ಅಂತರಾಷ್ಟ್ರೀಯ

ಹಿಂದೂಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಪಾಕ್‌ ಸಚಿವ; ಸಚಿವ ಸ್ಥಾನದಿಂದ ವಜಾಗೊಳಿಸಿದ ಪಾಕಿಸ್ತಾನದ ಸರಕಾರ

Pinterest LinkedIn Tumblr

ಲಾಹೋರ್‌: ಹಿಂದೂ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಫಯಾಜುಲ್‌ ಹಸನ್‌ ಚೋಹನ್ ಅವರನ್ನು ಸಚಿವ ಸ್ಥಾನದಿಂದ ಪಾಕಿಸ್ತಾನದ ಪಂಜಾಬ್‌ ಸರಕಾರ ವಜಾಗೊಳಿಸಿದೆ.

ಚೋಹನ್ ವಿರುದ್ಧ ಪಂಜಾಬ್‌ ಸರಕಾರದ ಹಿರಿಯ ಸಚಿವರು ಮತ್ತು ಅಲ್ಪಸಂಖ್ಯಾತ ಹಿಂದೂ ಸಮುದಾಯದಿಂದ ತೀವ್ರ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪಂಜಾಬ್‌ ಮುಖ್ಯಮಂತ್ರಿ ಉಸ್ಮಾನ್‌ ಬುಜ್ದಾರ್‌ ಈ ಕ್ರಮಕೈಗೊಂಡಿದ್ದಾರೆ.

ಪುಲ್ವಾಮಾ ಉಗ್ರ ದಾಳಿಗೆ ಸಂಬಂಧಿಸಿದಂತೆ ಭಾರತದ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಫೆ.24ರಂದು ಲಾಹೋರ್‌ನಲ್ಲಿ ಪಂಜಾಬ್‌ ಸರಕಾರದ ಮಾಹಿತಿ ಮತ್ತು ಸಂಸ್ಕೃತಿ ಸಚಿವರಾಗಿದ್ದ ಪಾಕಿಸ್ತಾನ್‌ ತೆಹ್ರಿಕಿ ಇನ್ಸಾಫ್‌(ಪಿಟಿಐ) ಪಕ್ಷದ ನಾಯಕ ಚೋಹನ್, ”ಹಿಂದೂಗಳೆಂದರೆ ಗೋಮೂತ್ರ ಕುಡಿದವರು,” ಎಂದು ಹೇಳಿಕೆ ನೀಡಿದ್ದರು.

ಚೋಹನ್ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಂಪುಟದಿಂದ ಅವರನ್ನು ಕೈಬಿಡುವಂತೆ ಒತ್ತಾಯಿಸಿ ಅಭಿಯಾನ ನಡೆಯಿತು. ಈ ನಡುವೆ ತಮ್ಮ ಹೇಳಿಕೆಗೆ ಚೋಹನ್ ಅವರು ಹಿಂದೂ ಸಮುದಾಯದ ಕ್ಷಮೆ ಕೋರಿದ್ದಾರೆ.

”ಚೋಹನ್ ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಯಾವುದೇ ಧರ್ಮದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವ ಹಕ್ಕು ಯಾರಿಗೂ ಇಲ್ಲ. ಪಾಕಿಸ್ತಾನದ ಏಳಿಗೆಗಾಗಿ ಹಿಂದೂ ಸಮುದಾಯದವರು ತ್ಯಾಗ ಮಾಡಿದ್ದಾರೆ. ಜನಾಂಗೀಯ ದ್ವೇಷವನ್ನು ಹರಡುವ ಯಾವುದೇ ಅಂಶವನ್ನು ನಾವು ಸಹಿಸಲು ಸಾಧ್ಯವಿಲ್ಲ,” ಎಂದು ಪಾಕ್‌ ಮಾನವ ಹಕ್ಕುಗಳ ಸಚಿವೆ ಶಿರಿನ್‌ ಮಜರಿ ಟ್ವೀಟ್‌ ಮಾಡಿದ್ದಾರೆ.

ಪಾಕಿಸ್ತಾನದಲ್ಲಿ ಹಿಂದೂ ಜನಾಂಗ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿದೆ.ಅಧಿಕೃತ ಮಾಹಿತಿ ಪ್ರಕಾರ 75 ಲಕ್ಷ ಹಿಂದೂಗಳು ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ. ಆದರೆ 90 ಲಕ್ಷಕ್ಕೂ ಹೆಚ್ಚು ಹಿಂದೂಗಳು ದೇಶದಲ್ಲಿದ್ದಾರೆ ಎಂದು ಸಮುದಾಯದ ನಾಯಕರು ಹೇಳುತ್ತಾರೆ. ಹೆಚ್ಚಿನ ಸಂಖ್ಯೆಯ ಹಿಂದೂಗಳು ಪಂಜಾಬ್‌ ಪ್ರಾಂತ್ಯದಲ್ಲಿ ನೆಲೆಸಿದ್ದಾರೆ.

Comments are closed.