ಕರಾವಳಿ

ಹೆಮ್ಮಾಡಿ ಮೀನು ಮಾರುವ ಮಹಿಳೆಯ ಕುತ್ತಿಗೆ ಹಿಸುಕಿ ಕೊಲೆಯೆಂಬುದು ಮರಣೋತ್ತರ ಪರೀಕ್ಷೆ ವರದಿಯಿಂದ ದೃಢ

Pinterest LinkedIn Tumblr

ಕುಂದಾಪುರ: ಮಾರ್ಚ್ 1ರಂದು ನಡೆದಿದ್ದ ಹೆಮ್ಮಾಡಿ ಸಮೀಪದ ನಿವಾಸಿ ಗುಲಾಬಿ(55) ಎನ್ನುವರ ಅಸಹಜ ಸಾವು ಪ್ರಕರಣ ಕೊಲೆ ಎಂಬುದಾಗಿ ವೈದ್ಯಕೀಯ ಪರೀಕ್ಷೆಯ ವರದಿಯಿಂದ ದೃಢಪಟ್ಟಿದೆ.

ಗುಲಾಬಿ ಅವರನ್ನು ಕತ್ತು ಹಿಸುಕಿ, ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿದುಬಂದಿದ್ದು, ಅದರಂತೆ ಪೊಲೀಸರು ಗುಲಾಬಿ ಅಸಹಜ ಸಾವಿನ ಪ್ರಕರಣವನ್ನು ಕೊಲೆ ಪ್ರಕರಣವಾಗಿ ದಾಖಲಿಸಿಕೊಂಡಿದ್ದಾರೆ.

ಪತಿ ನಿಧನದ ಬಳಿಕ ಒಬ್ಬಂಟಿಯಾಗಿ ವಾಸವಿದ್ದ ಗುಲಾಬಿ ಅಂದು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದರು. ಅವರು ಧರಿಸಿದ್ದ ಚಿನ್ನಾಭರಣಗಳು ಇಲ್ಲದ ಹಿನ್ನೆಲೆಯಲ್ಲಿ ಸ್ಥಳೀಯರು ಇದೊಂದು ಕೊಲೆಯೆಂಬ ಶಂಕೆ ವ್ಯಕ್ತಪಡಿಸಿದ್ದರು. ಗುಲಾಬಿಯ ನಿತ್ಯದ ದಿನಚರಿ ತಿಳಿದವರೇ ಈ ಕೊಲೆ ನಡೆಸಿರುವ ಮಾತುಗಳು ಕೇಳಿಬಂದಿತ್ತು. ಸೋಮವಾರ ರಾತ್ರಿ ಮರಣೋತ್ತರ ಪರೀಕ್ಷಾ ವರದಿ ಪೊಲೀಸರ ಕೈಸೇರಿದ್ದು ಗುಲಾಬಿಯ ಕತ್ತು ಹಿಸುಕಿ ಉಸಿರುಗಟ್ಟಿ ಸಾಯಿಸಲಾಗಿದೆ ಎಂಬುದು ಬೆಳಕಿಗೆ ಬಂದಿದ್ದು ಇದೀಗ ಈ ಪ್ರಕರಣ ಮಹತ್ತರ ತಿರುವು ಪಡೆದಂತಾಗಿದೆ.

ಗುಲಾಬಿ ನಿಗೂಢ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಬಡ್ಡಿ ವ್ಯವಹಾರ ನಡೆಸುತ್ತಿದ್ದಳೆನ್ನಲಾದ ಗುಲಾಬಿ ಕೊಲೆಯು ಹಣಕಾಸಿನ ವಹಿವಾಟಿನ ಹಿನ್ನೆಲೆ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಕೆಎಂಸಿ ಆಸ್ಪತ್ರೆಯಲ್ಲಿ ನಡೆಸಿದ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಂದಿರುವ ಬಗ್ಗೆ ದೃಡಪಟ್ಟಿದೆ. ಈವರೆಗೂ ಹಲವು ಶಂಕಿತ ವ್ಯಕ್ತಿಗಳ ವಿಚಾರಣೆ ನಡೆಸಲಾಗಿದ್ದು ವಿವಿಧ ಆಯಾಮಗಳಲ್ಲಿ ತನಿಖೆ ಸಾಗಿದೆ ಎಂದು ಕುಂದಾಪುರ ಡಿವೈಎಸ್ಪಿ ಬಿ.ಪಿ. ದಿನೇಶ್ ಕುಮಾರ್ ತಿಳಿಸಿದ್ದಾರೆ.

Comments are closed.