ರಾಷ್ಟ್ರೀಯ

ಬರೋಬರಿ 18 ಜನರನ್ನು ಮದುವೆಯಾಗಿ ಲಕ್ಷಗಟ್ಟಲೆ ಹಣ ದೋಚುತ್ತಿದ್ದ ಕಿಲಾಡಿ ವಧು ! ಮದುವೆಯಾಗುತ್ತಿದ್ದದ್ದು ಏಕೆ ಗೊತ್ತೇ..?

Pinterest LinkedIn Tumblr

ಬಾಂದಾ: ಯುವಕರನ್ನು ಮದುವೆಯ ಜಾಲದಲ್ಲಿ ಬೀಳಿಸಿ, ಅವರಿಂದ ಲಕ್ಷಗಟ್ಟಲೆ ಹಣ ದೋಚುತ್ತಿದ್ದ ಕಿಲಾಡಿ ವಂಚಕರ ತಂಡವೊಂದು ಕೊನೆಗೂ ಪೊಲೀಸರ ಬಲೆಗೆ ಬಿದ್ದಿದೆ.

ಮತ್ತೊಂದು ಶಾಕಿಂಗ್ ಸಂಗತಿ ಎಂದರೆ ಈ ತಂಡದ ಮುಂದಾಳು ಒಬ್ಬ ಮಹಿಳೆ. ಆ ಕೆಲಸದಲ್ಲಿ ಆಕೆಯ ಪತಿ ಕುಲ್ದೀಪ್ ಕೂಡ ಸಾಥ್ ನೀಡುತ್ತಿದ್ದ. ಸಾಧ್ವಿಯೊಬ್ಬಳ ನೆರವಿಂದ ಯುವಕರನ್ನು ಮೋಸದ ಬಲೆಯಲ್ಲಿ ಬೀಳಿಸುತ್ತಿದ್ದ ಆಕೆ ಮತ್ತು ತಂಡ ಬಳಿಕ ಅಂತವರಿಂದ ಹಣ ದೋಚುತ್ತಿತ್ತು.

ತಂಡದ ನಾಯಕಿಯಾಗಿದ್ದ ನಿರ್ಮಲಾ ಠಾಕೂರ್ ಜುಲೈ 10 ರಂದು ಬಾಂದಾದ ಕೈಲಾಸಪುರಿಯ ನಿವಾಸಿ ಘನಶ್ಯಾಮ್ ಎಂಬಾತನನ್ನು ಮದುವೆಯಾಗಿದ್ದಳು. ಮದುವೆಗೆ ಪ್ರತಿಯಾಗಿ ಸಾಧ್ವಿ ಮಾಲ್ತಿ ಶುಕ್ಲಾ, ಮಮ್ತಾ ದ್ವಿವೇದಿ ಮತ್ತು ಆಕೆಯ ಪತಿ ನಿರಂಜನ್ ದ್ವಿವೇದಿ 50,000 ರೂಪಾಯಿ ಕಬಳಿಸಿದ್ದಾರೆ.

ಮೂರು ದಿನಗಳ ಬಳಿಕ ಘನಶ್ಯಾಮ್ ಬಳಿ ಕುಲ್ದೀಪ್ ನಿರ್ಮಲಾಳನ್ನು ಅಪಹರಿಸಿ ಒತ್ತಾಯಪೂರ್ವಕವಾಗಿ ಮದುವೆಯಾಗಿದ್ದೀಯ. ನಾನು ಪೊಲೀಸ್ ಠಾಣೆ ಮೆಟ್ಟಿಲೇರಬಾರದೆಂದರೆ ಹಣ ಕೊಡು ಎಂದು ಬೆದರಿಸಿ 2 ಲಕ್ಷ ರೂಪಾಯಿ ಕೇಳಿದ್ದಾನೆ. ಅದಕ್ಕೊಪ್ಪದಿದ್ದಾಗ ಕೋಟ್ವಾಲಿ ಪೊಲೀಸ್ ಠಾಣೆಯಲ್ಲಿ ಘನಶ್ಯಾಮ್ ಮತ್ತು ಆತನ ಸಹೋದರನ ವಿರುದ್ಧ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾನೆ. ಈ ಸುದ್ದಿ ಕೇಳಿದ ಬಾಂದಾದ ನಿವಾಸಿ ದಿನೇಶ್ ಪಾಂಡೆ ಎಸ್ಪಿ ಶಾಲಿನಿ ಬಳಿ ಹೋಗಿ ಕಳೆದ ತಿಂಗಳು ನನ್ನಿಂದ 1 ಲಕ್ಷ ರೂಪಾಯಿ ಪೆಡದ ಸಾಧ್ವಿ ನಿರ್ಮಲಾ ಜತೆ ಮದುವೆ ಮಾಡಿಸಿದ್ದಳು. ಮದುವೆಯಾದ ಮೂರು ದಿನಗಳ ಬಳಿಕ ಲಕ್ಷಾಂತರ ರೂಪಾಯಿ ಚಿನ್ನಾಭರಣ ಮತ್ತು ಹಣ ದೋಚಿಕೊಂಡು ನಿರ್ಮಲಾ ಪರಾರಿಯಾಗಿದ್ದಳು ಎಂದು ದೂರಿದ್ದಾನೆ.

ಕಾರ್ಯಾಚರಣೆಗಿಳಿದ ಪೊಲೀಸರು ನಿರ್ಮಲಾ ಮತ್ತು ಅವರ ತಂಡವನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಬೆಚ್ಚಿಬೀಳಿಸುವ ಸತ್ಯ ಹೊರಬಿದ್ದಿದೆ. ಇಲ್ಲಿಯವರೆಗೆ 18 ಯುವಕರಿಗೆ ಮೋಸ ಮಾಡಿರುವುದಾಗಿ ತಂಡ ಬಾಯಿ ಬಿಟ್ಟಿದೆ. ಆರೋಪಿಗಳೆಲ್ಲರನ್ನು ಜೈಲಿಗಟ್ಟಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.