ಅಂತರಾಷ್ಟ್ರೀಯ

ಗುಟೆರಸ್‌ ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ

Pinterest LinkedIn Tumblr
United Nations High Commissioner for Refugees (UNHCR) Antonio Guterres attends a press conference following the UNHCRs annual Executive Committee meeting on October 3, 2014 at the United Nations Office at Geneva.  AFP PHOTO / FABRICE COFFRINI        (Photo credit should read FABRICE COFFRINI/AFP/Getty Images)
U

ವಿಶ್ವಸಂಸ್ಥೆ : ಪೋರ್ಚುಗಲ್‌ನ ಮಾಜಿ ಪ್ರಧಾನಿ ಅಂಟೊನಿಯೊ ಗುಟೆರಸ್‌ ಅವರನ್ನು ವಿಶ್ವಸಂಸ್ಥೆಯ ನೂತನ ಮಹಾಪ್ರಧಾನ ಕಾರ್ಯದರ್ಶಿಯನ್ನಾಗಿ ಸಾಮಾನ್ಯ ಸಭೆಯು ಗುರುವಾರ ಅಧಿಕೃತವಾಗಿ ಆಯ್ಕೆ ಮಾಡಲಿದೆ.

15 ರಾಷ್ಟ್ರಗಳ ಸದಸ್ಯರನ್ನು ಒಳಗೊಂಡ ಭದ್ರತಾ ಮಂಡಳಿಯು ಕಳೆದ ವಾರ ನಡೆಸಿದ ರಹಸ್ಯ ಸಭೆಯಲ್ಲಿ ಗುಟೆರಸ್‌ ಆಯ್ಕೆಗೆ ತೀರ್ಮಾನ ತೆಗೆದುಕೊಂಡಿದ್ದು, ಅನುಮೋದನೆಗಾಗಿ ಅವರ ಹೆಸರನ್ನು 193 ದೇಶಗಳ ಸಾಮಾನ್ಯ ಸಭೆಗೆ ಕಳುಹಿಸಿತ್ತು.

ಸಾಮಾನ್ಯ ಸಭೆಯ ಅಧ್ಯಕ್ಷ ಪೀಟರ್‌ ಥಾಮ್ಸನ್‌ ಅವರು ಮಂಗಳವಾರ ಪ್ರಕಟಣೆ ಹೊರಡಿಸಿದ್ದು, ಅಕ್ಟೋಬರ್‌ 13ರಂದು ಸಾಮಾನ್ಯ ಸಭೆಯ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಹಾಪ್ರಧಾನ ಕಾರ್ಯದರ್ಶಿಯನ್ನು ನೇಮಕ ಮಾಡಲಾಗುವುದು ಎಂದು ಹೇಳಿದ್ದಾರೆ.

ಬಾನ್‌ ಕಿ ಮೂನ್‌ ಅವರ ಉತ್ತರಾಧಿಕಾರಿಯಾಗಿ, ಮಹಾಪ್ರಧಾನ ಕಾರ್ಯದರ್ಶಿ ಹುದ್ದೆಗೆ ಗುಟೆರಸ್‌ ಅವರ ಹೆಸರು ಈ ಹಿಂದೆ ಅನೇಕ ಬಾರಿ ಕೇಳಿಬಂದಿತ್ತು. ಥಾಮ್ಸನ್‌ ಅವರು ಮುಂದಿನ ವಾರ ಗುಟೆರಸ್‌ ಅವರೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಲಿದ್ದು, ಈ
ಸಭೆಯಲ್ಲಿ ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳು ಭಾಗವಹಿಸಲಿವೆ.

ವಿಶ್ವಸಂಸ್ಥೆಯ ಈಗಿನ ಮಹಾಪ್ರಧಾನ ಕಾರ್ಯದರ್ಶಿ ಬಾನ್‌ ಕಿ ಮೂನ್‌ ಅವರ ಅವಧಿ ಡಿಸೆಂಬರ್‌ 31ಕ್ಕೆ ಮುಕ್ತಾಯವಾಗಲಿದೆ.
67 ವರ್ಷದ ಗುಟೆರಸ್‌ ಅವರು ವಿಶ್ವಸಂಸ್ಥೆಯ 9ನೇ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಲಿದ್ದು, 2017ರ ಜನವರಿ 1ರಿಂದ 2022ರ ಡಿಸೆಂಬರ್‌ 31ರವರೆಗೆ ಅವರ ಅಧಿಕಾರ ಅವಧಿ ಇರಲಿದೆ. ಗುಟೆರಸ್‌ ಅವರು 1995ರಿಂದ 2002ರವರೆಗೆ ಪೋರ್ಚುಗಲ್‌ನ ಪ್ರಧಾನಿಯಾಗಿದ್ದರು. ಬಳಿಕ 2005ರಿಂದ 2015ರವರೆಗೆ ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್‌ ಆಗಿ ಕರ್ತವ್ಯ ನಿರ್ವಹಿಸಿದ್ದರು.

Comments are closed.