ಕರ್ನಾಟಕ

ನಾಮಪತ್ರ ಸಲ್ಲಿಸಿದ ಅನಿತಾ ಕುಮಾರಸ್ವಾಮಿ: ಆಸ್ತಿ ಮೌಲ್ಯ ಎಷ್ಟು ಗೊತ್ತಾ?

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆಯ ಕಣ ದಿನೇದಿನೇ ರಂಗೇರುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್​​-ಜೆಡಿಎಸ್​​ ಪಕ್ಷದ ಮೈತ್ರಿ ಅಭ್ಯರ್ಥಿಗಳು ನಾಮಪತ್ರದ ಜೊತೆಗೆ ತಮ್ಮ ಆಸ್ತಿಯ ವಿವರನ್ನು ಚುನಾವಣೆ ಆಯೋಗಕ್ಕೆ ನೀಡುತ್ತಿದ್ಧಾರೆ. ಇದೇ ರೀತಿಯಲ್ಲಿ ರಾಮನಗರದಿಂದ ಕಣಕ್ಕಿಳಿಯುತ್ತಿರುವ ಅನಿತಾ ಕುಮಾರಸ್ವಾಮಿ ಅವರು ಕೂಡ ಆಯೋಗಕ್ಕೆ ನಾಮಪತ್ರ ಜೊತೆಯಲ್ಲೇ ತಮ್ಮ ಆಸ್ತಿ ವಿವರವನ್ನು ನೀಡಿದ್ದಾರೆ.

ಕರ್ನಾಟಕ ರಾಜ್ಯ ಚುನಾವಣಾ ಆಯೋಗಕ್ಕೆ ನೀಡಿದ ಮಾಹಿತಿಯಲ್ಲಿ ಸಿಎಂ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಬಿ.ಇ ಪದವೀಧರೆ ಎಂದು ಉಲ್ಲೇಖಿಸಿದ್ಧಾರೆ. ಅಲ್ಲದೇ ಅನಿತಾ ಕಸ್ತೂರಿ ಮೀಡಿಯಾ ಪ್ರೈ. ಲಿ. ಕಂಪನಿಯಲ್ಲಿ ಬರೋಬ್ಬರಿ ₨ 68.72 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಜೊತೆಗೆ ಒಟ್ಟು ₨17.6 ಕೋಟಿ ಮೊತ್ತದ ಸಾಲ ನೀಡಿದ್ದಾರೆ ಎನ್ನುತ್ತಿವೆ ದಾಖಲೆಗಳು.

ಇನ್ನು 2017-18ನೇ ಸಾಲಿನಲ್ಲಿ 76.35 ಲಕ್ಷ ರೂಪಾಯಿ ಆದಾಯ ಬಂದಿದೆ ಎಂದು ತೋರಿಸಲಾಗಿದೆ. 2660 ಗ್ರಾಂ ಚಿನ್ನ, 17 ಕೆ.ಜಿ. ಬೆಳ್ಳಿ, 40 ಕ್ಯಾರೆಟ್‌ನಷ್ಟು ವಜ್ರ ಸೇರಿದಂತೆ 93.33 ಲಕ್ಷ ಮೌಲ್ಯದ ಆಭರಣ ಇದೆ ಎಂದು ಘೋಷಿಸಲಾಗಿದೆ. 8.29 ಲಕ್ಷ ಮೌಲ್ಯದ ಹಾರ್ಲೆ ಡೆವಿಡ್‌ಸನ್ ಬೈಕ್‌ ಹಾಗೂ 20 ಲಕ್ಷ ರೂಪಾಯಿ ಮೌಲ್ಯದ ವ್ಯಾನ್ ಕೂಡ ತಮ್ಮ ಹೆಸರಿನಲ್ಲಿದೆ ಎಂದು ತಿಳಿಸಲಾಗಿದೆ.

ವಿವಿಧ ವ್ಯಕ್ತಿ/ಸಂಸ್ಥೆ/ ಬ್ಯಾಂಕುಗಳಿಂದ 93,39 ಕೋಟಿ ಸಾಲ ಪಡೆದಿರುವುದಾಗಿ ತೋರಿಸಲಾಗಿದೆ. ಅನಿತಾ ಕುಮಾರಸ್ವಾಮಿ ಅವರ ಹೆಸರಿನಲ್ಲಿ 42 ಲಕ್ಷ ನಗದು, 1.90 ಕೋಟಿ ರೂಪಾಯಿ ಠೇವಣಿ ಇರಿಸಿದ್ದಾರಂತೆ. ವಿವಿಧ ಹಣಕಾಸು ಸಂಸ್ಥೆಗಳಿಂದ ಸುಮಾರು 8.14 ಕೋಟಿ ಸಾಲ ಪಡೆದಿದ್ದೇವೆ ಎಂದು ಆಸ್ತಿ ವಿವರಣೆ ಪತ್ರದಲ್ಲಿ ಹೇಳಲಾಗಿದೆ.

ಡಿಕೆ ಬ್ರದರ್ಸ್​​ ಗೈರು: ವಿಧಾನಸಭೆ ಉಪಚುನಾವಣೆಗೆ ಜೆಡಿಎಸ್​-ಕಾಂಗ್ರೆಸ್​ ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಚುನಾವಣಾ ಕಚೇರಿಗೆ ಅನಿತಾ ಕುಮಾರಸ್ವಾಮಿ ಅವರು ಪತಿ ಸಿಎಂ ಎಚ್​ಡಿಕೆ ಜೊತೆಗೆ ತೆರಳಿದ್ದಾರೆ. ಆದರೆ ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್​ ಪರವಾಗಿ ಇಬ್ಬರು ಪ್ರಬಲ ನಾಯಕರು, ಡಿಕೆ ಬ್ರದರ್ಸ್​​ ಇಲ್ಲದ ಕಾರಣ ಹಲವು ಅನುಮಾನಗಳು ಹುಟ್ಟಿಕೊಂಡಿವೆ.

ನಾಮ ಪತ್ರ ಸಲ್ಲಿಕೆಗೆ ಬಾರದ ಸಚಿವ ಡಿಕೆ ಶಿವಕುಮಾರ್​​ ಮತ್ತು ಸಂಸದ ಡಿಕೆ ಸುರೇಶ್​​ ಕುಮಾರ್​​ ಅವರು, ಉಪಚುನಾವಣೆಯ ಪ್ರಚಾರದ ಕಾರ್ಯದಲ್ಲಿ ಭಾಗವಹಿಸುತ್ತಾರೆಯೇ ಎಂಬ ಪ್ರಶ್ನೆ ಎದುರಾಗಿದೆ. ಅಲ್ಲದೇ ಹಿಂದಿನಿಂದಲೂ ಕ್ಷೇತ್ರದಲ್ಲಿ ಜೆಡಿಎಸ್​, ಕಾಂಗ್ರೆಸ್​ನಲ್ಲಿ ಅಸಮಾಧಾನ ಇದೆ ಎನ್ನಲಾಗಿತ್ತು. ಇದೀಗ ಇಬ್ಬರು ನಾಯಕರ ಗೈರಿನ ವಿಚಾರ, ಉಭಯ ಪಕ್ಷಗಳ ನಡುವೇ ಅಸಮಾಧಾನ ಇದ್ದದ್ದು ನಿಜ ಎಂದು ಸಾಬೀತುಪಡಿಸಿದೆ ಎಂಬ ಚರ್ಚೆಗಳು ನಡೆಯುತ್ತಿವೆ.

Comments are closed.