ಕರ್ನಾಟಕ

ರೈತರ ಬೆಳೆಗಳಿಗೆ ಕಾವೇರಿ ನೀರು ಬಿಡಲು ವಿಧಾನಮಂಡಲದ ಸರ್ವಾನುಮತ ನಿರ್ಣಯ

Pinterest LinkedIn Tumblr

a vew of assembble

ಬೆಂಗಳೂರು: ಕಾವೇರಿ ನದಿಯಿಂದ ರೈತರ ಬೆಳೆಗಳಿಗೆ ನೀರು ಬಿಡಲು ಸೋಮವಾರ ನಡೆದ ವಿಧಾನಮಂಡಲದ ವಿಶೇಷ ಅಧಿವೇಶನ ಸರ್ವಾನುಮತದಿಂದ ಒಪ್ಪಿಗೆ ನೀಡಿದೆ.

ಕರ್ನಾಟಕ ಹಾಗೂ ತಮಿಳುನಾಡಿನ ಜಟಾಪಟಿಯಿಂದಾಗಿ ದೊಡ್ಡ ಕಗ್ಗಂಟಾಗಿರುವ ಕಾವೇರಿ ವಿವಾದದ ಬಗ್ಗೆ ಚರ್ಚಿಸಲು ಸೋಮವಾರ ವಿಧಾನಮಂಡಲದ ವಿಶೇಷ ಅಧಿವೇಶನ ಸೇರಿತ್ತು. ರೈತರ ಹೊಲಗಳಿಗೆ ನೀರು ಹರಿಸುವ ಸಂಬಂಧ ರಾಜ್ಯ ಸರ್ಕಾರ ಮಂಡಿಸಿದ ನಿರ್ಣಯವನ್ನು ಉಭಯ ಸದನಗಳೂ ಒಕ್ಕೊರಲಿನಿಂದ ಬೆಂಬಲಿಸಿದವು.

ಅ.1ರಿಂದ ಅ.6 ರವರೆಗೆ ಪ್ರತಿನಿತ್ಯ 6 ಸಾವಿರ ಕ್ಯುಸೆಕ್‌(3.11 ಟಿಎಂಸಿ ಅಡಿ) ನೀರು ಹರಿಸಬೇಕು. ಈ ಆದೇಶ ಪಾಲಿಸಿದ ಬಗ್ಗೆ  ವರದಿ ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ದ್ವಿಸದಸ್ಯ ಪೀಠ ಆದೇಶಿಸಿದ ಬೆನ್ನಲ್ಲೇ ಈ ನಿರ್ಣಯ ಕೈಗೊಳ್ಳಲಾಗಿದೆ. ವಿಧಾನಮಂಡಲ ಅಂಗೀಕರಿಸಿದ ನಿರ್ಣಯದಲ್ಲಿ ತಮಿಳುನಾಡಿಗೆ ನೀರು ಬಿಡುವ ಬಗ್ಗೆ ಸ್ಪಷ್ಟವಾಗಿ ಏನೂ ಹೇಳಿಲ್ಲ.

ಆದರೆ, ವಿಧಾನಸಭೆಯಲ್ಲಿ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಬಿಳಿಗುಂಡ್ಲು (ತಮಿಳುನಾಡು) ಮಾಪನ ಕೇಂದ್ರದಲ್ಲಿ 1,200 ಕ್ಯುಸೆಕ್‌ನೀರು ಈಗ ಹರಿದು ಹೋಗುತ್ತಿದೆ. ಕರ್ನಾಟಕ ಭಾಗದ ರೈತರ ಬೆಳೆಗಳಿಗೆ ನೀರು ಹರಿಸಿದರೆ ಹೆಚ್ಚುವರಿಯಾಗಿ 3 ಸಾವಿರ ಕ್ಯುಸೆಕ್‌ಹರಿಯಲಿದೆ. ಸುಪ್ರೀಂಕೋರ್ಟ್‌ಆದೇಶದಂತೆ 6 ಸಾವಿರ ಕ್ಯುಸೆಕ್‌ನೀರು ತಮಿಳುನಾಡಿಗೆ ಸೇರಬೇಕಿದೆ’ ಎಂದರು.

ಮುಖ್ಯಮಂತ್ರಿ ತಮಿಳುನಾಡಿಗೆ ನೀರು ಹರಿಸುವ ಕುರಿತು ನಿಖರ ಮಾಹಿತಿ ನೀಡಲಿಲ್ಲ. ಕರ್ನಾಟಕದ ಕಾವೇರಿ ಕೊಳ್ಳದ ಪ್ರದೇಶದಲ್ಲಿ 4.76 ಲಕ್ಷ ಎಕರೆಯಲ್ಲಿ ಬೆಳೆ ಇದೆ. ಇದಕ್ಕೆ 43 ಟಿಎಂಸಿ ಅಡಿ ನೀರು ಬೇಕಾಗುತ್ತದೆ. 40 ವರ್ಷದ ಸರಾಸರಿ ವಾಡಿಕೆ ಮಳೆ ಆಧರಿಸಿದರೆ ಡಿಸೆಂಬರ್‌ವೇಳೆಗೆ ಇನ್ನೂ 29.29 ಟಿಎಂಸಿ ಅಡಿ ನೀರು ಲಭ್ಯವಾಗಲಿದೆ. ಇದನ್ನು ಕುಡಿಯಲು ಮತ್ತು ಬೆಳೆಗಳಿಗೆ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಕಾವೇರಿ ಕೊಳ್ಳದ ಜಲಾಶಯಗಳಿಗೆ ಮೂರು ದಿನದಿಂದ ಈಚೆಗೆ 6.50 ಟಿಎಂಸಿ ಅಡಿ ನೀರು ಹರಿದುಬಂದಿದೆ. ಇದರಿಂದಾಗಿ ರಾಜ್ಯದ ಸಂಗ್ರಹ 34.13 ಟಿಎಂಸಿ ಅಡಿಗಳಿಗೆ ಏರಿಕೆಯಾಗಿದೆ. ಸೆ.28ರಿಂದ 30ವರೆಗೆ 18 ಸಾವಿರ ಕ್ಯುಸೆಕ್‌ನೀರು ಬಿಡಲು ಸುಪ್ರೀಂಕೋರ್ಟ್‌ಆದೇಶಿಸಿತ್ತು. ಸದನದಲ್ಲಿ ನಿರ್ಣಯ ಕೈಗೊಂಡಿದ್ದರಿಂದ ನೀರು ಬಿಡಲು ಸಾಧ್ಯವಿರಲಿಲ್ಲ ಎಂದರು.

ಕರ್ನಾಟಕದ ಕಾವೇರಿ ಕೊಳ್ಳದ ಪ್ರದೇಶದ ರೈತರು ಬೆಳೆದು ನಿಂತ ತಮ್ಮ ಬೆಳೆಗೆ ಅವಶ್ಯವಾದ ನೀರನ್ನು ಬಿಡಲು ಒತ್ತಾಯಿಸಿದ್ದಾರೆ. ಹೀಗಾಗಿ ಕೃಷಿ ಚಟುವಟಿಕೆಗೂ ನೀರು ಹರಿಸಲು ಸದನ ಒಪ್ಪಿಗೆ ಕೊಡಬೇಕು ಎಂದು ಕೋರಿದರು. ಬಳಿಕ ನಿರ್ಣಯಕ್ಕೆ ಅಂಗೀಕಾರ ನೀಡಲಾಯಿತು.

ನಿರ್ಣಯ: ‘ಕಾವೇರಿ ಕೊಳ್ಳದಲ್ಲಿರುವ ನೀರನ್ನು ಕುಡಿಯುವುದಕ್ಕೆ ವಿನಾ ಅನ್ಯ ಉದ್ದೇಶಕ್ಕೆ ಒದಗಿಸುವುದಿಲ್ಲ’ ಎಂದು ಸೆಪ್ಟೆಂಬರ್ 23ರಂದು ಕೈಗೊಂಡಿದ್ದ ನಿರ್ಣಯಕ್ಕೆ ‘ಕುಡಿಯುವ ಉದ್ದೇಶಕ್ಕೆ ನೀರಿನ ಲಭ್ಯತೆಯನ್ನು ಖಚಿತಪಡಿಸಿ ಕೊಂಡು ರೈತರ ಬೆಳೆಗಳಿಗೆ ಬಿಡುಗಡೆ ಮಾಡುವುದು’ ಎಂಬ ಬದಲಾವಣೆ ತರಲಾಯಿತು.

ವಿಧಾನಸಭೆಯಲ್ಲಿ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ. ಜಯಚಂದ್ರ ಅವರು ಹಾಗೂ ವಿಧಾನ ಪರಿಷತ್ತಿನಲ್ಲಿ ಸಭಾನಾಯಕ ಡಾ. ಜಿ. ಪರಮೇಶ್ವರ್‌ಅವರು ಸರ್ಕಾರದ ಪರವಾಗಿ ನಿರ್ಣಯ ಮಂಡಿಸಿದರು.

ವಿಧಾನಪರಿಷತ್ತಿನಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಸಭಾನಾಯಕ ಜಿ. ಪರಮೇಶ್ವರ್‌, ‘ಸ್ವಲ್ಪ ನೀರನ್ನು ಬಿಟ್ಟು ಪರಿಶೀಲನಾ ಅರ್ಜಿ ಹಾಕಿ ಎಂದು ಸುಪ್ರೀಂಕೋರ್ಟ್‌ಮೌಖಿಕವಾಗಿ ತಿಳಿಸಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಒಂದು ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಆಗಲಾದರೂ ನಮಗೆ ನ್ಯಾಯ ಸಿಗಬಹುದು ಎಂಬ ವಿಶ್ವಾಸ ಇದೆ’ ಎಂದು ತಿಳಿಸಿದರು.

ನಿರ್ಣಯ ಕುರಿತು ಮಾತನಾಡಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ‘ಸೆ.23ರಂದು ಕೈಗೊಂಡ ನಿರ್ಣಯ ಪಾಲಿಸುವಲ್ಲಿ ಸರ್ಕಾರ ಬದ್ಧತೆ ತೋರಿದೆ. ಇದೀಗ ಕರ್ನಾಟಕದಲ್ಲಿನ ಕಾವೇರಿಕೊಳ್ಳದ ಪ್ರದೇಶದಲ್ಲಿ ಬೆಳೆದು ನಿಂತ ಬೆಳೆಗೆ ನೀರು ಬಿಡಬೇಕಾಗುತ್ತದೆ ಎಂಬುದನ್ನು ಪ್ರತಿಪಾದಿಸಿದೆ. ಕರ್ನಾಟಕದ ನೆಲ, ಜಲ ವಿಷಯ ಬಂದಾಗ ಯಾವತ್ತೂ ರಾಜಕಾರಣ ಮಾಡಿಲ್ಲ. ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂಬುದಕ್ಕೆ ಬದ್ಧವಾಗಿದ್ದರೆ, ಸರ್ಕಾರ ತೆಗೆದುಕೊಳ್ಳುವ ತೀರ್ಮಾನಕ್ಕೆ ಪಕ್ಷ ಬೆಂಬಲ ನೀಡಲಿದೆ ’ ಎಂದರು.

ಜೆಡಿಎಸ್‌ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಒಡೆದ ಮನೆಯಂತಿದ್ದ ಕಾವೇರಿ ನ್ಯಾಯಮಂಡಳಿ ನೀಡಿದ ಐತೀರ್ಪಿನಲ್ಲಿ ಕರ್ನಾಟಕಕ್ಕೆ ನ್ಯಾಯ ಸಿಕ್ಕಿಲ್ಲ. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ವಿಚಾರಣೆಯಲ್ಲಿ ರಾಜ್ಯಕ್ಕೆ ಪೆಟ್ಟು ಬೀಳಬಾರದು ಎಂಬ ದೃಷ್ಟಿಯಿಂದ ಹಲವಾರು ತೊಂದರೆಗಳಾದರೂ ರೈತರ ಹೊಲಗಳಿಗೆ ನೀರು ಹರಿಸುವ ನಿರ್ಣಯವನ್ನು ಅನಿವಾರ್ಯವಾಗಿ ಒಪ್ಪಬೇಕಾಗಿದೆ. ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಸುಪ್ರೀಂಕೋರ್ಟ್‌ ಆದೇಶ ಪಾಲಿಸಬೇಕಾಗಿದೆ. ಸರ್ಕಾರ ಈ ವಿಷಯದಲ್ಲಿ ತೆಗೆದುಕೊಳ್ಳುವ ನಿಲುವಿಗೆ ಪಕ್ಷ ಬೆಂಬಲ ಸೂಚಿಸಲಿದೆ ಎಂದರು.
*
ಜನವರಿಯವರೆಗೆ ಕುಡಿಯುವ ನೀರಿನ ಉದ್ದೇಶಕ್ಕೆ 23.3 ಟಿಎಂಸಿ ಅಡಿ ನೀರಿನ ಅವಶ್ಯಕತೆ ಇದೆ. ಅದಕ್ಕೆ ಧಕ್ಕೆಯಾಗಂತೆ ನೋಡಿಕೊಳ್ಳಲು ಸರ್ಕಾರ ಬದ್ಧವಾಗಿದೆ.
ಸಿದ್ದರಾಮಯ್ಯ,
ಮುಖ್ಯಮಂತ್ರಿ
*

ತಮಿಳುನಾಡಿಗೆ ನೀರು ಹರಿಸಿದರೆ ನಮ್ಮ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ರಾಜ್ಯದ ರೈತರಿಗೆ ಮಾತ್ರ ಕಾವೇರಿ ನೀರು ಸೀಮಿತವಾಗಬೇಕು.
ಜಗದೀಶ ಶೆಟ್ಟರ್‌,
ವಿರೋಧ ಪಕ್ಷದ ನಾಯಕ
*
ರಾಜ್ಯ ಸರ್ಕಾರದ ನಿರ್ಣಯ ಗಮನಿಸಿದರೆ ತಮಿಳುನಾಡಿಗೆ ನೀರು ಬಿಡಲು ಸರ್ಕಾರ ಅಣಿಯಾಗಿದೆಯೇ ಎಂಬ ಅನುಮಾನ ಬರುತ್ತದೆ.
ಕೆ.ಎಸ್‌. ಈಶ್ವರಪ್ಪ,
ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ
(ಪ್ರಜಾವಾಣಿ)

Comments are closed.