ಕ್ರೀಡೆ

ಯಾರಿಗೂ ಬೇಡವಾಗಿದ್ದ ಕ್ರಿಸ್ ಗೇಲ್’ಗೆ ಕೊನೆಗೆ ಸಿಕ್ಕಿದ್ದು ‘ಪ್ರೀತಿ’; ಈಗ ಎಲ್ಲರ ಚಿತ್ತ ಗೇಲ್’ನತ್ತ !

Pinterest LinkedIn Tumblr

ಮೊಹಾಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ‘ಯೂನಿವರ್ಸಲ್ ಬಾಸ್’ ಖ್ಯಾತಿಯ ವೆಸ್ಟ್‌ಇಂಡೀಸ್ ದೈತ್ಯ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್, ಐಪಿಎಲ್‌ನಲ್ಲಿ ದಾಖಲೆಯ 6ನೇ ಶತಕ ಬಾರಿಸಿದ್ದಾರೆ.

ವರ್ಷಾರಂಭದಲ್ಲಿ ಐಪಿಎಲ್ 2018ನೇ ಆವೃತ್ತಿಗಾಗಿ ನಡೆದ ಹರಾಜಿನಲ್ಲಿ ಗೇಲ್ ಅವರನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹಿಂಜರಿದಿತ್ತು.

ಆದರೆ ಯಾರಿಗೂ ಬೇಡವಾದ ಗೇಲ್ ಮೇಲೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ‘ಪ್ರೀತಿ’ ತೋರಿತ್ತು. ಸ್ಫೋಟಕ ಬ್ಯಾಟ್ಸ್‌ಮನ್ ಗೇಲ್ ಮೇಲೆ ಪ್ರೀತಿ ಮೂಡುವಂತೆ ಮಾಡಿದ್ದು ಮತ್ತೊಬ್ಬ ಸ್ಫೋಟಕ ಬ್ಯಾಟ್ಸ್‌ಮನ್.

ಗೇಲ್ ಅವರನ್ನು ಮೂಲಬೆಲೆ ಎರಡು ಕೋಟಿ ರೂ.ಗಳಿಗೆ ಖರೀದಿಸುವಲ್ಲಿ ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ನಿರ್ಣಾಯಕ ಪಾತ್ರ ವಹಿಸಿದ್ದರು.

ಇದೀಗ ಐಪಿಎಲ್‌ನಲ್ಲಿ ಗೇಲ್ ಸಿಕ್ಸರ್ ಸುನಾಮಿ ಜೋರಾಗುತ್ತಿದೆ. ಇದರಲ್ಲಿ ಎದುರಾಳಿ ತಂಡಗಳು ಕೊಚ್ಚಿ ಹೋಗುತ್ತಿದೆ. ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅರ್ಧಶತಕ ಬಾರಿಸಿರುವ ಗೇಲ್ ಇದೀಗ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧವೂ ಸ್ಫೋಟಿಸಿದ್ದಾರೆ.

ಕ್ರಿಸ್ ಗೇಲ್

ಐಪಿಎಲ್‌ನಲ್ಲಿ ಅತ್ಯಂತ ಪ್ರಬಲ ಬೌಲಿಂಗ್ ಪಡೆ ಹೊಂದಿರುವ ಎಸ್‌ಆರ್‌ಎಚ್ ತಂಡದ ವಿರುದ್ಧ ಗೇಲ್ 11 ಸಿಕ್ಸರ್‌ಗಳನ್ನು ಸಿಡಿಸಿ ತಮ್ಮ ತಾಕತ್ತನ್ನು ಮೆರೆದಿದ್ದಾರೆ. ಅಲ್ಲದೆ ಐಪಿಎಲ್ ಇತಿಹಾಸದಲ್ಲೇ ದಾಖಲೆಯ 6ನೇ ಶತಕ ಬಾರಿಸಿದ ಖ್ಯಾತಿಗೆ ಪಾತ್ರವಾಗಿದ್ದಾರೆ.

ಗೇಲ್ ಹಿಂಬಾಲಿಸುತ್ತಿರುವ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹೆಸರಲ್ಲಿ ನಾಲ್ಕು ಶತಕ ಮಾತ್ರವಿದೆ. ಇದೆರೂಂದಿಗೆ ಕೊಹ್ಲಿ ಜತೆಗಿನ ಅಂತರವನ್ನು ವೃದ್ಧಿಸಿಕೊಂಡಿದ್ದಾರೆ.

ಗೇಲ್ ಅವರ ಶತಕ 58 ಎಸೆತಗಳಲ್ಲಿ ಹರಿದು ಬಂದಿದ್ದವು. ಅಂತಿಮವಾಗಿ 63 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ 11 ಸಿಕ್ಸರ್‌ಗಳ ನೆರವಿನಿಂದ 104 ರನ್ ಗಳಿಸಿ ಅಜೇಯರಾಗುಳಿದಿದ್ದರು. ಒಟ್ಟಿನಲ್ಲಿ ವಿಂಡೀಸ್‌ನ ಈ ದೈತ್ಯ ಬ್ಯಾಟ್ಸ್‌ಮನ್‌ರನ್ನು ಕಡೆಗಣಿಸಿದ್ದು ‘ಈ ಬಾರಿ ಕಪ್ ನಮ್ದೆ’ ಎನ್ನುತ್ತಿರುವ ಆರ್‌ಸಿಬಿಗೆ ಭಾರಿ ನಷ್ಟವಾಗಲಿದೆ ಎಂಬುದು ಕ್ರಿಕೆಟ್ ಪಂಡಿತರ ಅಂಬೋಣ.

ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕಗಳು:

ಕ್ರಿಸ್ ಗೇಲ್: 6
ವಿರಾಟ್ ಕೊಹ್ಲಿ: 4
ಎಬಿಡಿ ವಿಲಿಯರ್ಸ್/ಡೇವಿಡ್ ವಾರ್ನರ್: 3

Comments are closed.