ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಸೇರಿದ ಮೂವತ್ತು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಅದಕ್ಕೆ ಸಂಬಂಧಿಸಿದ ಗಲಭೆಯನ್ನು ನಿಯಂತ್ರಿಸುವ ವೇಳೆ ಪೊಲೀಸರು ಗುಂಡು ಹಾರಿಸಿದ್ದರಿಂದ ವ್ಯಕ್ತಿ ಅಸುನೀಗಿದ್ದಾನೆ. ಜತೆಗೆ ಐವರು ಗಾಯಗೊಂಡಿದ್ದಾರೆ.
ರಾಜಧಾನಿ ಡಾಕಾದಿಂದ 300 ಕಿಮೀ ದೂರವಿರುವ ರಂಗ್‌ಪುರ್ ಜಿಲ್ಲೆಯ ಠಾಕೂರ್‌ಪಾರಾದಲ್ಲಿ ಈ ಘಟನೆ ನಡೆದಿದೆ. ಫೇಸ್‌ಬುಕ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಅಪ್‌ಲೋಡ್ ಮಾಡಿದ್ದರಿಂದ ಈ ಘಟನೆ ನಡೆದಿದೆ ಎಂದು “ಢಾಕಾ ಟ್ರಿಬ್ಯೂನ್’ ವರದಿಯಲ್ಲಿ ತಿಳಿಸಲಾಗಿದೆ.
ಬೆಂಕಿ ಹಚ್ಚಿದ ಬಳಿಕ ಉಂಟಾದ ಕೋಲಾಹಲ ನಿಯಂತ್ರಿಸಲು ಪೊಲೀಸರು ಆರಂಭದಲ್ಲಿ ರಬ್ಬರ್ ಬುಲೆಟ್, ಅಶ್ರುವಾಯು ಪ್ರಯೋಗ ನಡೆಸಿದ್ದರು. ಠಾಕೂರ್ ಪಾರಾಕ್ಕೆ ಸುತ್ತಮುತ್ತಲ ಗ್ರಾಮಗಳಿಂದ 20 ಸಾವಿರ ಮಂದಿ ನುಗ್ಗಿ ಗದ್ದಲವೆಬ್ಬಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 30 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಗೆ ಕಷ್ಟವೂ ಆಗಿತ್ತು.
-ಉದಯವಾಣಿ