ರಾಷ್ಟ್ರೀಯ

‘ಗಾಢ ಪ್ರೇಮ’ದ ದೈಹಿಕ ಸಂಪರ್ಕ ಅತ್ಯಾಚಾರವಲ್ಲ: ಬಾಂಬೆ ಹೈಕೋರ್ಟ್

Pinterest LinkedIn Tumblr


ಪಣಜಿ: ಗಾಢವಾದ ಪ್ರೇಮದಿಂದ ಯುವಕ-ಯುವತಿಯರು ಸ್ವಯಂ ಪ್ರೇರಿತವಾಗಿ ಬೆಳೆಸುವ ದೈಹಿಕ ಸಂಪರ್ಕವನ್ನು ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್‌ನ ಗೋವಾ ಪೀಠ ಅಭಿಪ್ರಾಯಪಟ್ಟಿದೆ.

ವಿವಾಹವಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ ಆರೋಪಿಗೆ 7 ವರ್ಷ ಜೈಲು ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿದ್ದ ವಿಚಾರಣೆ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ಕ್ಯಾಸಿನೋದಲ್ಲಿ ಕೆಲಸ ಮಾಡುತ್ತಿದ್ದ ಯುವಕ ಹಾಗೂ ಯುವತಿ ನಡುವೆ ಪ್ರೇಮಾಂಕುರವಾಗಿತ್ತು. ಪ್ರಿಯಕರ ಯೋಗೇಶ್ ಪಾಲೇಕರ್ ತನ್ನ ಕುಟುಂಬ ವರ್ಗಕ್ಕೆ ಪರಿಚಯಿಸಲೆಂದು ಪ್ರೇಯಸಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದ. ಆದರೆ, ಮನೆಯಲ್ಲಿ ಯಾರೂ ಇಲ್ಲದ ಕಾರಣ ಇಬ್ಬರು ಅಲ್ಲೆ ರಾತ್ರಿ ಕಳೆಯಲು ನಿರ್ಧರಿಸಿದ್ದರು. ಈ ವೇಳೆ ಇಬ್ಬರ ನಡುವೆ ದೈಹಿಕ ಸಂಪರ್ಕ ಉಂಟಾಗಿತ್ತು. ಆದರೆ, ಮಾರನೇ ದಿನ ಯುವತಿ ಅತ್ಯಾಚಾರದ ದೂರು ದಾಖಲಿಸಿದ್ದಳು.

ಅನಂತರ ಈ ಜೋಡಿಯ ನಡುವೆ ಮೂರ್ನಾಲ್ಕು ಬಾರಿ ಲೈಂಗಿಕ ಸಂಪರ್ಕ ಏರ್ಪಟ್ಟಿತ್ತು. ಆದರೆ, ಯುವತಿ ಕೆಳ ಜಾತಿಗೆ ಸೇರಿದವಳು ಎಂದು ಯುವಕ ವಿವಾಹವಾಗಲು ನಿರಾಕರಿಸಿದ್ದ.

‘ನನ್ನನ್ನು ವಿವಾಹವಾಗುವುದಾಗಿ ಭರವಸೆ ನೀಡಿದ್ದರಿಂದ ಲೈಂಗಿಕ ಕ್ರಿಯೆಗೆ ಒಪ್ಪಿಕೊಂಡಿದ್ದೆ. ಆದರೆ, ಆತ ವಿವಾಹ ನಿರಾಕರಿಸಿದ್ದಾನೆ’ ಎಂದು ಯುವತಿ ಅತ್ಯಾಚಾರ ದೂರು ದಾಖಲಿಸಿದ್ದಳು.

Comments are closed.