ಕರಾಚಿ, ಆ. ೮- ಪಾಕಿಸ್ತಾನದ ನೈಋತ್ಯಕ್ಕಿರುವ ಗಲಭೆಪೀಡಿತ ಬಲೂಚಿಸ್ತಾನದ ಕ್ವೆಟ್ಟಾದಲ್ಲಿನ ಆಸ್ಪತ್ರೆಯೊಂದರಲ್ಲಿ ಪ್ರಬಲ ಬಾಂಬ್ ಒಂದು ಸ್ಫೋಟಿಸಿದ ಪರಿಣಾಮವಾಗಿ 40 ಮಂದಿ ಸತ್ತು ಇತರ 50 ಜನ ಗಾಯಗೊಂಡಿದ್ದಾರೆ. ಬಾಂಬ್ ಸ್ಫೋಟಿಸುತ್ತಿದ್ದಂತೆಯೇ ಗುಂಡಿನ ಸುರಿಮಳೆಗರೆದು ಜನರನ್ನು ಹತ್ಯೆ ಮಾಡಲಾಗಿದೆ.
ಬಲೂಚಿಸ್ತಾನ್ ಬಾರ್ ಅಸೋಸಿಯೇಷನ್‌ನ ಅಧ್ಯಕ್ಷ ಹಾಗೂ ವಕೀಲ ಬಿಲಾಲ್ ಅನ್ವರ್ ಕಾಸಿ ಎಂಬುವವರಿಗೆ ಗುಂಡಿಕ್ಕಿ ಕೊಲ್ಲಲಾಗಿತ್ತು. ನಂತರ ಭಾರಿ ಸ್ಫೋಟದ ಸದ್ದು ಕೇಳಿಸಿತು. ಅದರ ಜತೆಯಲ್ಲೇ ಒಂದೇ ಸಮನೆ ಗುಂಡು ಹಾರಿಸುವ ಸದ್ದೂ ಕೇಳಿಸಿತು.
ಮೊದಲು ಹೊರಗೆ ಬಿಲಾಲ್ ಅನ್ವರ್ ಕಾಸಿ ಅವರಿಗೆ ಗುಂಡೇಟು ಬಿದ್ದ ನಂತರ ಅವರ ಮೃತದೇಹವನ್ನು ಆಸ್ಪತ್ರೆಗೆ ವಕೀಲರು ತಂದರು. ಈ ಸಂದರ್ಭದಲ್ಲಿ ಇಡೀ ಆಸ್ಪತ್ರೆಯನ್ನೇ ಸ್ಫೋಟಿಸಲಾಯಿತು.
ಕಾಸಿ ಅವರ ಮೃತದೇಹವಿದ್ದ ತುರ್ತು ಘಟಕದ ಮುಂದೆ ವಕೀಲರು ಮತ್ತು ಪತ್ರಕರ್ತರು ಗುಂಪುಗೂಡಿದ್ದರು. ಸ್ಫೋಟ ಸಂಭವಿಸಿದಾಗ ಗಾಯಗೊಂಡವರಲ್ಲಿ ಬಹುತೇಕ ಜನ ವಕೀಲರಿದ್ದರು.
ಸ್ಫೋಟದಿಂದಾಗಿ ಕನಿಷ್ಠಪಕ್ಷ 25 ಮಂದಿ ಸತ್ತು ಇತರ 35 ಮಂದಿ ಗಾಯಗೊಂಡಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಅಪರಿಚಿತ ವ್ಯಕ್ತಿಗಳು ಸ್ಫೋಟದ ನಂತರ ಒಂದೇ ಸಮನೆ ಗುಂಡು ಹಾರಿಸಲಾರಂಭಿಸಿದರು.
ಕ್ವೆಟ್ಟಾದಲ್ಲಿನ ಎಲ್ಲಾ ಆಸ್ಪತ್ರೆಗಳಿಗೂ ದಿಗ್ಬಂಧನ ವಿಧಿಸಲಾಗಿದ್ದು, ಅಲ್ಲೆಲ್ಲಾ ತುರ್ತು ಸ್ಥಿತಿ ಘೋಷಿಸಲಾಗಿದೆ.
ಗಡಿಕಾವಲು ಸೇನೆ ಮತ್ತು ಪೊಲೀಸರ ಭಾರಿ ದಂಡು ಆಸ್ಪತ್ರೆ ಸುತ್ತುವರೆದು ನಿಂತಿದೆ.
ಕ್ವೆಟ್ಟಾದ ಮೆಂಗಲ್ ಚೌಕ್ ಎಂಬಲ್ಲಿ ವಕೀಲ ಕಾಸಿ ಅವರ ಕಾರಿನ ಮೇಲೆ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದಾಗ ತೀವ್ರವಾಗಿ ಗಾಯಗೊಂಡಿದ್ದ ಕಾಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಇದೊಂದು ಭದ್ರತಾ ವೈಫಲ್ಯವಾಗಿದ್ದು, ಈ ಬಗ್ಗೆ ವೈಯಕ್ತಿಕವಾಗಿ ತನಿಖೆ ನಡೆಸುತ್ತೇನೆ ಎಂದು ಬಲೂಚಿಸ್ತಾನದ ಗೃಹ ಸಚಿವ ಸರ್ಫರಾಜ್ ಬುಗ್ತಿ ಹೇಳಿದ್ದಾರೆ.
ಆತ್ಮಹತ್ಯಾ ಬಾಂಬರ್ ಒಬ್ಬ ಆಸ್ಪತ್ರೆ ಒಳನುಗ್ಗಿ ಸ್ಫೋಟಿಸಿಕೊಂಡಿದ್ದಾನೆ ಎಂಬ ಶಂಕೆಯಿದೆ ಎಂದೂ ಅವರು ಹೇಳಿದ್ದಾರೆ.
ಈವರೆಗೆ ಯಾವೊಂದು ಭಯೋತ್ಪಾದಕ ಸಂಘಟನೆಯೂ ಸ್ಫೋಟ ಮತ್ತು ಗುಂಡು ಹಾರಿಸಿದ್ದರ ಹೊಣೆ ತನ್ನದೆಂದು ಹೇಳಿಕೊಂಡಿಲ್ಲ.
Comments are closed.