ಅಂತರಾಷ್ಟ್ರೀಯ

ಅಮೇರಿಕಾದಲ್ಲಿ ತುಳು ಹೊಸ ವರ್ಷ ಬಿಸು ಹಬ್ಬ- 2023

Pinterest LinkedIn Tumblr

(ವರದಿ: ರೇಷ್ಮಾ ಶೇರಿಗಾರ್ ವರ್ಜಿನಿಯಾ, ಯುಎಸ್ಎ)

ಅಮೇರಿಕಾ ಹಾಗೂ ಕೆನಡಾ ದೇಶಗಳ ತುಳು ಸಂಘಟನೆಗಳ ಒಕ್ಕೂಟ ‘ಆಲ್ ಅಮೇರಿಕಾ ತುಳು ಅಸೋಸಿಯೇಷನ್’ (AATA), ತನ್ನ ಮೂರನೆಯ ವಾರ್ಷಿಕೋತ್ಸವ ಹಾಗೂ ತುಳು ಹೊಸ ವರ್ಷ ‘ಬಿಸು ಹಬ್ಬ’ ವನ್ನು ಅಂತರ್ಜಾಲ ತಾಣದಲ್ಲಿಇದೇ ಬರುವ ಏಪ್ರಿಲ್ 16, 2023 ರಂದು ಆಚರಿಸಲು ಕಾರ್ಯಕ್ರಮ ಆಯೋಜನೆ ಮಾಡಿದೆ.

ಉತ್ತರ ಅಮೇರಿಕಾ ಖಂಡದಲ್ಲಿ ನೆಲೆಸಿರುವ ತುಳುನಾಡಿನ ಜನರ, ತುಳು ಭಾಷೆ ಹಾಗು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಘನ ಉದ್ದೇಶದಿಂದ ಆರಂಭವಾದ ಅಖಿಲ ಅಮೇರಿಕಾ ತುಳುವರ ಅಂಗಣ (ಆಟ) 2021 ರಿಂದ ಬಿಸು ಹಬ್ಬವನ್ನು ಆಚರಿಸಿಕೊಂಡು ಬಂದಿದೆ.

ತುಳುನಾಡಿನ ಹಾಗೂ ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಕೆನಡಾ ದೇಶದ ಪ್ರಸಿದ್ಧ ತುಳು ಸಾಹಿತಿಗಳು, ಸಾಧಕರನ್ನು ಆಹ್ವಾನಿಸಿ, ಅವರ ಸಾಧನೆಗಳನ್ನು ನವ, ಯುವ ಜನತೆಗೆ ಪರಿಚಯಿಸಿ, ಪ್ರೇರೇಪಿಸಿ ಮಾರ್ಗದರ್ಶನ ನೀಡುವ ಕಾರ್ಯಕ್ರಮ ಇದಾಗಿದೆ. ಅಂತರ್ಜಾಲ ತಾಣದಲ್ಲಿ ನಡೆಯುವ ಈ ಕಾರ್ಯಕ್ರಮ್ಮಕ್ಕೆ ತುಳು ವಿಧ್ವಾಮ್ಸರಾದ ನಿಟ್ಟೆ ವಿಶ್ವವಿದ್ಯಾಲಯದ ತುಳು ಸಂಶೋಧಕಿ ಡಾ. ಸಾಯೀಗೀತ, ಟೆಕ್ ಉದ್ಯಮಿ ಎಂರಿಸಲ್ಟ್, ಕನೆಕ್ಟಿಕಟ್ ಯು. ಯಸ್. ಎ ಇದರ ಸ್ಥಾಪಕ ಹಾಗೂ ಅಧ್ಯಕ್ಷರಾದ ಶ್ರೀ ಶೇಖರ್ ನಾಯ್ಕ್, ಅಮೆರಿಕಾದ ಇಂಡಿಯಾನಾದ ಪ್ರಸಿದ್ಧ ಸಂಶೋಧಕ ಹಾಗು ಯಕ್ಷಗಾನ ಕಲಾವಿದೆ ಡಾ. ರಾಜೇಂದ್ರ ಕೆದ್ಲಾಯ, ಹಾಲಿವುಡ್ ನ ನಿರ್ದೇಶಕ, ನಟ, ಸಾಹಿತಿ ಶ್ರೀ ರಘುರಾಮ್ ಶೆಟ್ಟಿ ಹಾಗೂ ಆಲ್ ಅಮೇರಿಕಾ ತುಳು ಅಸೋಸಿಯೇಷನ್ ನ ಸ್ಥಾಪಕ ಅಧ್ಯಕ್ಷರಾದ ಶ್ರೀ ಭಾಸ್ಕರ ಶೇರಿಗಾರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸುಮಾರು 2000 ವರ್ಷಕ್ಕಿಂತಲೂ ಅತೀ ಪುರಾತನವಾದ ತುಳು ಭಾಷೆಗೆ ಸರಕಾರಗಳಿಂದ ಮಾನ್ಯತೆ ದೊರೆಯದಿದ್ದರೂ, ಆಟ ಸಂಸ್ಥೆಯು ತುಳು ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪ್ರಯತ್ನಕ್ಕೆ ಸಾಕ್ಷಿಯಾಗಿ ‘ರಾಣಿ ಅಬ್ಬಕ್ಕ ಗೇನಾದ ಚಾವಡಿ’ ಅಂತರ್ಜಾಲದ ತುಳು ಗ್ರಂಥಾಲಯವನ್ನು ತುಳುನಾಡಿನ ದಂತಕಥೆಯಾದ ವೀರ ರಾಣಿ ಅಬ್ಬಕ್ಕನ ಹೆಸರಿನಲ್ಲಿ ಆರಂಭಿಸಿದೆ. ಇದರ ಉಧ್ಘಾಟನೆಯನ್ನು ಡಾ. ಸಾಯಿಗೀತಾ ಅವರು ನೆರವೇರಿಸಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಈ ಗ್ರಂಥಾಲಯಕ್ಕೆ ಸಂಪೂರ್ಣ ಸಹಕಾರ ನೀಡಿದ್ದು, ತನ್ನ ಪ್ರಕಟಣೆಯ ಎಲ್ಲಾ ಸಾಹಿತ್ಯವನ್ನು ಈ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದೆ. ತುಳು ಸಾಹಿತ್ಯ ಅಕಾಡೆಮಿಯ ಸಹಕಾರಕ್ಕೆ ‘ಆಟ’ ಧನ್ಯವಾದಗಳನ್ನು ಸಮರ್ಪಿಸಿದೆ.
ಪ್ರಪಂಚದಾಧ್ಯಂತ ನೆಲೆಸಿರುವ ತುಳು ಬಂಧುಗಳಿಗೆ ‘ಆಟ’ ಈ ವರ್ಚುಯಲ್ ಕಾರ್ಯಕ್ರಮಕ್ಕೆ ಹೃತ್ಪೂರ್ವಕ ಸ್ವಾಗತವನ್ನು ಬಯಸಿದೆ. ಅಮೇರಿಕಾ ಹಾಗೂ ಕೆನಡಾ ದೇಶಗಳಲ್ಲಿ ನೆಲೆಸಿರುವ ತುಳು ಬಂಧುಗಳು ತಮ್ಮ ಕಲಾ ನೈಪುಣ್ಯತೆಗಳನ್ನು ಸಭಾ ಕಾರ್ಯಕ್ರಮದ ಅಂಗವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಿದ್ದಾರೆ. ಯೂಟ್ಯೂಬ್ ಪ್ರೀಮಿಯರ್ ಆಗಿ ಹೊರಬರಲಿರುವ ಆಲ್ ಅಮೇರಿಕಾ ತುಳು ಅಸೋಸಿಯೇಷನ್ ನಡೆಸುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ. ‘ಆಟ’ದ ಅಧಿಕೃತ ಯೂಟ್ಯೂಬ್ ಚಾನೆಲ್ ಹಾಗು ಈ ಕೆಳಗಿನ ಕೊಂಡಿಯಲ್ಲಿ ಕಾರ್ಯಕ್ರಮವನ್ನು ಇದೇ ಬರುವ ಏಪ್ರಿಲ್ 16, 2023ರಂದು ಭಾರತೀಯ ಕಾಲಮಾನ ರಾತ್ರಿ 9.30, ಅಮೆರಿಕಾದ ಪೂರ್ವ ಸಮಯ ಬೆಳಗ್ಗೆ 11.30ಕ್ಕೆ ವೀಕ್ಷಿಸಬೇಕಾಗಿ ಕೋರಲಾಗಿದೆ. www.aatana.org/bisu_parba_2023

Comments are closed.