ಅಂತರಾಷ್ಟ್ರೀಯ

ಉಗ್ರರ ವಿರುದ್ಧ ಕ್ರಮ ತೆಗೆದುಕೊಳ್ಳಿ: ಸೇನೆಗೆ ಪಾಕ್ ಪ್ರಧಾನಿ ನವಾಜ್ ಷರೀಫ್ ಸೂಚನೆ

Pinterest LinkedIn Tumblr

nawaz-shaeif

ಇಸ್ಲಾಮಾಬಾದ್: ಭಾರತದ ಮೇಲೆ ಉಗ್ರರ ಛೂ ಬಿಟ್ಟು ಬಳಿಕ ಉಗ್ರರ ವಿರುದ್ಧ ಕ್ರಮಕ್ಕೆ ಮುಂದಾಗುವ ಪಾಕಿಸ್ತಾನದ ಭಂಡತನ ಮತ್ತೊಮ್ಮೆ ಸಾಬೀತಾಗಿದ್ದು, ಅತ್ತ ಜಮ್ಮು ಮತ್ತು ಕಾಶ್ಮೀರದ ಹಂದ್ವಾರದಲ್ಲಿ ಉಗ್ರ ದಾಳಿ ನಡೆದಿರುವಂತೆಯೇ ಇತ್ತ ಪಾಕ್ ಸರ್ಕಾರ ಉಗ್ರ ವಿರುದ್ಧ ಕ್ರಮಕೈಗೊಳ್ಳಿ ಎಂದು ಸೈನಿಕರಿಗೆ ಸೂಚಿಸಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.

ಉರಿ ಉಗ್ರ ದಾಳಿ ಬಳಿಕ ಭಾರತದಿಂದ ಮೂಲೆಗುಂಪಾಗಿರುವ ಪಾಕಿಸ್ತಾನ, ಇದೀಗ ಪಾಕಿಸ್ತಾನ ದೇಶಕ್ಕೆ ಕಪ್ಪುಚುಕ್ಕೆಯಂತಾಗಿರುವ ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸೈನಿಕರಿಗೆ ಸೂಚನೆ ನೀಡಿದೆ ಎಂದು ಪಾಕ್ ಮೂಲದ ಡಾನ್ ಪತ್ರಿಕೆ ವರದಿ ಮಾಡಿದೆ. ಪತ್ರಿಕಾ ವರದಿಯಂತೆ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು, ನಿನ್ನೆ ಸಂಜೆ ಸರ್ಕಾರದ ಉನ್ನತಾಧಿಕಾರಿಳೊಂದಿಗೆ ಗೌಪ್ಯ ಸಭೆ ನಡೆಸಿದ್ದು, ಈ ವೇಳೆ ಉಗ್ರಗಾಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ವರದಿ ಮಾಡಿದೆ.

ಇನ್ನು ಸಭೆಯಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಸರ್ತಾಜ್ ಏಜಾಜ್ ಚೌದರಿ ಅವರು, ಪಾಕಿಸ್ತಾನ ರಾಜತಾಂತ್ರಿಕ ಬಿಕ್ಕಟ್ಟಿನ ಕುರಿತು ಮಾಹಿತಿ ನೀಡಿದ್ದು, ಭಯೋತ್ಪಾದನೆಯಿಂದಾಗಿ ಪಾಕಿಸ್ತಾನ ವಿಶ್ವಸಮುದಾಯದಿಂದ ಬಹಿಷ್ಕರಿಸಲ್ಪಡುತ್ತಿದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ. ಭಯೋತ್ಪಾದನೆ ವಿಚಾರ ವಿಶ್ವದ ಪ್ರಮುಖ ದೇಶಗಳೊಂದಿಗಿನ ಸಂಬಂಧಕ್ಕೆ ತೊಡಗಾಗಲಿರುವ ಅಪಾಯದಗ ಕುರಿತು ಕೂಡ ಅವರು ಚರ್ಚೆ ಮಾಡಿದ್ದಾರೆ. ಇದೇ ಕಾರಣಕ್ಕೆ ನವಾಜ್ ಷರೀಫ್ ಅವರು ಉಗ್ರಗಾಮಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಸೇನಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಬಳಿಕ ಈ ಬಗ್ಗೆ ಪಾಕಿಸ್ತಾನದ ಪಂಜಾಬ್ ಮುಖ್ಯಮಂತ್ರಿ ಶಹಬಾಜ್ ಷರೀಫ್ ಹಾಗೂ ಐಎಸ್ ಐ ಸಂಸ್ಥೆಯೊಂದಿಗೂ ನವಾಜ್ ಷರೀಫ್ ಅವರು ಮಾತುಕತೆ ನಡೆಸಿದ್ದು, ಭಯೋತ್ಪಾದನೆ ಕುರಿತ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇಂದು ಹದ್ವಾರಾದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ. ಆದರೆ ದಾಳಿ ನಡೆಸಿದ ಎಲ್ಲ ಮೂವರು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಸೇನೆ ಯಶಸ್ವಿಯಾಗಿದೆ.

Comments are closed.