ಬೆಂಗಳೂರು, ಆ. ೮-ಕಳೆದ ಮೂರು ದಿನಗಳಿಂದ ನಗರದ ನಾನಾ ಕಡೆಗಳಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದ ಮನೆಗಳು,ಶೆಡ್‌ಗಳನ್ನು ನೆಲಸಮ ಮಾಡುವ ಕೆಲಸದಲ್ಲಿ ನಿರತರಾಗಿರುವ ಮಹಾನಗರಪಾಲಿಕೆ ಇಂದೂ ಕೂಡ ಮಹದೇವಪುರ ಮತ್ತು ಯಲಹಂಕ ವಲಯದಲ್ಲಿ “ಅಪರೇಷನ್ ರಾಜಕಾಲುವೆ” ತೆರವು ಬೆಳಿಗ್ಗೆಯಿಂದಲೇ ಮುಂದುವರಿದಿದೆ.
ಮಹದೇವಪುರ ವ್ಯಾಪ್ತಿಯ ಕೈಕೊಂಡನಹಳ್ಳಿ, ಕಸವನಹಳ್ಳಿ ಕೆರೆ,ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದ ಪ್ರದೇಶವನ್ನು ಜಂಟಿ ಆಯುಕ್ತ ಮನಿವೀರಯ್ಯ ನೇತೃತ್ವದಲ್ಲಿ ಪಾಲಿಕೆಯ ಅಧಿಕಾರಿಗಳು ಹಾಗು ಪೊಲೀಸರ ಬಿಗಿ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ ನಡೆದಿದೆ. ೧೧೦೦ ಮೀಟರ್ ನಷ್ಟು ಒತ್ತುವರಿಯನ್ನು ತೆರವುಗೊಳಿಸಲು ಅಧಿಕಾರಿಗಳು ಗುರುತು ಮಾಡಿದ್ದಾರೆ.
ಪಾಲಿಕೆಯ ಅಧಿಕಾರಿಗಳು ಇದುವರೆಗೂ ಆರು ಮನೆಗಳನ್ನು ತೆರವು ಮಾಡಿದ್ದು,ಮನೆಯ ಮಾಲೀಕರು ಮನೆಯನು ಒಡೆಯದಂತೆ ಮಾಡಿದ ಮನವಿಗೂ ಕಿವಿಗೊಡದೆ ಜೆಸಿಬಿಗಳು ತಮ್ಮ ಕೆಲಸ ಮುಂದುವರಿಸಿವೆ.
ಮನೆ,ಶೆಡ್‌ಗಳನ್ನು ತೆರವು ಮಾಡಲು ಪಾಲಿಕೆ ಅಧಿಕಾರಿಗಳು ಮುಂದಾಗುತ್ತಿದ್ದಂತೆ ಸ್ಥಳೀಯರು ಪೊಲೀಸರು ಮತ್ತು ಪಾಲಿಕೆಯ ಅಧಿಕಾರಿಗಳ ಜೊತೆ ವಾಗ್ವಾದವನ್ನೂ ನಡೆಸಿದರು.
ಅವನಿ ಶೃಂಗೇರಿ ನಗರದಲ್ಲಿ ರಾಜಕಾಲುವೆಯ ಮೇಲೆ ಮನೆಗಳನ್ನು ನಿರ್ಮಿಸಿಕೊಂಡವರ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ಒತ್ತುವರಿಯಾಗಿರುವ ಪ್ರದೇಶಗಳ ಮನೆಗಳನ್ನು ಗುರುತಿಸಿ ಮಾರ್ಕ್ ಮಾಡಲಾಗುತ್ತಿದೆ. ಒತ್ತುವರಿ ಮಾಡಿಕೊಂಡಿರುವ ಮನೆಯ ಮಾಲೀಕರು ತಾವಾಗಿಯೇ ತೆರವು ಕಾರ್ಯಾಚರಣೆಗೆ ಸಹಕರಿಸುವಂತೆ ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾಸ್ ಒತ್ತುವರಿದಾರರಲ್ಲಿ ಮನವಿ ಮಾಡಿದ್ದಾರೆ.
ಯಲಹಂಕ ವ್ಯಾಪ್ತಿಯ ರಾಮಚಂದ್ರಪುರದಲ್ಲಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ನೇತೃತ್ವದಲ್ಲಿ ತೆರೆವು ಕಾರ್ಯಾಚರಣೆ ಮುಂದುವರಿದಿದೆ. ರಾಜಕಾಲುವೆ ಒತ್ತುವರಿ ತೆರವು ಮಾಡುವಂತೆ ಹಿಂದೆಯೂ ಪಾಲಿಕೆ ವತಿಯಿಂದ ನೋಟೀಸ್ ನೀಡಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ರಾಜಕಾಲುವೆ ತೆರವಿಗೆ ಪಾಲಿಕೆ ಮುಂದಾಗಿದೆ.
Comments are closed.