ಅಂತರಾಷ್ಟ್ರೀಯ

ಗೂಗಲ್​ ಮ್ಯಾಪ್​ನಿಂದ ಪತ್ನಿಯ ಅನೈತಿಕ ಸಂಬಂಧ ಪತ್ತೆ ಹಚ್ಚಿದ ಪತಿ!

Pinterest LinkedIn Tumblr


ಕೆಲವೊಮ್ಮೆ ತಂತ್ರಜ್ಞಾನ ನಮ್ಮನ್ನು ಯಾವ ರೀತಿಯ ಅಸಹಾಯಕರನ್ನಾಗಿ ಮಾಡಿಬಿಡುತ್ತದೆ, ಸಿಗಬಾರದ ಪರಿಸ್ಥಿತಿಯಲ್ಲಿ ಸಿಲುಕುವಂತೆ ಮಾಡುತ್ತದೆ ಎಂಬುದು ಹಲವರಿಗೆ ಅರ್ಥವಾಗಿರುತ್ತದೆ. ಎಷ್ಟೋ ಪ್ರೇಮಸಂಬಂಧಗಳು ಮೊಬೈಲ್​ ಮೂಲಕವೇ ಮನೆಯವರ ಗಮನಕ್ಕೆ ಬಂದ ನಿದರ್ಶನಗಳಿವೆ. ಇನ್ನೆಷ್ಟೋ ಸಂಬಂಧಗಳು ಮೊಬೈಲ್​ನಲ್ಲಿನ ವಿಡಿಯೋದಿಂದಲೋ, ಫೋಟೋದಿಂದಲೋ ಮುರಿದುಬಿದ್ದ ಉದಾಹರಣೆಗಳೂ ಇವೆ. ಈಗ ನಾವು ಹೇಳಹೊರಟಿರುವುದು ಕೂಡ ಅಂಥದ್ದೇ ಕತೆ. ಆದರೆ, ಇದು ನೀವು ಹಿಂದೆಂದೂ ಕೇಳಿರದ, ಹೀಗೂ ಆಗಬಹುದಾ? ಎಂದು ಆಶ್ಚರ್ಯಚಕಿತರನ್ನಾಗಿಸುವ ಕುತೂಹಲಕಾರಿ ಕತೆ…

ಆತ ಪೆರು ದೇಶದ ಯುವಕ. ಆತನಿಗೆ ಭಿನ್ನವಾದ ಸಂಶೋಧನೆಗಳನ್ನು ಮಾಡುವುದರತ್ತ ಹೆಚ್ಚಿನ ಆಸಕ್ತಿ. ಅದೊಂದು ದಿನ ತನ್ನ ಊರಿನ ಪ್ರಖ್ಯಾತ ಸೇತುವೆಗಳ ಬಳಿಗೆ ಹೋಗುವ ಸುಲಭವಾದ ದಾರಿಗಳು ಯಾವುದಿದೆ? ಎಂದು ಗೂಗಲ್​ಮ್ಯಾಪ್​ನಲ್ಲಿ ಹುಡುಕುತ್ತಾ ಕುಳಿತಿದ್ದ ಪೆರುವಿಯನ್​ ಯುವಕನಿಗೆ ಆ ದೃಶ್ಯ ಕಾಣುತ್ತದೆ. ಮ್ಯಾಪ್​ನಲ್ಲಿ ನೋಡುತ್ತಿದ್ದ ಆ ಯುವಕ ಬೀದಿಯೊಂದರ ಬಳಿ ಝೂಮ್​ ಮಾಡಿ ನೋಡಿದಾಗ ಬಹಳ ಪರಿಚಿತ ವ್ಯಕ್ತಿಯೊಬ್ಬರು ಕಾಣುತ್ತಾರೆ. ಯಾರಿದು ಎಂದು ಗೊಂದಲವಾದ್ದರಿಂದ ಇನ್ನಷ್ಟು ಝೂಮ್​​ ಮಾಡುತ್ತಾನೆ.

ಝೂಮ್​ ಮಾಡಿ ನೋಡಿದಾಗ ಬೀದಿಯ ಬದಿಗಿದ್ದ ಪಾರ್ಕ್​ನ ಬೆಂಚ್​ ಒಂದರಲ್ಲಿ ಬಿಳಿ ಟಾಪ್​, ಜೀನ್ಸ್​ ಧರಿಸಿದ್ದ ಯುವತಿಯೊಬ್ಬಳು ಕುಳಿತಿರುವುದು ಕಾಣುತ್ತದೆ. ಆಕೆಯ ತೊಡೆಯ ಮೇಲೆ ಯುವಕನೊಬ್ಬ ಮಲಗಿರುವುದು ಗೊತ್ತಾಗುತ್ತದೆ. ಇನ್ನೂ ಝೂಮ್​ ಮಾಡಿ ನೋಡಿದಾಗ ಅದು ಸ್ವತಃ ತನ್ನ ಹೆಂಡತಿ ಎಂಬುದು ಗೊತ್ತಾಗುತ್ತದೆ!

ತನ್ನ ಹೆಂಡತಿ ಬೇರೊಬ್ಬನ ಜೊತೆಗೆ ರೊಮ್ಯಾನ್ಸ್​ ಮಾಡುವುದನ್ನು ನೋಡಿ ಕೋಪಗೊಂಡ ಆತ ತನ್ನ ಹೆಂಡತಿಯ ಬಳಿ ಹೋಗುತ್ತಾನೆ. ಆಕೆ ತನಗೆ ಬೇರೆಯವನ ಜೊತೆಗೆ ಸಂಬಂಧ ಇರುವುದು ನಿಜವೆಂದು ಒಪ್ಪಿಕೊಳ್ಳುತ್ತಾಳೆ. ಬಳಿಕ, ಅವರಿಬ್ಬರೂ ವಿಚ್ಛೇದನ ಪಡೆಯಲು ಮುಂದಾಗುತ್ತಾರೆ.

ಕಾರು, ಬೈಕ್​ ಮುಂತಾದ ವಾಹನಗಳ ಗೂಗಲ್​ ಸ್ಟ್ರೀಟ್​ ವ್ಯೂನಲ್ಲಿ 360 ಡಿಗ್ರಿ ದೃಶ್ಯ ಸೆರೆಯಾಗುತ್ತದೆ. ಅವು ಚಲಿಸುವಾಗ ಸೆರೆಹಿಡಿಯುವ ದೃಶ್ಯಾವಳಿಗಳಿಂದ ಇಂತಹ ಅನೇಕ ಪ್ರಕರಣಗಳು ನಡೆದಿವೆ. ಜಪಾನ್​ನಲ್ಲಿ 6 ಜನ ಮುಸುಕು ಹಾಕಿಕೊಂಡು ದರೋಡೆ ಮಾಡುತ್ತಿರುವ ದೃಶ್ಯವೂ ಈ ಕ್ಯಾಮೆರಾದಲ್ಲಿ ಸೆರೆಯಾಗಿ ಅವರಿಗೆ ಶಿಕ್ಷೆಯಾಗುವಂತಾಗಿತ್ತು.

Comments are closed.