ಅಂತರಾಷ್ಟ್ರೀಯ

8 ವರ್ಷಗಳ ಹಿಂದೆ ‘ಕೊಲೆಯಾದ’ ಮಹಿಳೆ 2ನೇ ಗಂಡನ ಜತೆ ಪ್ರತ್ಯಕ್ಷ…!

Pinterest LinkedIn Tumblr


ಲಾಹೋರ್‌: ಎಂಟು ವರ್ಷಗಳ ಹಿಂದೆ ತನ್ನ ಪತಿಯಿಂದ ಕೊಲೆಗೀಡಾಗಿದ್ದಳು ಎಂದು ನಂಬಲಾಗಿದ್ದ ಮಹಿಳೆಯೊಬ್ಬಳು ಇದೀಗ ಎರಡನೇ ಗಂಡ ಹಾಗೂ 6 ಮಕ್ಕಳ ಜತೆ ಪ್ರತ್ಯಕ್ಷಳಾಗಿದ್ದಾಳೆ. ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ಆಕೆಯನ್ನು ಬಂಧಿಸಲಾಗಿದೆ.

30 ವರ್ಷದ ಅಸ್ಮಾ ಬೀಬಿ ಲಾಹೋರ್‌ನಿಂದ 250 ಕಿ.ಮೀ ದೂರದ ಝೀಲಂ ಜಿಲ್ಲೆಯ ಫಲ್ಯಾನ್‌ ಗ್ರಾಮದಲ್ಲಿ ನೀಲಂ ಎಂಬ ಹೆಸರಿನಲ್ಲಿ ಮತ್ತೆ ಕಾಣಿಸಿಕೊಂಡಿದ್ದಾಳೆ.

ಆಕೆಯ ಮೊದಲ ಪತಿಯ ಕುಟುಂಬಸ್ಥರು ದೂರು ಸಲ್ಲಿಸಿದ ಬಳಿಕ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. 2009ರಲ್ಲಿ ಇಬ್ರಾರ್‌ ಅಹ್ಮದ್‌ ಎಂಬಾತ ಅಸ್ಮಾಳನ್ನು ಮದುವೆಯಾಗಿದ್ದ ಎಂದು ಝೀಲಂ ಪೊಲೀಸ್‌ ವಕ್ತಾರ ತಿಳಿಸಿದರು.

2010ರಲ್ಲಿ ಅಸ್ಮಾ ನಾಪತ್ತೆಯಾದಳು. ಆಕೆಯನ್ನು ಗಂಡ ಇಬ್ರಾರ್‌ ಅಹ್ಮದ್‌ ಕೊಲೆ ಮಾಡಿದ್ದಾನೆ ಎಂದು ಆಕೆಯ ತಾಯಿ ದೂರು ಸಲ್ಲಿಸಿದ್ದಳು. ಪೊಲೀಸರು ಪಾಕ್‌ ದಂಡ ಸಂಹಿತೆ (ಪಿಪಿಸಿ) 302ರ ಅನ್ವಯ ಕೊಲೆ ಪ್ರಕರಣ ದಾಖಲಿಸಿ ಇಬ್ರಾರ್‌ನನ್ನು ಬಂಧಿಸಿದ್ದರು.

ಸ್ವಲ್ಪ ಸಮಯದ ನಂತರ ‘ಪರಿಹಾರದ ಹಣ ದೊರೆತ ಬಳಿಕ’ ಅಸ್ಮಾಳ ತಾಯಿ ದೂರು ವಾಪಸ್ ಪಡೆದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಮದುವೆಗೆ ಮುಂಚೆಯೇ ಸಂಬಂಧವಿರಿಸಿಕೊಂಡಿದ್ದ ಅದೇ ಗ್ರಾಮದ ನಜೀರ್‌ ಅಹ್ಮದ್‌ ಎಂಬಾತನ ಜತೆ ಅಸ್ಮಾ ಪರಾರಿಯಾಗಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಅಹ್ಮದ್‌ ಜತೆ ಎರಡನೇ ಮದುವೆಯ ಬಳಿಕ ಉದ್ಯೋಗಕ್ಕಾಗಿ ದುಬೈಗೆ ತೆರಳಿದಳು. ಕಳೆದ 8 ವರ್ಷಗಳಲ್ಲಿ 6 ಮಕ್ಕಳಿಗೆ ಜನ್ಮನೀಡಿದ್ದಳು. ಅಹ್ಮದ್‌ ದುಬೈನ ಉದ್ಯೋಗ ಕಳೆದುಕೊಂಡ ಬಳಿಕ ಈ ದಂಪತಿ 6 ಮಕ್ಕಳೊಂದಿಗೆ ಪಾಕಿಸ್ತಾನಕ್ಕೆ ಮರಳಿದ್ದರು.

ಇದೀಗ ಅಸ್ಮಾ ಮತ್ತು ಆಕೆಯ ಎರಡನೇ ಗಂಡನ ವಿರುದ್ಧ ಪಿಪಿಸಿ 494 ಮತ್ತು 420ರ ಅನ್ವಯ ಮೊದಲ ಗಂಡನಿಗೆ ವಿಚ್ಛೇದನ ನೀಡದೆ ಎರಡನೇ ಮದುವೆಯಾಗಿದ್ದಕ್ಕೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

‘ನನ್ನ ಇಚ್ಛೆಗೆ ವಿರುದ್ಧವಾಗಿ ಇಬ್ರಾರ್‌ ಜತೆ ಮದುವೆ ಮಾಡಲಾಗಿತ್ತು. ನಾನು ಅಹ್ಮದ್‌ನನ್ನು ಪ್ರೀತಿಸಿದ್ದೆ. ಆತನಿಗೆ ದುಬೈನಲ್ಲಿ ಉದ್ಯೋಗವಿತ್ತು. ಅಲ್ಲಿ ನೆಲೆಸುವ ಉದ್ದೇಶದಿಂದ ನಾನು ಆತನ ಜತೆ ಮದುವೆಯಾದೆ’ ಎಂದು ಅಸ್ಮಾ ಹೇಳಿದ್ದು, ಎರಡನೇ ಗಂಡನ ಜತೆ ಪರಾರಿಯಾಗಿದ್ದಕ್ಕೆ ಯಾವುದೇ ವಿಷಾದವಿಲ್ಲ ಎಂದಿದ್ದಾಳೆ.

ಝೀಲಂನ ಸಿವಿಲ್ ನ್ಯಾಯಾಧೀಶ ಸೋಬಿಯಾ ಖಾಟೂನ್ ಅಸ್ಮಾಳ ಜಾಮೀನು ಅರ್ಜಿಯನ್ನು ಸ್ವೀಕರಿಸಿದ್ದು, ಇಬ್ಬರೂ ತಲಾ 50,000 ರೂ.ಗಳ ಭದ್ರತಾ ಬಾಂಡ್‌ ಸಲ್ಲಿಸುವಂತೆ ಆದೇಶಿಸಿದ್ದಾರೆ.

Comments are closed.