ಅಂತರಾಷ್ಟ್ರೀಯ

ಪಂದ್ಯದ ನಂತರ ಕ್ರೀಡಾಂಗಣದಲ್ಲಿ ಹೊಡೆದಾಡಿಕೊಂಡ ಅಭಿಮಾನಿಗಳು!

Pinterest LinkedIn Tumblr


ಆಸ್ಟ್ರೇಲಿಯಾದ ಕ್ರಿಕೆಟ್​ ಲೀಗ್​ ಬಿಗ್​ ಬ್ಯಾಶ್​​ನಲ್ಲಿ ಅಭಿಮಾನಿಗಳು ಹೊಡೆದಾಡಿಕೊಂಡ ಘಟನೆ ನಡೆದಿದೆ. ಅಡಿಲೇಡ್​ ಸ್ಟ್ರೈಕರ್ಸ್​ ಹಾಗೂ ಮೆಲ್ಬೋರ್ನ್​ ಸ್ಟಾರ್ಸ್​ ನಡುವಿನ ಪಂದ್ಯದ ಬಳಿಕ ಇಂತಹದೊಂದು ಅಹಿತಕರ ಘಟನೆಗೆ ಓವಲ್​ ಸ್ಟೇಡಿಯಂ ಸಾಕ್ಷಿಯಾಯಿತು.

ಶುಕ್ರವಾರ ಅಡಿಲೇಡ್​ ಸ್ಟ್ರೈಕರ್ಸ್​ ಮತ್ತು ಮೆಲ್ಬೋರ್ನ್​ ಸ್ಟಾರ್ಸ್​ ನಡುವೆ ರೋಚಕ ಪಂದ್ಯ ನಡೆದಿತ್ತು. ಈ ಪಂದ್ಯವನ್ನು ಟ್ರಾವಿಸ್ ಹೆಡ್​ ನೇತೃತ್ವದ ಅಡಿಲೇಡ್ ತಂಡ​ 41 ರನ್​ಗಳಿಂದ ಗೆದ್ದುಕೊಂಡಿದೆ. ಇದರ ಬೆನ್ನಲ್ಲೇ ಗ್ಯಾಲರಿಯಲ್ಲಿದ್ದ ಅಭಿಮಾನಿಗಳ ನಡುವೆ ಕಾದಾಟ ಆರಂಭವಾಗಿದೆ.

ನಿಕ್ ಮೆಂಡಿನ್ಸನ್​ ಮುನ್ನಡೆಸಿದ್ದ ಮೆಲ್ಭೋರ್ನ್​ ತಂಡವನ್ನು ಕಟ್ಟಿ ಹಾಕಲು ರಶೀದ್​ ಖಾನ್​ರಂತಹ ಸ್ಟಾರ್ ಬೌಲರ್​ಗಳನ್ನು ಒಳಗೊಂಡಿರುವ ಅಡಿಲೇಡ್​ ತಂಡ ಯಶಸ್ವಿಯಾಗಿತ್ತು. ಈ ಜಯವನ್ನು ಆಸ್ವಾದಿಸುತ್ತಾ ಗ್ಯಾಲರಿಯಲ್ಲಿದ್ದ ಅಭಿಮಾನಿಯೊಬ್ಬರು ವೀಡಿಯೊ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ರೊಚ್ಚಿಗೆದ್ದ ಮತ್ತೊಬ್ಬ ಅಭಿಮಾನಿಯು ವೀಡಿಯೊ ಮಾಡುತ್ತಾ ತಂಡದ ಪರ ಘೋಷಣೆ ಕೂಗುತ್ತಿದ್ದ ಅಭಿಮಾನಿಯನ್ನು ಥಳಿಸಿದ್ದಾನೆ.

ಸ್ಟೇಡಿಯಂನಲ್ಲೇ ಮಾರಾಮಾರಿಗೆ ಇಳಿದ ಇಬ್ಬರು ಅಭಿಮಾನಿಗಳನ್ನು ಇತರರಿಗೆ ನಿಯಂತ್ರಿಸಲಾಗಲಿಲ್ಲ. ಕೂಡಲೇ ಸ್ಥಳಕ್ಕಾಗಮಿಸಿದ ಭದ್ರತಾ ಸಿಬ್ಬಂದಿಗಳು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಸೌತ್ ಆಸ್ಟ್ರೇಲಿಯಾ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಈ ಹೊಡೆದಾಟದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅತ್ಯುತ್ತಮ ಕ್ರಿಕೆಟ್​ ಅಭಿಮಾನಿಗಳನ್ನು ಹೊಂದಿರುವ ಆಸ್ಟ್ರೇಲಿಯಾದಲ್ಲಿ ಇಂತಹ ಘಟನೆ ನಡೆದಿರುವ ದುರದೃಷ್ಟಕರ ಎಂದು ಆಸ್ಟ್ರೇಲಿಯಾದ ಪತ್ರಿಕೆಗಳು ಈ ಅಹಿತಕರ ಘಟನೆಯನ್ನು ಖಂಡಿಸಿದೆ.

Comments are closed.