ಬೆಳಗಾವಿ, ಆ. ೮ – ಮಳೆ ನಿಂತರೂ ಹನಿ ನಿಲ್ಲದು ಎಂಬಂತೆ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ವರುಣನ ಆರ್ಭಟ ಕೊಂಚ ಕಡಿಮೆಯಾಗಿದ್ದರೂ ಜಿಲ್ಲೆಯಲ್ಲಿನ ಪ್ರವಾಹ ಪರಿಸ್ಥಿತಿ ತಗ್ಗಿಲ್ಲ.
ನಿನ್ನೆಯಿಂದ ಮಹಾಮಳೆ ಅಲ್ಪಸ್ವಲ್ಪ ವಿರಾಮ ನೀಡುತ್ತ ತನ್ನ ಆರ್ಭಟವನ್ನು ಕಡಿಮೆಗೊಳಿಸಿದೆ. ಆದರೆ ಇನ್ನೂ ಬೆಳಗಾವಿ ಜಿಲ್ಲೆಯ ಕೃಷ್ಣಾ, ದೂಧಗಂಗಾ, ವೇದಗಂಗಾ, ಮಲಪ್ರಭಾ, ಘಟಪ್ರಭಾ, ನದಿಗಳಿಗೆ ಮಹಾರಾಷ್ಟ್ರದಿಂದ ನೀರು ಹರಿದು ಬರುತ್ತಿರುವುದರಿಂದ ಚಿಕ್ಕೋಡಿ, ರಾಯಬಾಗ, ಅಥಣಿ, ಖಾನಾಪುರ ತಾಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ.
ಈಗಾಗಲೇ ಮುಳುಗಡೆ ಹೊಂದಿದ್ದ ಸೇತವೆಗಳಾದ ಎಕ್ಸಂಬಾ-ದತ್ತವಾಡ, ಕಾರಗದಾ-ಭೋಜ, ಇಂಗಳಿ-ಮಾಂಜರಿ, ಅಕ್ಕೋಳ-ಸಿದ್ನಾಳ, ಭೋಜವಾಡಿ-ಹೊನ್ನರಗಿ, ಉಗಾರ-ಖುರ್ದ, ಚಿಕ್ಕೋಡಿ-ಚಿಂಚಲಿ, ಕಲ್ಲೋಳಿ-ಯಡೂರ, ಜತ್ರಾಟ-ಬಿವಸಿ ಇನ್ನೂ ನೀರಿನಿಂದಲೇ ಆವೃತವಾಗಿದ್ದು, ವಾಹನ ಸಂಚಾರ ಸೇರಿದಂತೆ ಜನಸಂಪರ್ಕ ಆರಂಭವಾಗಿಲ್ಲ.
ರಾಯಬಾಗ ತಾಲೂಕಿನ ಇಂಗಳಿ ಗ್ರಾಮ ಸಂಪೂರ್ಣ ಜಲಾವೃತಗೊಂಡು ನಡುಗಡ್ಡೆಯಾದಂತಾಗಿದೆ. ಜಿಲ್ಲಾಡಳಿತ ಈ ಗ್ರಾಮಸ್ಥರ ಸ್ಥಳಾಂತರಕ್ಕಾಗಿ ದೋಣಿಗಳನ್ನು ಬಳಸಿ ಸುರಕ್ಷಿತ ಸ್ಥಳಕ್ಕೆ ಗ್ರಾಮಸ್ಥರನ್ನು ಸಾಗಿಸಿದ್ದಾರೆ.
ಸಂತ್ರಸ್ತರಿಗಾಗಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ.
ಮಹಾರಾಷ್ಟ್ರದಲ್ಲಿ ಮಳೆ ನಿಂತಿದ್ದರೂ ಕೂಡ ವರುಣಾ ಜಲಾಶಯದಿಂದ 25,670 ಕ್ಯೂಸೆಕ್ ನೀರು, ಹಿಪ್ಪರಗಿ ಜಲಾಶಯದಿಂದ ಕೃಷ್ಣಾ ನದಿಗೆ 1.80 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿರುವುದರಿಂದ ಜಿಲ್ಲೆಯ ಪಂಚ ನದಿಗಳು ಇನ್ನೂ ತುಂಬಿ ಹರಿಯುತ್ತಿವೆ. ಆದ್ದರಿಂದ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. ಒಂದು ವೇಳೆ ನಿನ್ನೆಯ ರೀತಿಯಲ್ಲಿ ವರುಣ ಮಹಾರಾಷ್ಟ್ರದಲ್ಲಿ ಇಂದೂ ವಿರಾಮ ನೀಡಿದರೆ ಬೆಳಗಾವಿ ಜಿಲ್ಲೆಯ ಪ್ರವಾಹ ಪರಿಸ್ಥಿತಿಗೆ ಕೊಂಚ ಆರಾಮ ದೊರಕುವ ಲಕ್ಷಣಗಳಿವೆ.
ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ.
ಈಗ ಹೇಳಿ ಕೇಳಿ ಶ್ರಾವಣ ಮಾಸ. ಶ್ರಾವಣ ಮಾಸದಲ್ಲಿ ತಮ್ಮ ಇಷ್ಟದೇವರ ದರ್ಶನ ಪಡೆಯಲು ಭಕ್ತರು ಹವಣಿಸುವುದು ಸಹಜ. ಅದೇ ರೀತಿ ಶ್ರೀ ವೀರಭದ್ರೇಶ್ವರ ಭಕ್ತರು ಕೂಡ ರಾಜ್ಯದ ಮೂಲೆ ಮೂಲೆಗಳಿಂದ ಯಡೂರಿಗೆ ಆಗಮಿಸುತ್ತಾರೆ.
ಆ ರೀತಿ ಆಗಮಿಸುತ್ತಿರುವ ಭಕ್ತರು ದೇವಸ್ಥಾನದ ಒಳಗಡೆ ತೆರಳಲಾಗದೆ ಪರದಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಏತನ್ಮಧ್ಯೆ ಜಿಲ್ಲೆಯಲ್ಲಿ ಪ್ರಳಯದ ಭೀತಿ ಇದ್ದರೂ ನಿನ್ನೆ ಚಿಕ್ಕೋಡಿಯಲ್ಲಿ ಪರಿಸ್ಥಿತಿಯ ಅವಲೋಕನ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಬೆಳಗಾವಿ ಜಿಲ್ಲಾಧಿಕಾರಿ ಎನ್. ಜಯರಾಮ ಅವರು, ಹರಿದು ಬರುತ್ತಿರುವ ನೀರಿನ ಪ್ರಮಾಣದಷ್ಟೇ ಹೊರಗಡೆ ನೀರು ಬಿಡುತ್ತಿರುವುದರಿಂದ ಸದ್ಯ ಪ್ರವಾಹದ ಭೀತಿಯಿಲ್ಲ. ಜನರು ಆತಂಕ ಪಡಬೇಕಾಗಿಲ್ಲ ಎಂದರು.
ಈಗಾಗಲೇ ನದಿ ತೀರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರಳಯದ ಭೀತಿಯನ್ನು ಎದುರಿಸಲು ಜಿಲ್ಲಾಡಳಿತ ಸಕಲವಾಗಿ ಸನ್ನದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.
Comments are closed.