ಅಂತರಾಷ್ಟ್ರೀಯ

ಇದು ಸತ್ಯ, ಆದರೂ ವಿಚಿತ್ರ : ಶವ ಪೆಟ್ಟಿಗೆಯಲ್ಲೇ ಹೆತ್ತ ಮೃತ ಗರ್ಭಿಣಿ

Pinterest LinkedIn Tumblr


ರೋಮ್‌ : ಮೃತ ಮಹಿಳೆಯೊಬ್ಬಳು ದಫ‌ನಗೊಂಡ ಬಳಿಕ ಶವ ಪೆಟ್ಟಿಗೆಯಲ್ಲೇ ಹೆತ್ತ ಹಾಗೂ ಸಾವಿಗೆ ಒಂದು ವಾರ ಇರುವಾಗ ತಲೆಬುರುಡೆಗೆ ತೂತು ಕೊರೆವ ಶಸ್ತ್ರ ಚಿಕಿತ್ಸೆಗೆ ಒಳಪಟ್ಟ ಅತ್ಯರೂಪದ ಮತ್ತು ಅತ್ಯಾಶ್ಚರ್ಯ ಉಂಟುಮಾಡುವ 7 ಅಥವಾ 8ನೇ ಶತಮಾನ ಕಾಲದ ಅಸ್ಥಿಪಂಜರವೊಂದನ್ನು ಇಟಲಿಯ ಪ್ರಾಕ್ತನ ಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ.

ಇಟಲಿಯ ಇಮೋಲಾದಲ್ಲಿ ಅತ್ಯಂತ ಸುರಕ್ಷಿತವಾಗಿ ಕಾಪಿಡಲಾಗಿದ್ದ ಈ ಪುರಾತನ ಅವಶೇಷವನ್ನು ಪತ್ತೆ ಹಚ್ಚಲಾಗಿದ್ದು ಶವ ಪೆಟ್ಟಿಗೆಯಲ್ಲಿದ್ದ ಮಹಿಳೆಯ ಅಸ್ಥಿಪಂಜರದ ಕೂಲಂಕಷ ಅಧ್ಯಯನವನ್ನು ಫೆರಾರಾ ಮತ್ತು ಬಲೋನಾ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ್ದಾರೆ.

ಮೃತ ಮಹಿಳೆಯ ಶವ ದಫ‌ನ ಮಾಡಿದ ಬಳಿಕ ಶವಪಟ್ಟಿಗೆಯಲ್ಲೇ ಆಕೆ ಹೆತ್ತ ಅತ್ಯಪರೂಪದ ದಾಖಲೆ ಇದಾಗಿದೆ ಎಂದು ಸಂಶೋಧಕರು ಹೇಳಿದಾರೆ.

ಶವ ಪೆಟ್ಟಿಗೆಯಲ್ಲಿದ್ದ ಮಹಿಳೆಯ ಅಸ್ಥಿ ಪಂಜರದ ಅಧ್ಯಯನದಿಂದ ಇದು ಸುಮಾರು 25ರಿಂದ 30 ವರ್ಷ ಪ್ರಾಯದ ಮಹಿಳೆಯದ್ದೆಂದು ಕಂಡುಕೊಳ್ಳಲಾಗಿದೆ. ಮೃತಳಾದ ಬಳಿಕ ದಫ‌ನಗೊಂಡ ಸಂದರ್ಭದಲ್ಲಿ ಆಕೆಯು 38 ವಾರಗಳ ಗರ್ಭವತಿ ಯಾಗಿದ್ದುದನ್ನೂ ಅಧ್ಯಯನದಲ್ಲಿ ಸಂಶೋಧಕರು ಕಂಡುಕೊಂಡಿದ್ದಾರೆ.

ಮಹಿಳೆಯ ಅಸ್ಥಿಪಂಜರದ ಎರಡು ಕಾಲುಗಳ ನಡುವೆ ಬಹುತೇಕ ಪೂರ್ಣ ಪ್ರಮಾಣದ ಭ್ರೂಣ ಹೊರಬಂದಿರುವುದನ್ನು ಕಾಣಲಾಗಿದೆ. ಹಾಗಿದ್ದರೂ ಮಗುವಿನ ಕಾಲಿನ ಎಲುಬುಗಳು ಪೆಲ್ವಿಕ್‌ ಕ್ಯಾವಿಟಿ (ಕೆಳಹೊಟ್ಟೆಯ ಟೊಳ್ಳು ಪ್ರದೇಶ) ಯಿಂದ ಹೊರ ಬಂದಂತೆ ಕಾಣುವುದಿಲ್ಲ. ಆದರೆ ಶಿರೋಭಾಗ ಹೊರಬಂದಿರುವುದು ಕಂಡುಬರುತ್ತದೆ. ಒಟ್ಟಿನಲ್ಲಿ ಭ್ರೂಣವು ಆಂಶಿಕವಾಗಿ ಹೊರಬಂದಂತಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಇನ್ನೊಂದು ಅತೀ ಮುಖ್ಯ ಸಂಗತಿ ಎಂದರೆ ಮೃತ ಮಹಿಳೆಯು ಸಾಯುವದಕ್ಕೆ ಕನಿಷ್ಠ ಒಂದು ವಾರ ಇರುವಾಗ ತಲೆ ಬುರುಡೆಗೆ ತೂತು ಕೊರೆವ ಶಸ್ತ್ರ ಚಿಕಿತ್ಸೆಗೆ ಗುರಿಯಾಗಿರುವುದು ಕಂಡು ಬರುತ್ತದೆ. ತಲೆ ಬುರುಡೆಗೆ ತೂತು ಕೊರೆಯುವ ಶಸ್ತ್ರ ಚಿಕಿತ್ಸೆಯು ಅತ್ಯಂತ ಹಳೇ ವೈದ್ಯಕೀಯ ಪ್ರಕ್ರಿಯೆಯಾಗಿದೆ. ಈ ಪ್ರಕ್ರಿಯೆಗೆ ಒಳಪಟ್ಟ ಮಹಿಳೆಯ ಎಲುಬು ಗುಣಮುಖವಾಗಿರುವ ಲಕ್ಷಣವನ್ನು ಕಾಣಿಸುತ್ತದೆ. ಎಂದರೆ ತಲೆಬರುಡೆಗೆ ತೂತು ಕೊರೆದು ನೀಡುವ ಶಸ್ತ್ರ ಚಿಕಿತ್ಸೆ ನಡೆದ ಕನಿಷ್ಠ ಒಂದು ವಾರ ಮಹಿಳೆಯು ಬದುಕಿದ್ದುದು ಗೊತ್ತಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಶವಪೆಟ್ಟಿಗೆಯಲ್ಲಿ ಜನ್ಮ ಮತ್ತು ತಲೆಬುರುಡೆಗೆ ತೂತು ಕೊರೆದು ಚಿಕಿತ್ಸೆ ನೀಡಲ್ಪಟ್ಟ ಪುರಾತನ ಅಸ್ಥಿಪಂಜರ ಪತ್ತೆಯಾಗಿರುವುದು ಅಪರೂಪದಲ್ಲೇ ಅಪರೂಪದ್ದಾಗಿದೆ ಎಂದಿರುವ ಸಂಶೋಧಕರ ಈ ಅಧ್ಯಯನ ವರದಿಯು ವಿಶ್ವ ನ್ಯೂರೋಸರ್ಜರಿ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

-ಉದಯವಾಣಿ

Comments are closed.