ಆರ್ಟಿಕ್ ಪ್ರದೇಶದಲ್ಲಿಯ ತಾಪಮಾನ ಏರಿಕೆ ಗಮನಿಸಿದರೆ ಮುಂದೊಂದು ದಿನ. ಆರ್ಟಿಕ್ ಸಾಗರದಲ್ಲಿ ಹಿಮ ಬಂಡೆಗಳೇ ಕಾಣಿಸುವುದಿಲ್ಲ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಪ್ರದೇಶದಲ್ಲಿಯ ತಾಪಮಾನದಲ್ಲಿಯ ಏರಿಕೆ ಹೀಗೆಯೇ ಮುಂದುವರೆದರೆ 2020ರ ವೇಳೆಗೆ ಆರ್ಟಿಕ್ ಸಾಗರದಲ್ಲಿ ಮಂಜುಗಡ್ಡೆಗಳು ಸಾಕಷ್ಟು ಮಾಯವಾಗುತ್ತವೆ.
ಆರ್ಟಿಕ್ ಪ್ರದೇಶದಲ್ಲಿಯ ತಾಪಮಾನ ಏರಿಕೆ ಹಿಂದೆಂದಿಗಿಂತಲೂ ಇತ್ತೀಚಿನ ವರ್ಷಗಳಲ್ಲಿ ಕಳವಳಕಾರಿಯ ಮಟ್ಟದಲ್ಲಿದ್ದು, ಹಿಮ ಹೆಚ್ಚಿನ ಪ್ರಮಾಣದಲ್ಲಿ ಕರಗುವುದರಿಂದ ಸಾಗರದ ನೀರಿನ ಮಟ್ಟದಲ್ಲಿ ಏರಿಕೆಯಾಗುವುದಲ್ಲದೆ ಅಲ್ಲಿಯ ಜೀವ ಜಾಲದ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಅಮೆರಿಕಾದ ವಿಜ್ಞಾನಿಗಳು ಹೇಳಿದ್ದಾರೆ. ಕಳೆದ ವರ್ಷ ಅಕ್ಟೋಬರ್ನಿಂದ ಈ ವರ್ಷ ಸೆಪ್ಟೆಂಬರ್ವರೆಗಿನ ಅಲ್ಲಿಯ ತಾಪಮಾನ ಕುರಿತ ಅಧ್ಯಯನ ನಡೆಸಿರುವ ವಿಜ್ಞಾನಿಗಳ ತಂಡ ಸರಾಸರಿ ವಾರ್ಷಿಕ ತಾಪಮಾನ ಏರಿಕೆಯಲ್ಲಿ ಏರಿಕೆಯಾಗಿದೆ ಎಂದು ಆರ್ಟಿಕ್ ರಿಪೋಟ್ 2016 ರಲ್ಲಿ ಹೇಳಿದ್ದಾರೆ.
ವಾತಾವರಣದಲ್ಲಿಯ ತಾಪಮಾನ ಏರಿಕೆ ಸಾಗರ ನೀರಿನ ಮೇಲೂ ಪರಿಣಾಮ ಬೀರುವುದರಿಂದ ನೀರು ಶಾಖಗೊಳ್ಳುತ್ತದೆ. ಇದು ಸಾಗರದ ಮೇಲಿನ ಹಿಮ ಬಂಡೆಗಳನ್ನು ಕರಗಿಸುವ ಮೂಲಕ ಹೆಚ್ಚಿನ ಪ್ರಮಾಣದ ಸಿಹಿ ನೀರು ಸಾಗರಕ್ಕೆ ಸೇರುತ್ತದೆ. ತತ್ಪರಿಣಾಮ ಸಾಗರ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತವೆ.
ಸಾಗರ ಮಟ್ಟ ಏರಿಕೆಯಿಂದಾಗಿ ಅಂಚಿನಲ್ಲಿರುವ ರಾಷ್ಟ್ರಗಳ ಭೂಭಾಗಗಳು ಜಲಾವೃತಗೊಳ್ಳುತ್ತವೆ.
ಅಂಟಾರ್ಟಿಕಾ ತರ ಅಲ್ಲ
ಉತ್ತರಧೃವವಾದ ಆರ್ಟಿಕ್, ದಕ್ಷಿಣ ಧೃವ ಅಂಟಾರ್ಟಿಕಾ ತರದ ವಾತಾವರಣ ಹೊಂದಿಲ್ಲ. ಎರಡೂ ಧೃವ ಪ್ರದೇಶಗಳಾದರೂ ಅಂಟಾರ್ಟಿಕಾ ಭಾರಿ ಶೀತದಿಂದ ಕೂಡಿದ್ದು ಇದು ಜನ ವಾಸಕ್ಕೆ ಯೋಗ್ಯವಿಲ್ಲದಷ್ಟು ಹಿಮಭರಿತ ಪ್ರದೇಶ. ಇದು ಭೂಮಿಯ ಮೇಲಿನ ಅತ್ಯಂತ ಶೀತಲ ಪ್ರದೇಶ.
ಇಲ್ಲಿ ಚಳಿಗಾಲದಲ್ಲಿಯ ಉಷ್ಣಾಂಶ ಮೈನಸ್ 75 ಡಿಗ್ರಿ ಸೆಲ್ಲಿಯಸ್ ಮತ್ತು ಮೈನಸ್ 40 ಡಿಗ್ರಿ ಸೆಲ್ಸಿಯಸ್. ಬೇಸಿಗೆಯಲ್ಲಿಯೂ ಇಲ್ಲಿಯ ಉಷ್ಣಾಂಶ ನೀರು ಹೆಪ್ಪುಗಟ್ಟುವ ಮಟ್ಟಕ್ಕಿಂತಲೂ ಕಡಿಮೆ ಇರುತ್ತದೆ.
ಆದರೆ ಉತ್ತರ ಧೃವ ಹಾಗಿಲ್ಲ. ಇಲ್ಲಿಯ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ನಿಂದ 10 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಇಲ್ಲಿ 6 ತಿಂಗಳು ಸದಾ ಬಿಸಿಲು ಮತ್ತೆ ಆರು ತಿಂಗಳು ಸದಾ ಕತ್ತಲು.
ಈ ಉಷ್ಣಾಂಶದಲ್ಲಿ ಪ್ರಾಣಿಗಳು, ಸಸ್ಯಗಳು ಜೀವಿಸಲು ಸಾಧ್ಯ. ಇಲ್ಲಿಯ ನಿವಾಸಿಗಳು ಎಸ್ಕಿಮೊಗಳು.
ಈ ಪ್ರದೇಶ ಆರ್ಟಿಕ್ ಸಾಗರವನ್ನು ಒಳಗೊಂಡಿದೆ. ಹಿಮಬಂಡೆಗಳಿಂದ ಆವರಿಸಿರುವ ಆರ್ಟಿಕ್ ಸಾಗರ ಜಾಗತಿಕ ತಾಪಮಾನ ಏರಿಕೆಯ ಪ್ರಭಾವಕ್ಕೆ ತುತ್ತಾಗಿದೆ.