ರಾಷ್ಟ್ರೀಯ

ಉತ್ತರಪ್ರದೇಶದಲ್ಲಿ ಕಾಂಗ್ರೆಸ್​ ಏಕಾಂಗಿ ಸ್ಪರ್ಧೆ: ರಾಹುಲ್ ಗಾಂಧಿ ಘೋಷಣೆ

Pinterest LinkedIn Tumblr


ನವದೆಹಲಿ: ಉತ್ತರಪ್ರದೇಶದಲ್ಲಿ ಎಸ್​ಪಿ ಮತ್ತು ಬಿಎಸ್​ಪಿ ಮೈತ್ರಿ ಮಾಡಿಕೊಂಡಿದ್ದರಿಂದ ಬಿಜೆಪಿ ಮತ್ತು ಕಾಂಗ್ರೆಸ್​ಗೆ ಭಾರೀ ಹೊಡೆತವುಂಟಾಗಿದೆ. ಇದೀಗ, ರಾಹುಲ್ ಗಾಂಧಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಏಕಾಂಗಿಯಾಗಿ 80 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದಾರೆ.

ಮಾಯಾವತಿ ಮತ್ತು ಅಖಿಲೇಶ್​ ಯಾದವ್​ ನಿನ್ನೆ ಸುದ್ದಿಗೋಷ್ಠಿ ನಡೆಸಿ ಈ ಬಾರಿಯ ಚುನಾವಣೆಯಲ್ಲಿ ಎಸ್​ಪಿ ಹಾಗೂ ಬಿಎಸ್​ಪಿ ಒಂದಾಗಿ ಸ್ಪರ್ಧೆಗಳಿಯಲಿದೆ. ಚುನಾವಣೆಯಲ್ಲಿ ಜಯಭೇರಿ ಬಾರಿಸುವ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ಕೆಳಕ್ಕೆ ಇಳಿಸುವುದೇ ಇದರ ಹಿಂದಿನ ಉದ್ದೇಶ ಎಂದಿದ್ದರು. ಕಾಂಗ್ರೆಸ್​ನೊಂದಿಗೆ ಮಹಾಮೈತ್ರಿ ಮಾಡಿಕೊಳ್ಳಲು ಮೊದಲು ಒಪ್ಪಿಗೆ ಸೂಚಿಸಿದ್ದ ಈ ಎರಡು ಪಕ್ಷಗಳ ನಾಯಕರು ನಂತರ ಭಿನ್ನಾಭಿಪ್ರಾಯಗಳ ಕಾರಣದಿಂದ ಹೊರಬಂದಿದ್ದರು.

ದೇಶದ ಅಧಿಕಾರದ ಚುಕ್ಕಾಣಿ ಹಿಡಿಯುವವರು ಯಾರು ಎಂಬುದಕ್ಕೆ ನಿರ್ಣಾಯಕ ಸ್ಥಾನ ವಹಿಸಲಿದೆ ಎಂದೇ ಹೇಳಲಾಗುವ ಅತಿಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್​ ಈ ಬಾರಿ ಏಕಾಂಗಿ ಹೋರಾಟ ನಡೆಸಲಿದೆ. ಇದಕ್ಕಾಗಿ ಫೆಬ್ರವರಿಯಲ್ಲಿ 13 ರ್ಯಾಲಿಗಳನ್ನು ನಡೆಸಲು ಯೋಜನೆ ರೂಪಿಸಿರುವುದಾಗಿ ರಾಹುಲ್ ಗಾಂಧಿ ತಿಳಿಸಿದ್ದಾರೆ.

ಉತ್ತರಪ್ರದೇಶದ ಜನರಿಗಾಗಿ ಹಲವು ಯೋಜನೆಗಳನ್ನು ತರಲು ಯೋಚಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈಗಾಗಲೇ ಹಿರಿಯ ಕಾಂಗ್ರೆಸ್​ ನಾಯಕ ಗುಲಾಂ ನಬಿ ಆಜಾದ್​ ಮತ್ತು ಉತ್ತರಪ್ರದೇಶದ ಕಾಂಗ್ರೆಸ್​ ಉಸ್ತುವಾರಿ ರಾಜ್​ ಬಹದ್ದೂರ್ ಅವರೊಂದಿಗೆ ಮಾತುಕತೆ ನಡೆಸಿ ಯೋಜನೆ ಅಂತಿಮಗೊಳಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ಎದುರಾಳಿಗಳು ಎಂಬ ವಿಷಯ ಹೊಸದೇನಲ್ಲ. ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಯಾವೆಲ್ಲ ಪಕ್ಷಗಳು ಕೈಜೋಡಿಸುತ್ತವೆಯೋ ಅವುಗಳಿಗೆ ನಮ್ಮ ಪಕ್ಷದೊಳಗೆ ಸದಾ ಸ್ವಾಗತವಿದೆ ಎಂದಿದ್ದಾರೆ.

ಬಿಎಸ್​ಪಿ ನಾಯಕಿ ಮಾಯಾವತಿ ಹಾಗೂ ಎಸ್​ಪಿ ನಾಯಕ ಅಖಿಲೇಶ್​ ಯಾದವ್​ ಅವರಿಗೆ ತಮಗೆ ಸರಿ ಎನಿಸಿದ್ದನ್ನು ಮಾಡಲು ಪೂರ್ತಿ ಸ್ವಾತಂತ್ರ್ಯವಿದೆ. ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾವು ಗೌರವಿಸುತ್ತೇವೆ. ಆದರೆ, ಈ ರೀತಿಯ ನಿರ್ಧಾರ ತೆಗೆದುಕೊಳ್ಳುವ ಮೂಲಕ ಅವರು ಕಾಂಗ್ರೆಸ್​ ಪಕ್ಷವನ್ನು ಕಡೆಗಣಿಸಿದ್ದಾರೆ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ರಾಹುಲ್​ ಗಾಂಧಿ ಹೇಳಿದ್ದರು.

Comments are closed.