
ವಿಶ್ವಸಂಸ್ಥೆ : ಉಗ್ರರ ದಾಳಿ ಮೂಲಕ ಕಾಶ್ಮೀರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬಹುದೆಂದು ಪಾಕಿಸ್ತಾನ ಕನಸು ಕಾಣುತ್ತಿದ್ದರೆ, ಅದು ಎಂದಿಗೂ ನನಸಾಗಲು ಸಾಧ್ಯವಿಲ್ಲ. ಭಾರತದಿಂದ ಪಾಕಿಸ್ತಾನ ಎಂದಿಗೂ ಕಾಶ್ಮೀರವನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಹೇಳಿದ್ದಾರೆ.
ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಸೋಮವಾರ ಅವರು ಭಾರತ–ಪಾಕ್ ಸಂಬಂಧದ ಬಗ್ಗೆ ಮಾತನಾಡಿದರು. ಹಿಂದೆಂದೂ ಕಾಣದಂತಹ ಸ್ನೇಹ ಹಸ್ತವನ್ನು ಪಾಕಿಸ್ತಾನದೆಡೆ ಚಾಚಿದ ಭಾರತಕ್ಕೆ ಪ್ರತಿಯಾಗಿ ಸಿಕ್ಕಿದ್ದು ಪಠಾಣ್‌ಕೋಟ್ ಹಾಗೂ ಉರಿ ಮೇಲಿನ ದಾಳಿಗಳು ಎಂದು ಭಾವಾವೇಶದಿಂದ ಹೇಳಿದರು.
‘ಪಾಕಿಸ್ತಾನದ ಕಡೆ ನಾವು ಸ್ನೇಹದ ಹಸ್ತ ಚಾಚಿದೆವು. ಹಬ್ಬಗಳ ಸಂದರ್ಭದಲ್ಲಿ ಪಾಕಿಸ್ತಾನದ ನಾಯಕರಿಗೆ ಶುಭಾಶಯ ಕೋರಿದೆವು. ಪಾಕಿಸ್ತಾನದ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿದೆವು. ಪಾಕ್ ನಾಯಕರ ಆರೋಗ್ಯ ಸುಧಾರಿಸಲಿ ಎಂದು ಆಶಿಸಿದೆವು. ಇಷ್ಟೆಲ್ಲ ಮಾಡಿದ್ದಕ್ಕೆ ಪ್ರತಿಯಾಗಿ ನಮಗೆ (ಭಾರತಕ್ಕೆ) ಸಿಕ್ಕಿದ್ದು ಪಠಾಣ್‌ಕೋಟ್, ಉರಿ ಮೇಲಿನ ದಾಳಿ’ ಎಂದು ಸುಷ್ಮಾ ಹೇಳಿದರು.
ದ್ವಿಪಕ್ಷೀಯ ಮಾತುಕತೆಗೆ ಭಾರತವು ಷರತ್ತುಗಳನ್ನು ಒಡ್ಡುತ್ತಿದೆ ಎಂದು ಪಾಕಿಸ್ತಾನ ಮಾಡಿದ ಆರೋಪವನ್ನು ಸುಷ್ಮಾ ಬಲವಾಗಿ ಅಲ್ಲಗಳೆದರು.
‘ಮಾತುಕತೆಗೆ ಭಾರತ ಎಂತಹ ಷರತ್ತು ವಿಧಿಸಿತ್ತು? ನಮ್ಮ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನ ನೀಡುವಾಗ ಷರತ್ತು ವಿಧಿಸಿದ್ದೆವಾ? ನಾನು ಇಸ್ಲಾಮಾಬಾದ್‌ಗೆ ಭೇಟಿ ನೀಡಿ, ದ್ವಿಪಕ್ಷೀಯ ಮಾತುಕತೆ ಪುನರಾರಂಭಕ್ಕೆ ಸಮ್ಮತಿ ನೀಡಿದಾಗ ಷರತ್ತು ವಿಧಿಸಲಾಗಿತ್ತಾ? ಪ್ರಧಾನಿ ನರೇಂದ್ರ ಮೋದಿ ಅವರು ಕಾಬೂಲ್‌ನಿಂದ ಮರಳುವಾಗ, ಲಾಹೋರ್‌ಗೆ ಭೇಟಿ ನೀಡಿದರು. ಆಗ ಷರತ್ತು ವಿಧಿಸಿದ್ದರಾ?’ ಎಂದು ಸುಷ್ಮಾ ಪ್ರಶ್ನಿಸಿದರು.
‘ಉರಿಯಲ್ಲಿ ನಡೆಸಿದಂತಹ ದಾಳಿಗಳ ಮೂಲಕ ತಾನು ಹಂಬಲಿಸುವ ಕಾಶ್ಮೀರವನ್ನು ಪಡೆಯಲು ಪಾಕಿಸ್ತಾನಕ್ಕೆ ಸಾಧ್ಯವಿಲ್ಲ. ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ. ಅದು ಯಾವತ್ತಿಗೂ ಭಾರತದ ಜೊತೆಯೇ ಇರಲಿದೆ. ಕಾಶ್ಮೀರವನ್ನು ತನ್ನದಾಗಿಸಿಕೊಳ್ಳುವ ಕನಸು ಕಾಣುವುದನ್ನು ಪಾಕಿಸ್ತಾನ ನಿಲ್ಲಿಸಬೇಕು’ ಎಂದು ಹೇಳಿದರು.
ಮಹಾ ಅಧಿವೇಶದಲ್ಲಿ ಹಿಂದಿಯಲ್ಲಿ 20 ನಿಮಿಷ ಭಾಷಣ ಮಾಡಿದ ಸುಷ್ಮಾ ಪಾಕಿಸ್ತಾನದ ವಿರುದ್ಧ ಕಟು ವಾಗ್ದಾಳಿ ನಡೆಸಿದರು. ‘ವಿಶ್ವಸಂಸ್ಥೆಯು ಕೆಲವರನ್ನು ಭಯೋತ್ಪಾದಕರು ಎಂದು ಘೋಷಿಸುತ್ತದೆ. ಆದರೆ ಅಂಥ ಭಯೋತ್ಪಾದಕರು ನಮ್ಮ ನಡುವೆಯೇ ಇರುವ ಕೆಲವು ದೇಶಗಳಲ್ಲಿ ಮುಕ್ತವಾಗಿ ಓಡಾಡಿಕೊಂಡಿರುತ್ತಾರೆ. ಶಿಕ್ಷೆಯ ಭಯವೇ ಇಲ್ಲದೆ ವಿಷ ಕಾರುತ್ತಿರುತ್ತಾರೆ’ ಎಂದು ಮುಂಬೈ ಮೇಲಿನ ದಾಳಿಯ ಸಂಚುಕೋರ, ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಸಯೀದ್ ಹೆಸರು ಉಲ್ಲೇಖಿಸದೆ ಆಕ್ರೋಶ ವ್ಯಕ್ತಪಡಿಸಿದರು.
‘ನಮ್ಮ ನಡುವಣ ಕೆಲವು ದೇಶಗಳು ಭಯೋತ್ಪಾದನೆಯ ಭಾಷೆಯನ್ನೇ ಮಾತನಾಡುತ್ತವೆ. ಅಂತಹ ರಾಷ್ಟ್ರಗಳ ಜತೆಗಿನ ಸಂಪರ್ಕವನ್ನು ಇತರರು ಕಡಿದುಕೊಳ್ಳಬೇಕು’ ಎಂದು ಸುಷ್ಮಾ ಕರೆ ನೀಡಿದರು.
‘ಭಾರತದ ವಶದಲ್ಲಿರುವ ಬಹಾದ್ದೂರ್ ಅಲಿ ಎಂಬ ಭಯೋತ್ಪಾದಕ, ಗಡಿಯಾಚೆಗಿನ ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಪಾತ್ರ ಇದೆ ಎಂಬುದಕ್ಕೆ ಜೀವಂತ ಸಾಕ್ಷಿ’ ಎಂದು ಹೇಳಿದರು. ಪಾಕ್‌ಗೆ ಸಾಕ್ಷ್ಯಗಳನ್ನು ತೋರಿಸಿದಾಗ, ಅದು ನಿರಾಕರಣದ ಧಾಟಿಯಲ್ಲಿ ಮಾತನಾಡುತ್ತದೆ ಎಂದು ಕುಟುಕಿದರು.
ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು ಕಾಶ್ಮೀರದ ಕುರಿತು ಆಡಿದ ಮಾತುಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಸುಷ್ಮಾ ಸ್ವರಾಜ್, ‘ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಇನ್ನೊಬ್ಬರ ಮೇಲೆ ಆರೋಪಿಸುವವರು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಹೇಳಿದರು.
‘ಬಲೂಚಿಸ್ತಾನದಲ್ಲಿ ಪಾಕಿಸ್ತಾನ ನಡೆಸುತ್ತಿರುವುದು ಜನರ ಮೇಲೆ ಸರ್ಕಾರವೊಂದು ನಡೆಸಬಹುದಾದ ಅತ್ಯಂತ ಕ್ರೂರ ದಬ್ಬಾಳಿಕೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಲೂಚಿಸ್ತಾನದ ಬಗ್ಗೆ ಭಾರತವು ವಿಶ್ವಸಂಸ್ಥೆಯ ಮಹಾ ಅಧಿವೇಶನಲ್ಲಿ ಉಲ್ಲೇಖಿಸುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಮಹಾ ಅಧಿವೇಶನದಲ್ಲಿ ಮಾತನಾಡಿದ್ದ ನವಾಜ್ ಷರೀಫ್ ಅವರು, ಭಾರತವು ಕಾಶ್ಮೀರದಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದ್ದರು.
ಸುಷ್ಮಾ ಮಾತಿಗೆ ಕರತಾಡನ: ಸುಷ್ಮಾ ಸ್ವರಾಜ್ ಅವರು ಭಯೋತ್ಪಾದನೆಯ ಬಗ್ಗೆ ಉಲ್ಲೇಖಿಸಿದಾಗ, ಮಹಾ ಅಧಿವೇಶನಕ್ಕೆ ಸೇರಿದ್ದವರಿಂದ ಕರತಾಡನ ವ್ಯಕ್ತವಾಯಿತು. ಆದರೆ, ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು ಇದೇ ಸಭೆಯಲ್ಲಿ ಭಾಷಣ ಮಾಡಿದ್ದಾಗ, ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ತೀರಾ ಕಡಿಮೆ ಸಂಖ್ಯೆಯಲ್ಲಿದ್ದರು.
Comments are closed.