ಮುಜಫರಾಬಾದ್: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಉಗ್ರರಿಗೆ ತರಬೇತಿ ಶಿಬಿರಗಳನ್ನು ತೆರೆದು ಉಗ್ರರಿಗೆ ತರಬೇತಿ ನೀಡುತ್ತಿದೆ. ಆ ಮೂಲಕ ಪಿಒಕೆಯನ್ನು ಸಮಾಜ ಘಾತುಕ ಶಕ್ತಿಗಳ ಸ್ವರ್ಗವಾಗಿ ಪರಿವರ್ತಿಸುತ್ತಿದೆ. ಕೂಡಲೇ ಉಗ್ರ ತರಬೇತಿ ಶಿಬಿರಗಳನ್ನು ಪಾಕಿಸ್ತಾನ ಮುಚ್ಚಬೇಕು ಎಂದು ಒತ್ತಾಯಿಸಿ ಪಾಕ್ ಆಕ್ರಮಿತ ಕಾಶ್ಮೀರದ ಹಲವು ಭಾಗಗಳಲ್ಲಿ ಜನರು ಬೀದಿಗೀಳಿದು ಪ್ರತಿಭಟನೆ ನಡೆಸಿದರು.
ಮುಜಫರಾಬಾದ್, ಕೋಟ್ಲಿ, ಚಿನಾರಿ, ಮಿರ್ಪುರ್, ಗಿಲ್ಗಿಟ್, ಡೈಮೇರ್ ಮತ್ತು ನೀಲಮ್ ಕಣಿವೆಯ ಹಲವು ಸ್ಥಳಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪಾಕಿಸ್ತಾನ ಉಗ್ರರ ತರಬೇತಿ ಶಿಬಿರಗಳನ್ನು ತೆಗೆಯುವ ಮೂಲಕ ಪಿಒಕೆಯನ್ನು ಇಲ್ಲಿನ ಜನರಿಗೆ ನಕರವಾಗಿ ಪರಿವರ್ತಿಸುತ್ತಿದೆ. ಉಗ್ರರು ಇಲ್ಲಿನ ಗ್ರಾಮಸ್ಥರನ್ನು ಲೂಟಿ ಮಾಡುತ್ತಿದ್ದಾರೆ ಮತ್ತು ಮಕ್ಕಳು ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಐಎಸ್ಐ ಪಾಕ್ ಆಕ್ರಮಿತ ಕಾಶ್ಮೀರವನ್ನು ಬಳಸಿಕೊಂಡು ಭಾರತದ ವಿರುದ್ಧ ಪರೋಕ್ಷ ಯುದ್ಧ ಸಂಘಟಿಸುತ್ತಿದೆ. ಪಿಒಕೆಯಲ್ಲಿರುವ ಕೆಲವು ಬಡ ಯುವಕರನ್ನು ತನ್ನತ್ತ ಸೆಳೆದು ಉಗ್ರರಾಗುವಂತೆ ಪರೇಪಿಸಲಾಗುತ್ತಿದೆ. ಆ ಮೂಲಕ ಭಾರತದ ಮೇಲೆ ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸುತ್ತಿದ್ದಾರೆ.
ಪಾಕಿಸ್ತಾನ ಪಿಒಕೆಯಲ್ಲಿ ತಾಲಿಬಾನ್ ಮಾದರಿಯ ತರಬೇತಿ ಶಿಬಿರಗಳನ್ನು ಕೂಡಲೇ ಮುಚ್ಚಬೇಕು. ಇಲ್ಲದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಸ್ಥಳೀಯ ಮುಖಂಡರು ತಿಳಿಸಿದ್ದಾರೆ.