ಕರ್ನಾಟಕ

ಅಂಬಿ ಸ್ಮರಣೆ ಕಾರ್ಯಕ್ರಮಕ್ಕೆ ದೇವೇಗೌಡ, ಕುಮಾರಸ್ವಾಮಿ ಗೈರು; ಅಸಮಾಧಾನ ವ್ಯಕ್ತಪಡಿಸಿದ ಮಂಡ್ಯ ಜನ!

Pinterest LinkedIn Tumblr


ಮಂಡ್ಯ: ಅಂಬರೀಷ್​ ಅವರ ಪುಣ್ಯ ಸ್ಮರಣೆ ಹಾಗೂ ಶ್ರದ್ಧಾಂಜಲಿ ಅರ್ಪಿಸಲು ಶನಿವಾರ ಕರ್ನಾಟಕ ಅಂಬರೀಶ್​ ಅಭಿಮಾನಿಗಳ ಸಂಘ ಸಕ್ಕರೆ ನಗರಿಯಲ್ಲಿ ‘ಅಂಬಿ ನುಡಿ ನಮನ’ ಕಾರ್ಯಕ್ರಮವನ್ನು ಏರ್ಪಡಿಸಿತ್ತು.

ರಾಜಕೀಯ ಗಣ್ಯರು ಸೇರಿದಂತೆ ಚಲನಚಿತ್ರ ಗಣ್ಯರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಆದರೆ, ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ, ಅವರ ಹಾಗೂ ದೇವೇಗೌಡರ ಗೈರು ಎದ್ದುಕಾಣುತ್ತಿತ್ತು. ಅವರ ಈ ನಡೆ ಮಂಡ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಅಂಬರೀಶ್​ ನಿಧನವಾದಾಗ ಅವರಿಗೆ ಸರ್ಕಾರದ ಸಕಲ ಗೌರವ ನೀಡಿ, ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಕುಮಾರಸ್ವಾಮಿ ಇಂದು ಅಂಬರೀಶ್ ತವರು ಕ್ಷೇತ್ರದಲ್ಲಿ ನಡೆದ ಅಂಬಿ ಸ್ಮರಣೆಯ ಕಾರ್ಯಕ್ರಮಕ್ಕೆ ಗೈರಾಗಿರುವುದರಿಂದ ಹಿಂದೆ ರಾಜಕೀಯ ಲೆಕ್ಕಾಚಾರದ ಮಾತುಗಳು ಕೇಳಿ ಬರುತ್ತಿವೆ.

ಅಂಬರೀಷ್​​ ನಿಧನದಿಂದ ತೆರವಾಗಿರುವ ಮಂಡ್ಯ ನಾಯಕರ ಪಟ್ಟಕ್ಕೆ ಈಗಾಗಲೇ ಪೈಪೋಟಿ ಆರಂಭವಾಗಿದೆ. ಅಂಬರೀಷ್​ ಮಗನೆ ಇಲ್ಲಿನ ಜನರ ನಾಯಕ. ಅಭಿಷೇಕ್​ ರಾಜಕೀಯಕ್ಕೆ ಇಳಿಯಬೇಕು ನಾವು ಅವರ ಬೆನ್ನಿಗೆ ನಿಂತಿದ್ಧೇವೆ ಎಂದು ಇಲ್ಲಿನ ಜನರು ಈಗಾಗಲೇ ಬಹಿರಂಗವಾಗಿ ತಿಳಿಸಿದ್ದಾರೆ. ಅಲ್ಲದೇ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಕೂಡ ನಡೆಯುತ್ತಿದೆ. ಅಭಿಷೇಕ್​ಗೆ ತೋರುತ್ತಿರುವ ಪ್ರೀತಿ ಈಗ ಜೆಡಿಎಸ್​ ದಳಪತಿಗಳಲ್ಲಿ ಸಣ್ಣ ಕಂಪನವನ್ನು ಮೂಡಿಸಿದೆ.

ಮೊಮ್ಮಗನಿಗಾಗಿ ತಮ್ಮ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವ ಜೆಡಿಎಸ್​ ವರಿಷ್ಠ ದೇವೇಗೌಡ ಹಳೇ ಮೈಸೂರು ಭಾಗದಲ್ಲಿ ಹಿಡಿತವನ್ನು ಮತ್ತೊಮ್ಮೆ ಸಾಧಿಸಲು ಮಂಡ್ಯದಿಂದ ಕಣಕ್ಕೆ ಇಳಿಯುವ ಆಲೋಚನೆ ಮಾಡಿದ್ದಾರೆ. ಅಲ್ಲದೇ ಜೆಡಿಎಸ್​ ನಾಯಕರು ಕೂಡ ಇಲ್ಲಿಂದ ನಿಖಿಲ್​ ಕುಮಾರಸ್ವಾಮಿಯನ್ನು ಕಣಕ್ಕೆ ಇಳಿಸುವಂತೆ ಒತ್ತಾಯ ಹೇರುತ್ತಿದ್ದಾರೆ. ಒಂದು ವೇಳೆ ಅಭಿಷೇಕ್​ ರಾಜಕೀಯವನ್ನು ಆಯ್ಕೆ ಮಾಡಿಕೊಂಡರೆ ಇದು ದೇವೇಗೌಡರ ರಾಜಕಾರಣಕ್ಕೆ ಭಾರೀ ಪೆಟ್ಟು ಬೀಳಲಿದೆ. ಇದರಿಂದಲೇ ಮುಖ್ಯಮಂತ್ರಿಗಳು ಹಾಗೂ ಮಾಜಿ ಪ್ರಧಾನಿಗಳು ಉದ್ದೇಶಪೂರ್ವಕವಾಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಜೆಡಿಎಸ್​ ನಾಯಕರ ಈ ಕಾರ್ಯವೈಖರಿ ಅರಿತ ಸುಮಲತಾ ಅಂಬರೀಷ್​ ಕಾರ್ಯಕ್ರಮದಲ್ಲಿಯೇ ಈ ಬಗ್ಗೆ ತಿರುಗೇಟು ನೀಡಿದ್ದಾರೆ. ಯಾರು ಬರಲಿ, ಬಾರದಿರಲಿ ಮಂಡ್ಯ ಜನ ನಮ್ಮ ಜೊತೆ ಇದ್ದಾರೆ. ಅಷ್ಟೇ ಸಾಕು ಎಂದಿದ್ದಾರೆ.

ಇನ್ನು ತಮ್ಮ ತಂದೆ ಹಾಗೂ ಮಂಡ್ಯ ಜನರ ಬಗ್ಗೆ ಮಾತನಾಡಿದ ಅಭಿಷೇಕ್​, ತಂದೆ ದಾರಿಯಲ್ಲೇ ನಡೆದರೆ, ಇಡೀ ಮಂಡ್ಯ ಜನ ನಮ್ಮ ಬೆನ್ನಿಗೆ ನಿಲ್ಲುತ್ತಾರೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

Comments are closed.