ಅಂತರಾಷ್ಟ್ರೀಯ

ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯನ್ನು ಕೊಂದಿದ್ದ ಆರೋಪಿಯ ಎನ್​ಕೌಂಟರ್​ನಲ್ಲಿ ಹತ್ಯೆ

Pinterest LinkedIn Tumblr

ವಾಷಿಂಗ್ಟನ್​: ಕಾನ್ಸಾಸ್​ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ಶರತ್​ ಕೊಪ್ಪುನನ್ನು ಗುಂಡಿಟ್ಟು ಹತ್ಯೆ ಮಾಡಿದ್ದ ಶಂಕಿತ ಆರೋಪಿಯನ್ನು ಅಮೆರಿಕದ ಪೊಲೀಸರು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಿದ್ದಾರೆ.

ಜುಲೈ 6 ರಂದು ಮಿಸ್ಸೋರಿಯ ರೆಸ್ಟೋರೆಂಟ್​ನಲ್ಲಿ ಶಂಕಿತ ಆರೋಪಿ ಶರತ್​ ಕೊಪ್ಪು ಅವರಿಗೆ ಗುಂಡಿಟ್ಟು ಹತ್ಯೆ ಮಾಡಿದ್ದ. ಕೊಪ್ಪು ಅವರು ಆ ರೆಸ್ಟೋರೆಂಟ್​ನಲ್ಲಿ ಕೆಲಸ ಮಾಡುತ್ತಿದ್ದರು. ಕೊಪ್ಪು ಅವರ ಮೇಲೆ ಗುಂಡು ಹಾರಿಸಿದ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ.

ಶಂಕಿತ ಹಂತಕನ ವಿಡಿಯೋವನ್ನು ಪೊಲೀಸರು ರಿಲೀಸ್‌ ಮಾಡಿ, ಕಂದು ಮತ್ತು ಬಿಳಿ ಬಣ್ಣದ ಗೆರೆಯಿರುವ ಟೀಶರ್ಟ್‌ ಧರಿಸಿರುವ ಆತನ ಬಗ್ಗೆ ಸುಳಿವು ದೊರಕಿದಲ್ಲಿ ಮಾಹಿತಿ ನೀಡುವಂತೆ ಕೋರಿದ್ದರು. ಅಲ್ಲದೆ ಮಾಹಿತಿ ನೀಡಿದವರಿಗೆ 10 ಸಾವಿರ ಡಾಲರ್‌ ಬಹುಮಾನವನ್ನು ಘೋಷಿಸಿದ್ದರು.

ಪರಾರಿಯಾಗಿದ್ದ ಆರೋಪಿಗಾಗಿ ಪೊಲೀಸರ ಶೋಧ ನಡೆಸುತ್ತಿದ್ದರು. ಭಾನುವಾರ ಆತನನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಆತನನ್ನು ಬಂಧಿಸಲು ತೆರಳಿದ ಪೊಲೀಸರ ಮೇಲೆ ಆತ ಗುಂಡು ಹಾರಿಸಿದ್ದ. ಈ ಸಂದರ್ಭದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಶಂಕಿತ ಆರೋಪಿ ಮೃತಪಟ್ಟಿದ್ದಾನೆ ಮತ್ತು ಗುಂಡಿನ ದಾಳಿಯಲ್ಲಿ ಮೂವರು ಪೊಲೀಸ್​ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಪ್ಪು ಅವರನ್ನು ಹತ್ಯೆ ಮಾಡಿದ್ದ ಆರೋಪಿಯನ್ನು ಪೊಲೀಸರು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಿರುವುದನ್ನು ಕೇಳಿ ನಮಗೆ ಸಂತಸವಾಗಿದೆ. ಇದೇ ಸಂದರ್ಭದಲ್ಲಿ ಪೊಲೀಸರು ಗುಂಡೇಟಿನಿಂದ ಗಾಯಗೊಂಡಿರುವುದನ್ನು ಕೇಳಿ ದುಃಖವಾಗುತ್ತಿದೆ. ಪೊಲೀಸ್​ ಅಧಿಕಾರಿಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇವೆ ಎಂದು ಕಾನ್ಸಸ್​ ನಗರದ ಭಾರತೀಯ ನಿವಾಸಿಗಳ ಸಂಘದ ಅಧ್ಯಕ್ಷ ಜಗದೀಶ್​ ಸುಬ್ರಮಣಿಯನ್​ ಪ್ರತಿಕ್ರಿಯೆ ನೀಡಿದ್ದಾರೆ.

Comments are closed.