ಕರ್ನಾಟಕ

ದೇವೇಗೌಡರ ಮೂರನೇ ಕುಡಿ ರಾಜಕೀಯ ಪ್ರವೇಶ ಅಂತಿಮ; ಹಾಸನದಿಂದ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ

Pinterest LinkedIn Tumblr


ಹಾಸನ: ಬಹುವರ್ಷಗಳಿಂದ ದೇವೇಗೌಡರ ಕುಟುಂಬದಲ್ಲಿ ನಡೆಯುತ್ತಿದ್ದ ಮೊಮ್ಮಕ್ಕಳ ರಾಜಕೀಯ ಪ್ರವೇಶ ವಿಚಾರಕ್ಕೆ ಇಂದು ಅಧಿಕೃತವಾಗಿ ತೆರೆ ಬಿದ್ದಿದೆ. ನಿರೀಕ್ಷೆಯಂತೆ ದೇವೇಗೌಡರ ಮೊಮ್ಮಗ ಹಾಗೂ ಸಚಿವ ರೇವಣ್ಣ ಅವರ ಮಗ ಪ್ರಜ್ವಲ್ ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ.

ಇಂದು ನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆ ವಿಚಾರವನ್ನು ಪಕ್ಷದ ವರಿಷ್ಠ ದೇವೇಗೌಡರು ಅಂತಿಮಗೊಳಿಸಿದರು. ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಅಭ್ಯರ್ಥಿಯಾಗಿ ಹಾಸನ ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡಲಿದ್ದಾರೆ.

ತಮ್ಮ ಮೊಮ್ಮಗನಿಗೆ ರಾಜಕೀಯ ಪ್ರವೇಶಕ್ಕೆ ವೇದಿಕೆ ಕಲ್ಪಿಸಿಕೊಡುವ ಸಲುವಾಗಿಯೇ ಇಂದು ಸಮಾವೇಶ ಆಯೋಜಿಸಲಾಗಿತ್ತು. ನನ್ನ ಉತ್ತರಾಧಿಕಾರಿ ಪ್ರಜ್ವಲ್ ರೇವಣ್ಣ ಎಂದು ದೇವೇಗೌಡರು ಈ ಹಿಂದೆಯೇ ಘೋಷಿಸಿದ್ದರು. ಅದರಂತೆ ಮೊಮ್ಮಗನ ರಾಜಕೀಯ ಪ್ರವೇಶಕ್ಕೆ ಈಗಿನಿಂದಲೇ ಗೌಡರು ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ.

ಹಾಸನದಿಂದ ಪ್ರಜ್ವಲ್​ ಸ್ಪರ್ಧೆ ಮಾಡುತ್ತಿರುವುದರಿಂದ ದೇವೇಗೌಡರು ಈಗ ಅನಿವಾರ್ಯವಾಗಿ ಬೇರೆ ಕ್ಷೇತ್ರವನ್ನು ನೋಡಿಕೊಳ್ಳಲೇಬೇಕು. ಆದರೆ, ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದಾರಾ ಅಥವಾ ಸ್ಪರ್ಧೆ ಮಾಡಿದರೂ ಯಾವ ಕ್ಷೇತ್ರದಿಂದ ಎಂಬ ಕುತೂಹಲ ಎಲ್ಲರಲ್ಲೂ ಇದ್ದು, ಇದನ್ನು ದೇವೇಗೌಡ ಅವರೇ ತಿಳಿಸಬೇಕಿದೆ.

Comments are closed.