ್ತೊಂದು ಮೈಲುಗಲ್ಲು ಎನ್ನಬಹುದು.

Comments are closed.