ಅಂತರಾಷ್ಟ್ರೀಯ

ನವಾಜ್‌ ಷರೀಫ್‌, ಮಗಳು ಆರೋಪಿಗಳು: ಪಾಕ್ ಕೋರ್ಟ್‌

Pinterest LinkedIn Tumblr


ಇಸ್ಲಾಮಾಬಾದ್‌: ಪನಾಮ ಪೇಪರ್ಸ್ ಲೀಕ್ ಹಗರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಉತ್ತರದಾಯಿತ್ವ ಸಂಸ್ಥೆ ಸಲ್ಲಿದ್ದ ದೋಷಾರೋಪ ಪಟ್ಟಿಯನ್ನು ಪರಿಶೀಲಿಸಿದ ಪಾಕಿಸ್ತಾನ ಭ್ರಷ್ಟಾಚಾರ ನಿಗ್ರಹ ಕೋರ್ಟ್, ಗುರುವಾರ ಪಾಕ್‌ನ ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಅವರ ಪುತ್ರಿ ಮತ್ತು ಅಳಿಯನ ವಿರುದ್ಧ ದೋಷಾರೋಪ ಹೊರಿಸಿದೆ.

ನವಾಜ್‌ ಷರೀಫ್, ಪುತ್ರಿ ಮರಿಯಂ ಹಾಗೂ ಅಳಿಯ ಮೊಹಮ್ಮದ್‌ ಸಪ್ದರ್‌ ವಿರುದ್ಧ ಲಂಡನ್‌ನಲ್ಲಿರುವ ಅಕ್ರಮ ಆಸ್ತಿ ಕುರಿತು ದೋಷಾರೋಪ ಪಟ್ಟಿಯನ್ನು ಎನ್ಎಬಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಈ ಮೂವರು ಆರೋಪಿಗಳು ತಪ್ಪಿತಸ್ಥರು ಎಂದು ತಿಳಿಸಿದೆ. ಅಲ್ಲದೇ ಷರೀಫ್‌ ದೇಶಬಿಟ್ಟು ತಲೆ ಮರೆಸಿಕೊಂಡಿರುವುದಾಗಿ ಡಾನ್ ವರದಿ ಮಾಡಿದೆ.

ಇದಕ್ಕೂ ಮುನ್ನ ಈ ಮೂವರು ಆರೋಪಿಗಳು ತಮ್ಮನ್ನು ತಪ್ಪಿತಸ್ಥರೆಂದು ಪರಿಗಣಿಸದಂತೆ, ದೋಷಾರೋಪ ದಾಖಲಿಸುವ ಪ್ರಕ್ರಿಯೆಯನ್ನು ಮಂದೂಡಬೇಕು ಎಂದು ನವಾಜ್ ಷರೀಫ್ ಅವರ ಅಳಿಯ ಕ್ಯಾಪ್ಟನ್ ಸಫ್ದರ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದರೆ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯ ಈ ಅರ್ಜಿಯನ್ನು ವಜಾಗೊಳಿಸಿತ್ತು.

ಪನಾಮಾ ಪೇಪರ್‌ ಲೀಕ್‌ ಮೂಲಕ ಪ್ರಧಾನಿ ನವಾಜ್‌ ಷರೀಫ್ ಮತ್ತು ಅವರ ಕುಟುಂಬ ಸದಸ್ಯರು ವಿದೇಶದಲ್ಲಿ ಕೋಟ್ಯಂತರ ರೂ. ಅಕ್ರಮ ಆಸ್ತಿ ಮಾಡಿರುವುದು ಬೆಳಕಿಗೆ ಬಂದಿತ್ತು. ಆದರೆ ಈ ನಡೆಯನ್ನು ಷರೀಫ್‌ ಕುಟುಂಬ ಮಾತ್ರ ರಾಜಕೀಯ ಪ್ರೇರಿತ ಎಂದು ಹೇಳಿಕೊಂಡಿದೆ.

Comments are closed.