ಅಂತರಾಷ್ಟ್ರೀಯ

ಪಾಕ್ ಹಿಂದೂಗಳಿಗೆ ರಿಲೀಫ್

Pinterest LinkedIn Tumblr

pak-hindus
ಇಸ್ಲಾಮಾಬಾದ್(ಜ. 03): ಪಾಕಿಸ್ತಾನದ ಹಿಂದೂಗಳ ದಶಕಗಳ ಆಸೆಯನ್ನು ಅಲ್ಲಿಯ ಸರಕಾರ ಪೂರೈಸಹೊರಟಿದೆ. ಅಲ್ಪಸಂಖ್ಯಾತ ಹಿಂದೂಗಳಿಗೇ ಪ್ರತ್ಯೇಕವಾಗಿ “ಹಿಂದೂ ವಿವಾಹ ಕಾಯ್ದೆ 2016” ಜಾರಿಗೆ ಬರುವ ಕಾಲ ಸಮೀಪಿಸಿದೆ. ಮಸೂದೆ ಕರಡು ಪ್ರತಿಗೆ ಸಂಸದೀಯ ಸಮಿತಿ ಅನುಮೋದನೆ ನೀಡಿದೆ. ಪಾಕ್’ನ ಮೇಲ್ಮನೆಯಲ್ಲಿ ಮಸೂದೆ ಮಂಡನೆಯಾಗಲಿದ್ದು, ಅಲ್ಲಿ ಪಾಸ್ ಆದಲ್ಲಿ ಅನುಷ್ಠಾನಕ್ಕೆ ಬರಲಿದೆ.
ಮುಟ್ಟಾಹಿದಾ ಖ್ವಾಮಿ ಮೂವ್ಮೆಂಟ್’ನ ಸಂಸದ ನಸರೀನ್ ಜಲೀಲ್ ನೇತೃತ್ವದ ಮಾನವ ಹಕ್ಕು ಕಾರ್ಯನಿರ್ಹಣೆಯ ಸಮಿತಿಯು ಈ ಮಸೂದೆಯ ಚರ್ಚೆ ನಡೆಸಿ ಅನುಮೋದನೆ ನೀಡಿತು.
ವಿವಾಹ ಕಾಯ್ದೆಯಲ್ಲೇನಿದೆ ವಿಶೇಷತೆ?
ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳಿಗೆ ಅನೇಕ ಸೌಲಭ್ಯಗಳೇ ಇಲ್ಲ. ತಮ್ಮ ವಿವಾಹವನ್ನ ನೊಂದಣಿ ಮಾಡುವ ಹಾಗೂ ವಿವಾಹ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಮೊರೆ ಹೋಗುವ ಅವಕಾಶವೂ ಹಿಂದೂಗಳಿಗೆ ಇರಲಿಲ್ಲ. ಇನ್ನೊಂದು ಪ್ರಮುಖ ಅಲ್ಪಸಂಖ್ಯಾತ ಸಮುದಾಯ ಕ್ರೈಸ್ತರಿಗೆ ಈ ಅವಕಾಶವಿದೆ. ಈ ಹೊಸ ಕಾಯ್ದೆ ಜಾರಿಗೆ ಬಂದಲ್ಲಿ, ಹಿಂದೂಗಳು ತಮ್ಮ ವಿವಾಹವನ್ನು ಅಧಿಕೃತವಾಗಿ ನೊಂದಣಿ ಮಾಡಿಸಬಹುದು. ವಿವಾಹ ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಬಹುದು. ಹಿಂದೂ ಮಹಿಳೆಯ ಪುನರ್’ವಿವಾಹಕ್ಕೂ ಪಾಕ್ ಕಾನೂನಿನಲ್ಲಿ ಅವಕಾಶವಿರಲಿದೆ.
ಪತಿ ನಿಧನವಾಗಿ ಆರು ತಿಂಗಳ ಬಳಿಕ ವಿಧವೆಯು ತನ್ನ ಇಚ್ಛಾನುಸಾರ ಪುನರ್’ವಿವಾಹ ಮಾಡಿಕೊಳ್ಳಲು ಹೊಸ ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ. ಈ ಕಾಯ್ದೆಯನ್ನು ಅಲ್ಲಿಯ ಜನಪ್ರತಿನಿಧಿಗಳು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. ಮೇಲ್ಮನೆಯಲ್ಲಿ ಈ ಮಸೂದೆಗೆ ಅನುಮೋದನೆ ಸಿಗುವುದು ಬಹುತೇಕ ಖಚಿತ ಎಂಬ ಮಾತೂ ಕೇಳಿಬರುತ್ತಿದೆ.
ಅಲ್ಲಿಯ ಸಿಂಧ್ ಪ್ರಾಂತ್ಯದಲ್ಲಿ ಈಗಾಗಲೇ ಪ್ರತ್ಯೇಕ ಹಿಂದೂ ವಿವಾಹ ಕಾಯ್ದೆ ಜಾರಿಯಲ್ಲಿದೆ. ಈಗ ಹೊಸ ಕಾನೂನು ಬಂದರೆ ಅದು ಉಳಿದೆಲ್ಲಾ ಪ್ರಾಂತ್ಯಗಳಿಗೆ ಅನ್ವಯವಾಗಲಿದೆ.
ಹಿಂದೂಗಳ ಖುಷಿ:
ಸಂಸದೀಯ ಸಮಿತಿಯು ಈ ಮಸೂದೆಯ ಕರಡು ಪ್ರತಿಗೆ ಸಮ್ಮತಿ ನೀಡಿದ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಪಾಕ್’ನ ಹಿಂದೂ ಸಂಸದ ರಮೇಶ್ ಕುಮಾರ್ ವಂಕ್ವಾನಿ ಅವರು “ಇದು ಪಾಕ್ ಹಿಂದೂಗಳಿಗೆ ಸಿಕ್ಕ ಹೊಸ ವರ್ಷದ ಕೊಡುಗೆ. ಇಂದು ನಮಗೆ ಹಿಂದೂ ಪಾಕಿಸ್ತಾನಿಗಳೆಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ” ಎಂದು ಬಣ್ಣಿಸಿದ್ದಾರೆ.
ಪಾಕಿಸ್ತಾನದ ಅಲ್ಪಸಂಖ್ಯಾತರಲ್ಲಿ ಹಿಂದೂಗಳು ಅಗ್ರಗಣ್ಯರಾಗಿದ್ದು, ಅಲ್ಲಿ ಶೇ. 1.6ರಷ್ಟಿದ್ದಾರೆ. ಅಲ್ಲಿ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿರುವ ಆರೋಪಗಳು ಪದೇಪದೇ ಕೇಳಿಬರುತ್ತದೆ. ಉಗ್ರಗಾಮಿಗಳ ಹಾವಳಿಯಿಂದ ಭಯಭೀತರಾಗಿ ಹಿಂದೂಗಳು ಭಾರತಕ್ಕೆ ವಲಸೆ ಬರುವ ಘಟನೆಗಳು ಆಗಾಗ ವರದಿಯಾಗುತ್ತಿರುತ್ತವೆ.

Comments are closed.