ಅಂತರಾಷ್ಟ್ರೀಯ

ಬುಶ್ರಾ ಪುತ್ರ, ಇಮ್ರಾನ್‌ ನಾಯಿಯಿಂದಾಗಿ ಸಂಕಷ್ಟಕ್ಕೆ ಗುರಿಯಾದ ಮದುವೆ

Pinterest LinkedIn Tumblr

ಹೊಸದಿಲ್ಲಿ ಲಾಹೋರ್: ಪಾಕ್‌ ಕ್ರಿಕೆಟ್‌ ದಂತಕಥೆ ಹಾಗೂ ಪಾಕಿಸ್ಥಾನದ ತೆಹರೀಕ್‌ ಎ ಇನ್ಸಾಫ್ ಪಕ್ಷದ ಅಧ್ಯಕ್ಷರಾಗಿರುವ ಇಮ್ರಾನ್‌ ಖಾನ್‌ ಅವರ ಮೂರನೇ ಮದುವೆ ಕೂಡ ಈಗ ಸಂಕಷ್ಟಕ್ಕೆ ಗುರಿಯಾಗಿದೆ.

ಪಾಕ್‌ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಇಮ್ರಾನ್‌ ಖಾನ್‌ ಅವರ ಮೂರನೇ ಪತ್ನಿ ಬುಶ್ರಾ ಈಚೆಗೆ ಇಮ್ರಾನ್‌ ಖಾನ್‌ ಮನೆಯನ್ನು ತೊರೆದು ತನ್ನ ಹೆತ್ತವರ ಮನೆ ಸೇರಿದ್ದಾಳೆ. ಇಮ್ರಾನ್‌ – ಬುಶ್ರಾ ನಡುವೆ ತಲೆದೋರಿರುವ ವಿವಾದ, ಭಿನ್ನಮತವೇ ಇದಕ್ಕೆ ಕಾರಣವಾಗಿದೆ.

ಬುಶ್ರಾ ಳ ಮದುವೆಯ ಬಳಿಕವೂ ಆಕೆಯ ಮಗ ತನ್ನ ಮನೆಯಲ್ಲಿ ದೀರ್ಘಾವಧಿಗೆ ಉಳಿದುಕೊಂಡಿರುವುದು ಇಮ್ರಾನ್‌ ಖಾನ್‌ ಅಸಮಾಧಾನಕ್ಕೆ, ಆಕ್ಷೇಪಕ್ಕೆ ಕಾರಣವಾಗಿದೆ. ಮದುವೆಗೆ ಮೊದಲೇ ಇದನ್ನು ಇಮ್ರಾನ್‌ ಖಾನ್‌ ಇದನ್ನು ಒಂದು ಶರತ್ತಾಗಿ ಇಟ್ಟಿದ್ದರು. ಮದುವೆಯ ಬಳಿಕ ಬುಶ್ರಾಳ ಮನೆಯವರು ಯಾರೂ ದೀರ್ಘಾವಧಿಗೆ ತನ್ನ ಮನೆಯಲ್ಲಿ ವಾಸಿಸಕೂಡದು ಎಂದು ಇಮ್ರಾನ್‌ ಕಟ್ಟಪ್ಪಣೆ ಮಾಡಿದ್ದರು.

ಇದೇ ರೀತಿ ಬುಶ್ರಾ ಕೂಡ ಒಂದು ಶರತ್ತು ಹಾಕಿದ್ದಳು; ಅದೆಂದರೆ ಇಮ್ರಾನ್‌ ಖಾನ್‌ ಮನೆತುಂಬ ಇರುವ ಆತನ ಪೆಟ್‌ (ಅಚ್ಚುಮೆಚ್ಚಿನ) ನಾಯಿಗಳು ಮನೆಯೊಳಗೆ ಇರಕೂಡದು; ಅವು ಮನೆಯೊಳಗೆ ಇದ್ದರೆ ತನ್ನ ಆಧ್ಯಾತ್ಮಿಕ ಸಾಧನೆಗೆ ತೊಂದರೆ ಆಗುತ್ತದೆ ಎಂದು ! ಮೇಲಾಗಿ ಇಮ್ರಾನ್‌ ಖಾನ್‌ ಸಹೋದರಿಯರು ಕೂಡ ಆತನೊಂದಿಗೆ ಆತನ ಮನೆಯಲ್ಲೇ ವಾಸವಾಗಿರುವುದು ಬುಶ್ರಾಗೆ ಇಷ್ಟವಿಲ್ಲ.

ಇಬ್ಬರೂ ಉಭಯತರ ಶರತ್ತುಗಳನ್ನು ಮದುವೆಗೆ ಮುನ್ನ ಒಪ್ಪಿಕೊಂಡಿದ್ದರು. ಆದರೆ ಇಬ್ಬರೂ ಮದುವೆಯ ಬಳಿಕ ಉಭಯತರ ಶರತ್ತನ್ನು ಮುರಿದಿದ್ದಾರೆ. ಇವರ ವೈವಾಹಿಕ ಬದುಕಿಗೇ ಈಗ ಇದುವೇ ಕುತ್ತಾಗಿ ಪರಿಣಮಿಸಿದೆ ! ಹೀಗೆಂದು ಪಾಕಿಸ್ಥಾನದ ಉರ್ದು ಸುದ್ದಿ ಪತ್ರಿಕೆ ಡೇಲಿ ಉಮ್ಮತ್‌ ವರದಿ ಮಾಡಿದೆ.

ಅಂದ ಹಾಗೆ ಬುಶ್ರಾಗೆ ತನ್ನ ಮೊದಲ ಪತಿ ಖವಾರ್‌ ಫ‌ರೀದ್‌ ನಿಂದ ಐವರು ಮಕ್ಕಳಿದ್ದಾರೆ. ಈಕೆ ಲಾಹೋರ್‌ನಿಂದ ಸುಮಾರು 250 ಕಿ.ಮೀ. ದೂರದ ಪಾಕ್‌ಪಟಾನ್‌ ಜಿಲ್ಲೆಯ ನಿವಾಸಿ. ಈಕೆ ಈಗ ತನ್ನ 40ರ ದಶಕದ ಕೊನೆಯಲ್ಲಿದ್ದಾಳೆ.

ಪಾಕ್‌ ಪಟಾನ್‌ ಜಿಲ್ಲೆಯು ಬಾಬಾ ಫ‌ರೀದ್‌ ಗಂಜ್‌ ಶಕರ್‌ ಮಸೀದಿಯಿಂದಾಗಿ ಪ್ರಸಿದ್ಧವಾಗಿದೆ. 2017ರಲ್ಲಿ ಇಮ್ರಾನ್‌ ಬುಶ್ರಾ ಳನ್ನು ಭೇಟಿಯಾಗಿ ಆಕೆಯಿಂದ ಆಧ್ಯಾತ್ಮಿಕ ಸಲಹೆಗಳನ್ನು ಪಡೆಯುತ್ತಿದ್ದರು. 2018ರ ಜನವರಿಯಲ್ಲಿ ತಾನು ಬುಶ್ರಾಳನ್ನು ಮದುವೆಯಾಗುವುದಾಗಿ ಇಮ್ರಾನ್‌ ಪ್ರಕಟಿಸಿದ್ದರು.

ಇಮ್ರಾನ್‌ಗೆ ಬುಶ್ರಾ ಮೂರನೇ ಮಡದಿ. 1995ರಲ್ಲಿ ಬ್ರಿಟಿಷ್‌ ಬಿಲಿಯಾಧಿಪತಿಯ ಮಗಳು ಜೆಮೀಮಾ ಗೋಲ್ಡ್‌ಸ್ಮಿತ್‌ಳನ್ನು ಮದುವೆಯಾಗಿದ್ದ ಇಮ್ರಾನ್‌ ಖಾನ್‌ ದಾಂಪತ್ಯ 9 ವರ್ಷಕ್ಕೇ ಕೊನೆಗೊಂಡಿತ್ತು. ಆಕೆಯಿಂದ ಇಮ್ರಾನ್‌ಗೆ ಇಬ್ಬರು ಪುತ್ರರು ಜನಿಸಿದ್ದಾರೆ. ಇಮ್ರಾನ್‌ ಖಾನ್‌ ಎರಡನೇ ಮದುವೆ ನಡೆದದ್ದು 2015ರಲ್ಲಿ – ಟಿವಿ ನಿರೂಪಕಿ ರೆಹಾಮ್‌ ಖಾನ್‌ ಜತೆಗೆ. ಈ ಮದುವೆ ಕೇವಲ 10 ತಿಂಗಳಲ್ಲಿ ಕೊನೆಗೊಂಡಿತ್ತು.

-ಉದಯವಾಣಿ

Comments are closed.