ಅಂತರಾಷ್ಟ್ರೀಯ

ಇನ್ನೂ ನಿಗೂಢವಾಗಿರುವ ಎಂಎಚ್-370 ವಿಮಾನ ನಾಪತ್ತೆ

Pinterest LinkedIn Tumblr


ಸಿಡ್ನಿ(ಜ.17): ಮಲೇಶಿಯಾದ ಎಂಎಚ್-370 ವಿಮಾನ ನಾಪತ್ತೆಯಾಗಿ ಹತ್ತಿರತ್ತಿರ 3 ವರ್ಷ ಕಳೆಯುತ್ತಿದೆ. ಆದರೆ, ವಿಮಾನದ ಕುರುಹು ಮಾತ್ರ ಪತ್ತೆಯಾಗಿಲ್ಲ. ಹಿಂದೂ ಮಹಾಸಾಗರವನ್ನ ಜಾಲಾಡಿದ ಮುಳುಗಿ ತಜ್ಞರು ಯಾವುದೇ ಕುರುಹು ಸಿಗದೇ ಕೈಚೆಲ್ಲಿದ್ದಾರೆ.
ಆಸ್ಟ್ರೇಲಿಯಾದ ಪಶ್ಚಿಮ ಭಾಗದ ಆಳ ಸಮುದ್ರದಲ್ಲಿ ಮತ್ತೆ ಕಾರ್ಯ ಕೈಗೊಂಡಿದ್ದ ಆಸ್ಟ್ರೇಲಿಯಾದ ಜಾಯಿಂಗ್ ಏಜೆನ್ಸಿ ಕೋಆರ್ಡಿನೇಶನ್ ಸೆಂಟರ್, ಅಧಿಕೃತವಾಗಿ ಶೋಧನಾ ಕಾರ್ಯವನ್ನ ಸ್ಥಗಿತಗೊಳಿಸಿರುವುದಾಗಿ ಘೋಷಿಸಿದೆ. 120000 ಚದರ ಕಿ,ಮೀ ಶೋಧದಲ್ಲಿ ವಿಮಾನದ ಯಾವುದೇ ಕುರುಹು ಸಿಗಲಿಲ್ಲ. ಹೀಗಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದಾಗಿ ಸಂಸ್ಥೆ ಘೋಷಿಸಿದೆ.
`ಲಭ್ಯವಿರುವ ಎಲ್ಲ ವೈಜ್ಞಾನಿಕ ತಂತ್ರಜ್ಞಾನದ ಬಳಕೆ, ನುರಿತ ತಜ್ಞರ, ವೃತ್ತಿಪರರ ಎಲ್ಲ ಶ್ರಮವನ್ನ ಬಳಕೆ ಮಾಡಿ ಹುಡುಕಿದರೂ ಯಾವುದೇ ಪ್ರಯೋಜನವಾಗಿಲ್ಲ. ದುರದೃಷ್ಟವಶಾತ್ ವಿಮಾನವನ್ನ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಹೀಗಾಗಿ, ಆಳ ಸಮುದ್ರ ಶೋಧವನ್ನ ನಿಲ್ಲಿಸಲಾಗಿದೆ. ಲಘುವಾಗಿ ಪರಿಗಣಿಸಿ ಈ ನಿರ್ಧಾರ ಕೈಗೊಂಡಿಲ್ಲ. ಅತೀವ ದುಃಖದಿಂದ ಈ ನಿರ್ಧಾರ ಕೈಗೊಂಡಿದ್ದೇವೆ” ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ವರ್ಷ ಮಲೇಶಿಯಾ, ಆಸ್ಟ್ರೇಲಿಯಾ ಮತ್ತು ಚೀನಾ ರಾಷ್ಟ್ರಗಳು ಶೋಧ ಕಾರ್ಯಾಚರಣೆಗೆ ದೇಣಿಗೆ ನೀಡಿದ್ದವು. ಶೋಧಕ್ಕೆ ನಿಗದಿಪಡಿಸಿರುವ ಪ್ರದೇಶ ಮುಕ್ತಾಯದ ಬಳಿಕ ಯಾವುದೇ ಕುರುಹು ಸಿಗದಿದ್ದ ಪಕ್ಷದಲ್ಲಿ ಶೋಧ ಕಾರ್ಯಾಚರಣೆ ನಿಲ್ಲಿಸುವ ಒಪ್ಪಂದಕ್ಕೆ ಬಂದಿದ್ದವು.
ಮಾರ್ಚ್ 8, 2014ರಂದು ರಾತ್ರಿ 12.30ರ ಸುಮಾರಿಗೆ 239 ಪ್ರಯಾಣಿಕರನ್ನೊತ್ತ ಎಂಎಚ್-370 ವಿಮಾನ ಬೀಜಿಂಗ್`ನಿಂದ ಕೌಲಾಲಂಪುರಕ್ಕೆ ಪ್ರಯಾಣ ಬೆಳೆಸಿತ್ತು. ಸ್ವಲ್ಪ ಸಮಯದ ಬಳಿಕ ವಿಮಾನ ರಾಡಾರ್ ಸಂಪರ್ಕ ಕಳೆದುಕೊಮಡು ನಾಪತ್ತೆಯಾಗಿತ್ತು.

Comments are closed.