ಅಂತರಾಷ್ಟ್ರೀಯ

ಡೇಟಾ ಸೋರಿಕೆ ಮಾಹಿತಿ ನೀಡಿ: ಫೇಸ್‌ಬುಕ್‌ಗೆ ಐಟಿ ಸಚಿವಾಲಯ ಪತ್ರ

Pinterest LinkedIn Tumblr


ಹೊಸದಿಲ್ಲಿ: ಬಳಕೆದಾರರ ಡೇಟಾ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಒದಗಿಸುವಂತೆ ಫೇಸ್‌ಬುಕ್‌ಗೆ ಸಂಪರ್ಕ ಮತ್ತು ತಂತ್ರಜ್ಞಾನ ಸಚಿವಾಲಯ ಪತ್ರ ಬರೆದಿದೆ.

ಕೇಂಬ್ರಿಡ್ಜ್‌ ಅನಾಲಿಟಿಕಾ ಸಂಸ್ಥೆ ಹಲವು ದೇಶಗಳಲ್ಲಿ ಚುನಾವಣೆಗಳ ಮೇಲೆ ಪ್ರಭಾವ ಬೀರಲು ಫೇಸ್‌ಬುಕ್‌ ಬಳಕೆದಾರರ ಡೇಟಾ ಬಳಸಿಕೊಂಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಸರಕಾರ ಈ ಪತ್ರ ಬರೆದಿದೆ.

ಪತ್ರದಲ್ಲಿ ಹಲವು ಗಂಭೀರ ಪ್ರಶ್ನೆಗಳನ್ನು ಸರಕಾರ ಎತ್ತಿದೆ.

‘ಭಾರತೀಯ ಮತದಾರರು ಮತ್ತು ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ಸಿಎ (ಕೇಂಬ್ರಿಡ್ಜ್‌ ಅನಾಲಿಟಿಕಾ) ಜತೆ ಹಂಚಿಕೊಳ್ಳಲಾಗಿದೆಯೆ?

‘ಫೇಸ್‌ಬುಕ್‌ ಅಥವಾ ಅದರ ಸಂಬಂಧಿತ ಏಜೆನ್ಸಿಗಳು ಫೇಸ್‌ಬುಕ್‌ನ ಡೇಟಾವನ್ನು ಭಾರತದಲ್ಲಿ ಈ ಹಿಂದಿನ ಚುನಾವಣೆ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರಲು ಬಳಸಿಕೊಳ್ಳಲಾಗಿತ್ತೆ?’

ಏಪ್ರಿಲ್‌ 7ರ ಒಳಗೆ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಲ್ಲಿಸುವಂತೆ ಕಂಪನಿಗೆ ಸಚಿವಾಲಯ ಸೂಚಿಸಿದೆ.

ಕಳೆದ ವಾರ ಕೇಂಬ್ರಿಡ್ಜ್‌ ಅನಾಲಿಟಿಕಾಗೆ ನೋಟೀಸ್‌ ಕಳುಹಿಸಲಾಗಿತ್ತು. ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣ ಮಾಧ್ಯಮಗಳು ದೇಶದ ಚುನಾವಣೆ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದರೆ ಕಠಿಣ ಕ್ರಮ ಎದುರಿಸಬೇಕಾದೀತು ಎಂದು ಐಟಿ ಮತ್ತು ಕಾನೂನು ಸಚಿವ ರವಿಶಂಕರ್ ಪ್ರಸಾದ್‌ ಎಚ್ಚರಿಕೆ ನೀಡಿದ್ದರು.

Comments are closed.