ಅಂತರಾಷ್ಟ್ರೀಯ

2 ಶತಕೋಟಿ ಫೇಸ್ ಬುಕ್ ಬಳಕೆದಾರರು!

Pinterest LinkedIn Tumblr


ಸ್ಯಾನ್ ಫ್ರಾನ್ಸಿಸ್ಕೋ: ಖ್ಯಾತ ಸಮಾಜಿಕ ಜಾಲತಾಣ ಫೇಸ್ ಬುಕ್ ತನ್ನ ಬಳಕೆದಾರರ ಸಂಖ್ಯೆಯನ್ನು ಬರೊಬ್ಬರಿ 2 ಶತಕೋಟಿಗೇರಿಸಿಕೊಳ್ಳಲು ಸಿದ್ಧತೆ ನಡೆಸಿದೆ.
ಆ ಮೂಲಕ 2 ಶತಕೋಟಿ ಬಳಕೆದಾರರನ್ನು ಹೊಂದಿದ ವಿಶ್ವದ ಮೊದಲ ಸಾಮಾಜಿಕ ಜಾಲತಾಣ ಎಂಬ ಕೀರ್ತಿಗೂ ಫೇಸ್ ಬುಕ್ ಭಾಜನವಾಗಲಿದೆ. ಫೇಸ್ ಬುಕ್ ತ್ರೈಮಾಸಿಕ ವರದಿಯನ್ವಯ 2016ರ ವರ್ಷಾಂತ್ಯಕ್ಕೆ ಫೇಸ್ ಬುಕ್ ಬಳಕೆದಾರರ ಸಂಖ್ಯೆ ಶೇ.10 ರಷ್ಟು ಏರಿಕೆಯಾಗಿದ್ದು, 2016ರ ವರ್ಷಾಂತ್ಯದ ವೇಳೆ ಪ್ರಕಟವಾದ ತ್ರೈಮಾಸಿಕ ವರದಿಯಲ್ಲಿ ಫೇಸ್ ಬುಕ್ 1.86 ಶತಕೋಟಿ ಬಳಕೆದಾರರನ್ನು ಹೊಂದಿತ್ತು. ಇದೀಗ ಇನ್ನು ಕೆಲವೇ ದಿನಗಳಲ್ಲಿ ಈ ಸಂಖ್ಯೆ 2 ಶತಕೋಟಿಗೇರಲಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ಈ ಪೈಕಿ ಪ್ರತಿ ತಿಂಗಳು ಸುಮಾರು 1.89 ಶತಕೋಟಿ ಬಳಕೆದಾರರು ಫೇಸ್ ಬುಕ್ ನಲ್ಲಿ ಸಕ್ರಿಯರಾಗಿರುತ್ತಾರೆ ಎಂದು ತಜ್ಞರೊಬ್ಬರು ತಿಳಿಸಿದ್ದಾರೆ. 2012ರಲ್ಲಿ ಸಂಸ್ಥೆಯನ್ನು ಸಾರ್ವಜನಿಕಗೊಳಿಸಿದ ಬಳಿಕ ಸಂಸ್ಥೆಯ ಬಳಕೆದಾರರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.
ಭಾರತದಂತಹ ಅತೀದೊಡ್ಡ ಜನಸಂಖ್ಯಾ ರಾಷ್ಟ್ರದಲ್ಲಿನ ಅಂತರ್ಜಾಲ ಸೇವೆ ಮಾರುಕಟ್ಟೆ ಸ್ಪರ್ಧೆಯಿಂದಾಗಿ ಫೇಸ್ ಬುಕ್ ಸಂಸ್ಥೆಗೂ ಅತೀ ಹೆಚ್ಚಿನ ಪ್ರಮಾಣದಲ್ಲಿ ಲಾಭವಾಗಿದೆ. ಕಡಿಮೆ ಮತ್ತು ಆಕರ್ಷಕ ಬೆಲೆಗಳಿಗೆ ಡಾಟಾ ಯೋಜನೆಗಳನ್ನು ದೂರವಾಣಿ ಸಂಪರ್ಕ ಸಂಸ್ಥೆಗಳು ನೀಡುತ್ತಿದೆ. ಹೀಗಾಗಿ ಸಾಮಾನ್ಯವಾಗಿಯೇ ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆದಾರರ ಸಂಖ್ಯೆ ಏರಿಕೆಯಾಗುತ್ತಿದೆ ಎಂದು ಜಾಕ್ ಡಾವ್ಸ್ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ವಿಶ್ಲೇಷಕ ಜಾನ್ ಡಾವ್ಸ್ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದ ಪತ್ರಿಕೆಯೊಂದಿಗೆ ಮಾತನಾಡಿರುವ ಜಾಕ್ ಡಾವ್ಸ್ ಪ್ರತೀ ವರ್ಷ ಫೇಸ್ ಬುಕ್ ನ ಅಭಿವೃದ್ಧಿ ಮತ್ತು ಬಳಕೆದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ 2 ಶತಕೋಟಿ ದಾಟಿ ನಿಲ್ಲುವ ಸಾಮರ್ಥ್ಯಕೂಡ ಫೇಸ್ ಬುಕ್ ಗೆ ಇದೆ. ಫೇಸ್ ಬುಕ್ ಅಮೆರಿಕದಲ್ಲಿರುವ ಪ್ರತಿಯೊಬ್ಬ ಬಳಕೆದಾರನಿಂದಲೂ 20 ಡಾಲರ್ ಸಂಪಾದನೆ ಮಾಡುತ್ತಿದೆ. ಕೆನಡಾದಲ್ಲಿ 13.70 ಡಾಲರ್ ಸಂಪಾದನೆ ಮಾಡಲಾಗುತ್ತಿದೆ. 2016ನೇ ಸಾಲಿನಲ್ಲಿ ಫೇಸ್ ಬುಕ್ ವಾಣಿಜ್ಯ ವಹಿವಾಟು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿತ್ತು. ವಿಡಿಯೋ ಜಾಹಿರಾತು ಪ್ರಸಾರ ಮತ್ತು ಇತರೆ ಜಾಹಿರಾತುಗಳಿಂದ ಸಂಸ್ಥೆಗೆ ವ್ಯಾಪಕ ಲಾಭಾಂಶ ಬಂದಿದೆ ಎಂದು ಅವರು ವಿವರಿಸಿದರು.

Comments are closed.