ಅಂತರಾಷ್ಟ್ರೀಯ

ಬ್ರಿಟನ್​ನಲ್ಲಿ 9,362 ಕೋಟಿ ರೂ. ಹೂಡಿಕೆ; ಬ್ರಿಟನ್ ಪ್ರಧಾನಿ ಜೊತೆ ಮೋದಿ ಮಾತುಕತೆ

Pinterest LinkedIn Tumblr

ಲಂಡನ್: ಬ್ರಿಟನ್​ನಲ್ಲಿನ 5,750ಕ್ಕೂ ಹೆಚ್ಚು ಉದ್ಯೋಗಗಳನ್ನು ಉಳಿಸಲು ಭಾರತ ಬ್ರಿಟನ್​ನಲ್ಲಿ 9,362.32 ಕೋಟಿ ರೂ. ಹೂಡಿಕೆ ಮಾಡಲಿದೆ. ಬ್ರಿಟನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ ಪ್ರಧಾನಿ ತೆರೇಸಾ ಮೇ ಜತೆ ಮಾತುಕತೆ ನಡೆಸಿದ ಬಳಿಕ ಇದು ಸೇರಿ ವ್ಯಾಪಾರವಹಿವಾಟು, ತಂತ್ರಜ್ಞಾನ ಒಳಗೊಂಡಂತೆ ಹಲವು ಒಪ್ಪಂದಗಳಿಗೆ ಅಧಿಕಾರಿಗಳು ಸಹಿ ಹಾಕಿದರು.

ಇದಕ್ಕೂ ಮುನ್ನ ಸೀರೆಯುಟ್ಟ ಭಾರತೀಯ ಮೂಲದ ಮಹಿಳೆಯರ ಗುಂಪು ಡೋಲು ಬಡಿಯುತ್ತಾ, ನೃತ್ಯ ಮಾಡುತ್ತಾ ಮೋದಿ ಅವರನ್ನು ಸ್ವಾಗತಿಸಿದರು. ಬ್ರಿಟನ್ ಪ್ರಧಾನಿ ತೆರೇಸಾ ಮೇ ಜತೆ ಉಪಹಾರ ಸಭೆ ನಡೆಸಲು ಪ್ರಧಾನಿ ಮೋದಿ 10 ಡೌನಿಂಗ್ ಸ್ಟ್ರೀಟ್​ಗೆ ಆಗಮಿಸಿದಾಗ, ಫ್ರೆಂಡ್ಸ್ ಆಫ್ ಇಂಡಿಯಾ ಸೊಸೈಟಿ ಇಂಟರ್​ನ್ಯಾಷನಲ್ (ಎಫ್​ಐಎಸ್​ಐ) ಸಂಘಟನೆಯ ಸದಸ್ಯರು ಮತ್ತು ಭಾರತೀಯ ಮೂಲದ ಜನರು ‘ಚಕ್ ದೇ ಇಂಡಿಯಾ’ ಮತ್ತು ‘ಜೈ ಹಿಂದ್’ ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.

ರಾಷ್ಟ್ರಧ್ವಜಕ್ಕೆ ಅಪಮಾನ: ಪ್ರಧಾನಿ ನರೇಂದ್ರ ಮೋದಿ 53 ಕಾಮನ್ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ಸ್ಥಳದಲ್ಲಿ ಖಲಿಸ್ತಾನಿವಾದಿಗಳು ಮತ್ತು ಕಾಶ್ಮೀರದ ಪ್ರತ್ಯೇಕತಾವಾದಿಗಳು ಭಾರಿ ಪ್ರತಿಭಟನೆ ನಡೆಸಿದರು. ಕಾಮನ್ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರ ಸಭೆ (ಸಿಎಚ್​ಒಜಿಎಂ) ನಡೆಯುವ ಸ್ಥಳದಲ್ಲಿ ಅಧಿಕೃತವಾಗಿ ಅಳವಡಿಸಲಾಗಿದ್ದ ಹಲವು ಧ್ವಜಸ್ತಂಭಗಳ ಪೈಕಿ ಒಂದು ಧ್ವಜಸ್ತಂಭದಲ್ಲಿ ಆರೋಹಣ ಮಾಡಲಾಗಿದ್ದ ರಾಷ್ಟ್ರಧ್ವಜವನ್ನು ಪ್ರತಿಭಟನಾಕಾರರು ಹರಿದು ಹಾಕಿ ಅಪಮಾನ ಮಾಡಿದರು. ಇದರಿಂದಾಗಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು.

ಕಠುವಾ ಘಟನೆಗೆ ಪ್ರತಿಭಟನೆ: ಕ್ಯಾಸ್ಟ್​ವಾಚ್ ಯುಕೆ ಮತ್ತು ಸೌತ್ ಏಷ್ಯಾ ಸಾಲಿಡಾರಿಟಿ ಗ್ರೂಪ್​ನ ಸದಸ್ಯರು ‘ಮೋದಿ, ನಿಮ್ಮ ಕೈ ರಕ್ತಸಿಕ್ತವಾಗಿದೆ’ ‘ಮೋದಿ ನಿಮಗೆ ಸ್ವಾಗತವಿಲ್ಲ’ ಎಂಬ ಭಿತ್ತಿಪತ್ರ ಹಿಡಿದು ಪ್ರತಿಭಟಿಸಿದರು.

ಜಮ್ಮು ಮತ್ತು ಕಾಶ್ಮೀರದ ಕಠುವಾದಲ್ಲಿ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ಹಾಗೂ ಕರ್ನಾಟಕದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ, ಇನ್ನೊಂದು ಗುಂಪು ಪ್ರತಿಭಟನೆ ಮಾಡಿತು. ಇವರೆಲ್ಲರೂ ಅತ್ಯಾಚಾರಕ್ಕೆ ಒಳಗಾದ ಬಾಲಕಿ ಹಾಗೂ ಗೌರಿ ಲಂಕೇಶ್ ಭಾವಚಿತ್ರದೊಂದಿಗೆ ಪ್ರತಿಭಟಿಸಿದರು. ಬ್ರಿಟನ್​ನಲ್ಲಿ ನೆಲೆಸಿರುವ ಭಾರತೀಯ ಮಹಿಳೆಯ ಸಂಘಟನೆಗಳ ಕಾರ್ಯಕರ್ತರು ಬಿಳಿ ಸೀರೆಯುಟ್ಟು, ಭಾರತದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯವನ್ನು ಖಂಡಿಸಿ ಮೌನಪ್ರತಿಭಟನೆ ಮಾಡಿದರು.

Comments are closed.