ಅಂತರಾಷ್ಟ್ರೀಯ

ಫ್ಲೋರಿಡಾ ಶೂಟಿಂಗ್​: ಹತ್ತಾರು ವಿದ್ಯಾರ್ಥಿಗಳನ್ನು ರಕ್ಷಿಸಿದ ಭಾರತೀಯ ಮೂಲದ ಶಿಕ್ಷಕಿ

Pinterest LinkedIn Tumblr


ನ್ಯೂಯಾರ್ಕ್​: ಅಮೆರಿಕದ ಫ್ಲೋರಿಡಾದ ಶಾಲೆಯೊಂದರಲ್ಲಿ ಕಳೆದ ಬುಧವಾರ ನಡೆದ ಗುಂಡಿನ ದಾಳಿ ಸಂದರ್ಭದಲ್ಲಿ ಭಾರತೀಯ ಮೂಲದ ಶಿಕ್ಷಕಿಯೊಬ್ಬರು ಹತ್ತಾರು ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ಇವರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪಾರ್ಕ್​ಲ್ಯಾಂಡ್​ನ ಮಾರ್ಜರಿ ಸ್ಟೋನ್​ವ್ಯಾನ್ ಡೋಗ್ಲಾಸ್ ಹೈಸ್ಕೂಲ್ ನಲ್ಲಿ ಶಾಂತಿ ವಿಶ್ವನಾಥನ್​ ಅವರು ಗಣಿತ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗುಂಡಿನ ದಾಳಿ ನಡೆದ ಸಂದರ್ಭದಲ್ಲಿ ಫೈರ್ ಅಲಾರಾಂ ಮೊಳಗಿಸಲಾಯಿತು. ಈ ಸಂದರ್ಭದಲ್ಲಿ ತಕ್ಷಣ ಸಮಯೋಚಿತ ನಿರ್ಧಾರ ತೆಗೆದುಕೊಂಡ ಶಾಂತಿ ಅವರು ತಾವು ಪಾಠ ಮಾಡುತ್ತಿದ್ದ ತರಗತಿಯ ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿದ್ದಾರೆ. ಜತೆಗೆ ಮಕ್ಕಳನ್ನು ನೆಲದ ಮೇಲೆ ಮಲಗುವಂತೆ ತಿಳಿಸಿ ದಾಳಿಕೋರನಿಗೆ ಮಕ್ಕಳು ಕಾಣಿಸದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.

ಇಷ್ಟೇ ಅಲ್ಲದೆ ಪೊಲೀಸರು ಬಂದು ತರಗತಿಯ ಬಾಗಿಲು ಬಡಿದಾಗಲೂ ಇದು ದಾಳಿಕೋರನ ಸಂಚಿರಬಹುದು ಎಂದು ಬಾಗಿಲು ತೆರೆದಿರಲಿಲ್ಲ. ಕೊನೆಗೆ ಕಿಟಕಿಯ ಮೂಲಕ ಪೊಲೀಸರು ತರಗತಿಗೆ ಪ್ರವೇಶಿಸಿ ಮಕ್ಕಳನ್ನು ರಕ್ಷಿಸಿದ್ದಾರೆ.

ಶಿಕ್ಷಕಿಯ ಧೈರ್ಯ ಮತ್ತು ಸಮಯೋಚಿತ ನಿರ್ಧಾರಕ್ಕೆ ವಿದ್ಯಾರ್ಥಿಗಳ ಪೋಷಕರು ಮೆಚ್ಚುಗೆ ಸೂಚಿಸಿದ್ದಾರೆ.

ಗುಂಡಿನ ದಾಳಿಯಲ್ಲಿ ಓರ್ವ ಶಿಕ್ಷಕ ಸೇರಿದಂತೆ 17 ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದರು ಮತ್ತು ಹಲವರು ಗಾಯಗೊಂಡಿದ್ದರು. ಈ ಸಂಬಂಧ ಶಾಲೆಯ ಹಳೆಯ ವಿದ್ಯಾರ್ಥಿ ನಿಕೋಲಸ್​ ಕ್ರೂಸ್​ನನ್ನು ಪೊಲೀಸರು ಬಂಧಿಸಿದ್ದರು.

Comments are closed.