ಅಂತರಾಷ್ಟ್ರೀಯ

ಹೆಚ್ಚು ಸ್ನಾನ ಮಾಡಿದರೆ ಅಪಾಯ

Pinterest LinkedIn Tumblr


ಲಂಡನ್(ಜ. 27): ದೇಹ ಸದಾ ಶುಚಿಯಲ್ಲಿಟ್ಟುಕೊಳ್ಳಬೇಕು; ನಿತ್ಯ ಸ್ನಾನ ಮಾಡಬೇಕು ಎಂದು ಹಿರಿಯರು ತಿಳಿವಳಿಕೆ ಹೇಳುವುದನ್ನು ಕೇಳಿರುತ್ತೇವೆ. ಆದರೆ, ಇಲ್ಲೊಂದು ಸಂಶೋಧನೆ ನಮ್ಮ ತಿಳಿವಳಿಕೆಗೆ ಟಾಂಗ್ ಕೊಡುವಂತೆ ಇದೆ. ಸ್ವಲ್ಪ ದಿನ ಸ್ನಾನ ಮಾಡದಿದ್ದರೆ ಅಬ್ಬಬ್ಬಾ ಅಂದ್ರೆ ಮೈ ವಾಸನೆ ಬರಬಹುದು. ಆದರೆ, ಅತಿಯಾಗಿ ಸ್ನಾನ ಮಾಡಿದರೆ ಅನೇಕ ಆರೋಗ್ಯ ತೊಂದರೆಗಳಿಗೆ ಎಡೆ ಸಿಕ್ಕಂತಾಗುತ್ತದೆ ಎಂದು ಉಟಾ ಯೂನಿವರ್ಸಿಟಿಯ ಸಂಶೋಧಕರು ಎಚ್ಚರಿಸಿದ್ದಾರೆ.
ಸ್ನಾನ ಯಾಕೆ ಡೇಂಜರ್?
ನಮ್ಮ ದೇಹದಲ್ಲಿ ಅಗತ್ಯವಾದ ಬ್ಯಾಕ್ಟೀರಿಯಾ, ವೈರಸ್ ಮತ್ತಿತರ ಮೈಕ್ರೋಬ್(ಜೀವಾಣು)ಗಳಿರುತ್ತವೆ. ಇವು ದೇಹದ ವಿವಿಧ ಪ್ರಕ್ರಿಯೆಗಳಿಗೆ ಪೂರಕವಾಗಿ ಕೆಲಸ ಮಾಡುತ್ತವೆ. ರೋಗಗಳನ್ನು ತಡೆಗಟ್ಟುವ ಶಕ್ತಿ ಈ ಸೂಕ್ಷ್ಮಜೀವಿಗಳಿಗಿರುತ್ತವೆ. ನಾವು ಹೆಚ್ಚೆಚ್ಚು ಸ್ನಾನ ಮಾಡಿದರೆ ಈ ಜೀವಾಣುಗಳ ವ್ಯವಸ್ಥೆ ಏರುಪೇರಾಗುತ್ತದೆ. ಇದರಿಂದ ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆ, ಜೀರ್ಣಕ್ರಿಯೆಗೆ ತೊಂದರೆಯಾಗಬಹುದು. ಹೃದಯದ ತೊಂದರೆಗೂ ಎಡೆ ಮಾಡಿಕೊಡಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.
ದಕ್ಷಿಣ ಅಮೆರಿಕದ ಅಮೇಜಾನ್ ವ್ಯಾಪ್ತಿಗೆ ಬರುವ ಯಾನೋಮಾಮಿ ಎಂಬ ಗ್ರಾಮದಲ್ಲಿ ಜನರು ತೀರಾ ಅಪರೂಪಕ್ಕೆ ಸ್ನಾನ ಮಾಡುತ್ತಾರಂತೆ. ಬಹಳ ಸಮೃದ್ಧ ಸೂಕ್ಷ್ಮಜೀವಿಗಳ ಆವಾಸಸ್ಥಾನವಾಗಿತ್ತು ಅವರ ದೇಹ. ಅಷ್ಟೇ ಅಲ್ಲ, ಅವರ ದೈಹಿಕ ಆರೋಗ್ಯ ಕೂಡ ಅತ್ಯುತ್ತಮವಾಗಿತ್ತು ಎಂದು ಸಂಶೋಧಕರು ತಿಳಿಸುತ್ತಾರೆ.
ಆದರೆ, ಎಷ್ಟು ದಿನಕ್ಕೊಮ್ಮೆ ಸ್ನಾನ ಮಾಡಬೇಕು, ಅಥವಾ ದಿನಕ್ಕೆ ಎಷ್ಟು ಬಾರಿ ಸ್ನಾನ ಮಾಡಿದರೆ ಡೇಂಜರ್ ಎಂಬಿತ್ಯಾದಿ ಬಗ್ಗೆ ಸಂಶೋಧಕರು ಮಾಹಿತಿ ನೀಡಿಲ್ಲ. ಹೆಚ್ಚು ಸ್ನಾನ ಮಾಡಬಾರದು ಎಂದಷ್ಟೇ ಎಚ್ಚರಿಸಿದ್ದಾರೆ.

Comments are closed.