ಬೀಜಿಂಗ್: ತನ್ನ ಸಾಲ ತೀರಿಸಲು ಸಹಾಯ ಮಾಡಲು ನಿರಾಕರಿಸಿದ ಹೆತ್ತವರನ್ನು ಹತ್ಯೆ ಮಾಡಿದ 27 ವರ್ಷದ ಯುವಕನೊಬ್ಬ ಈ ಪ್ರಕರಣ ಮುಚ್ಚಿಡಲು ನೆರೆಹೊರೆಯ 17 ಜನರನ್ನು ಕೊಲೆ ಮಾಡಿರುವ ಬರ್ಬರ ಕೃತ್ಯ ಬೆಳಕಿಗೆ ಬಂದಿದೆ.
ಯಾಂಗ್‌ಕ್ವಿಂಗ್ಪಿ ಎಂಬಾತ ಬುಧವಾರ ಹತ್ಯೆ ಮಾಡಿದ್ದು, ಪ್ರಕರಣ ಸೋಮವಾರ ಬೆಳಕಿಗೆ ಬಂದಿದೆ. ಹ್ಯುಜ್‌ಕೌಂಟಿಯಲ್ಲಿನ ತನ್ನ ಸ್ವಗ್ರಾಮ ಯೆಮಾಗೆ ತೆರಳಿದ್ದ ಈತ ಸಾಲ ತೀರಿಸಲು ತಂದೆ ತಾಯಿ ಬಳಿ ಹಣ ಕೇಳಿದ್ದ. ಆದರೆ ಅವರು ಕೊಡಲಿಲ್ಲ. ಇದರಿಂದ ಆಕ್ರೋಶಗೊಂಡು ಅವರಿಬ್ಬರನ್ನು ಸಾಯಿಸಿದ. ಇದು ಎಲ್ಲಿ ಬಯಲಾಗುತ್ತದೊ ಎಂಬ ಭಯದಲ್ಲಿ ನೆರೆಯ ಮೂವರು ಮಕ್ಕಳೂ ಸೇರಿದಂತೆ 17 ಜನರ ಸಾಮೂಹಿಕ ಹತ್ಯೆ ಮಾಡಿ ಪರಾರಿಯಾಗಿದ್ದ.
ಮಾರನೇ ದಿನ ತನಿಖೆ ಬಳಿಕ ಪೊಲೀಸರು ಯಾಂಗ್‌ನನ್ನು ಪತ್ತೆ ಮಾಡಿ ಬಂಧಿಸಿದ್ದಾರೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. 19 ಜನರನ್ನು ಹತ್ಯೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.