ಅಂತರಾಷ್ಟ್ರೀಯ

ಮಸೂದ್‌ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸಲು ಪಾಕ್ ಒಪ್ಪಿಗೆ!

Pinterest LinkedIn Tumblr


ಇಸ್ಲಾಮಾಬಾದ್: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆ ಪಾಕ್ ನೆಲದಲ್ಲಿ ನಡೆಸಿದ ಏರ್ ಸ್ಟ್ರೈಕ್ ನಂತರ ಜಾಗತಿಕ ಮಟ್ಟದಲ್ಲಿ ಏಕಾಂಗಿಯಾಗಿರುವ ಪಾಕಿಸ್ತಾನ ಈಗ ತನ್ನ ಮಾನ ಉಳಿಸಿಕೊಳ್ಳಲು ಉಗ್ರ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ ಎಂದು ವರದಿಯಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋಗಿರುವ ಮಾನ ಕಾಪಾಡಿಕೊಳ್ಳಲು ತನ್ನ ನೆಲದಲ್ಲಿ ಬೀಡು ಬಿಟ್ಟಿರುವ ಉಗ್ರ ಸಂಘಟನೆಗೆಳು ಹಾಗೂ ಅದರ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಹೆಸರನ್ನು ಜಾಗತಿಕ ಭಯೋತ್ಪಾದಕನ ಪಟ್ಟಿಗೆ ಸೇರಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಹೊಸ ಪ್ರಸ್ತಾಪನೆಯನ್ನು ಪಾಕಿಸ್ತಾನ ಬೆಂಬಲಿಸಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಭಾರತ ಮತ್ತು ಪಾಕಿಸ್ತಾನ ವಾಯು ಸಂಘರ್ಷದ ಬಳಿಕ ಅಜರ್ ಹೆಸರನ್ನು ಜಾಗತಿಕ ಉಗ್ರನ ಪಟ್ಟಿಗೆ ಸೇರಿಸಲು ಭದ್ರತಾ ಮಂಡಳಿಯ ಐದು ಕಾಯಂ ಸದಸ್ಯ ರಾಷ್ಟ್ರಗಳ ಪೈಕಿ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ಹೊಸದಾಗಿ ಪ್ರಸ್ತಾವನೆ ಸಲ್ಲಿಸಿವೆ.
ಈ ಪ್ರಸ್ತಾವನೆಗೆ ಎಂದಿನಂತೆ ಚೀನಾ ವಿರೋಧಿಸಿದೆ. ಆದರೆ ರಷ್ಯಾ ಬೆಂಬಲಿಸುವ ಮಾತನಾಡಿದೆ. ಪ್ರಸ್ತಾವನೆಯನ್ನು ವಿರೋಧಿಸುವ ನಿರ್ಧಾರದಿಂದ ಹಿಂದೆ ಸರಿದು ಅಂತಾರಾಷ್ಟ್ರೀಯ ಸಮುದಾಯದಲ್ಲಿ ತನ್ನ ಮಾನ ಉಳಿಸಿಕೊಳ್ಳಲು ಪಾಕಿಸ್ತಾನ ಮುಂದಾಗಿದೆ ಎನ್ನಲಾಗಿದೆ. ಈ ಪ್ರಸ್ತಾನವೆ ಅಂಗೀಕಾರಗೊಂಡರೆ ಅಜರ್ ನ ವಿದೇಶ ಪ್ರಯಾಣಕ್ಕೆ ಕಡಿವಾಣ ಬೀಳಲಿದೆ. ಅವನ ಸಂಘಟನೆಗೆ ಸೇರಿದ ಆಸ್ತಿಗಳನ್ನು ಹಾಗೂ ಶಸ್ತ್ರಾಸ್ತ್ರಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅನುಕೂಲವಾಗಲಿದೆ.

Comments are closed.