ರಾಷ್ಟ್ರೀಯ

ದಲಿತ ಬಾಲಕಿಯನ್ನು ಲಾಸ್ಟ್ ಬೆಂಚ್‌ನಲ್ಲಿ ಕುಳ್ಳಿರಿಸಿದ ಶಿಕ್ಷಕಿ

Pinterest LinkedIn Tumblr


ಮುಜಾಫರ್ ನಗರ: ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ, ಆಧುನಿಕವಾಗಿ ದೇಶ ಇಷ್ಟು ಮುಂದುವರೆದರೂ ನಮ್ಮ ಸಮಾಜದಲ್ಲಿ ಜಾತಿಭೇದ ಇನ್ನು ಕೂಡ ಬೇರೂರಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನವಿದು. ಶಿಕ್ಷಕಿಯೊಬ್ಬರು 13 ವರ್ಷದ ದಲಿತ ಬಾಲಕಿಯನ್ನು ಕೊನೆಯ ಬೆಂಚ್‌ನಲ್ಲಿ ಕುಳ್ಳಿರಿಸಿದ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ.

ನಗರದ ಸನಾತನ ಧರ್ಮ ಇಂಟರ್ ಕಾಲೇಜನಲ್ಲಿ ಈ ಖಂಡನೀಯ ಕೃತ್ಯ ನಡೆದಿದ್ದು, ತುಂಬಿದ ತರಗತಿಯಲ್ಲಿ, ಬಾಲಕಿಯ ಇತರ ಸಹಪಾಠಿಗಳ ಮುಂದೆ ಆಕೆಯನ್ನು ಅವಮಾನಿಸಲಾಗಿದೆ.

ಮೂಲಗಳ ಪ್ರಕಾರ ಬಾಲಕಿ ಮೊದಲ ಸಾಲಿನ ಬೆಂಚ್‌ನಲ್ಲಿ ಕುಳಿತಿದ್ದಳು. ತರಗತಿ ನಡೆಸಲು ಬಂದ ಶಿಕ್ಷಕಿ ಆಕೆಯಲ್ಲಿ ಜಾತಿ ಯಾವುದೆಂದು ಪ್ರಶ್ನಿಸಿದಾಗ ಹಿಂಜರಿಯುತ್ತ ಉತ್ತರಿಸಿದ ಆಕೆ ‘ವಾಲ್ಮೀಕಿ’ ಎಂದು ಹೇಳಿದ್ದಾಳೆ. ತಕ್ಷಣ ಅಸಮಧಾನಕ್ಕೊಳಗಾದ ಶಿಕ್ಷಕಿ ಕೊನೆಯ ಸಾಲಿನ ಬೆಂಚ್‌ಗೆ ಹೋಗುವಂತೆ ಆದೇಶಿಸಿದ್ದಾಳೆ. ಆಘಾತಕ್ಕೊಳಗಾದ ಬಾಲಕಿ ಮನೆಗೆ ಓಡಿ ಹೋಗಿ ಪೋಷಕರಿಗೆ ನಡೆದ ಸಂಗತಿಯನ್ನೆಲ್ಲ ವಿವರಿಸಿದ್ದಾಳೆ. ತಮ್ಮ ಮಗಳ ಜತೆ ಶಿಕ್ಷಕಿಯ ದುರ್ವರ್ತನೆಗೆ ಕೆಂಡಾಮಂಡಲರಾದ ಪೋಷಕರು ಶಾಲೆಗೆ ಬಂದು ಪ್ರತಿಭಟನೆ ನಡೆಸಿದ್ದು ಶಿಕ್ಷಕಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಆದರೆ ಶಿಕ್ಷಕಿ ಮೇಲಿನ ಆರೋಪವನ್ನು ತಳ್ಳಿ ಹಾಕಿರುವ ಶಾಲೆಯ ಪ್ರಾಂಶುಪಾಲೆ ರಜನಿ ಗೋಯಲ್, ಈ ಕುರಿತು ವಿಚಾರಿಸಿದ್ದೇನೆ. ತರಗತಿ ನಡೆಸುತ್ತಿದ್ದಾಗ ಸಹಪಾಠಿಗಳ ಜತೆ ಮಾತನ್ನಾಡುತ್ತಿದ್ದಳೆಂಬ ಕಾರಣಕ್ಕೆ ಸಿಟ್ಟಿಗೆದ್ದ ಶಿಕ್ಷಕಿ ಕೊನೆಯ ಸಾಲಲ್ಲಿ ಕುಳಿತುಕೊಳ್ಳುವಂತೆ ಹೇಳಿದ್ದಳು. ಅಶಿಸ್ತಿನಿಂದ ವರ್ತಿಸಿದ ಮಕ್ಕಳಿಗೆ ಸಾಮಾನ್ಯವಾಗಿ ಹೀಗೆ ಮಾಡಲಾಗುತ್ತದೆ, ಎಂದಿದ್ದಾರೆ.

ಶಿಕ್ಷಕಿ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.