ಯಾಹೂ..! ಇಂಟರ್ನೆಟ್‌ನಲ್ಲಿ ಇದರ ಹೆಸರು ಕೇಳದವರು ಕಡಿಮೆಯೇ. ಒಂದು ಕಾಲದಲ್ಲಿ ಯಾರಲ್ಲೇ ಕೇಳಿ.. ತಮ್ಮದೊಂದು ಇಮೇಲ್ ಐಡಿ ಯಾಹೂವಿನಲ್ಲಿರುವುದು ದೊಡ್ಡ ಸಂಗತಿ. ವೆಬ್ ಪೋರ್ಟಲ್‌ನಿಂದ ಹಿಡಿದು ಯಾಹೂ ನ್ಯೂಸ್‌ವರೆಗೆ ಯಾಹೂ ಚಾಚಿಕೊಂಡಿತ್ತು. ಯಾಹೂ. ಇಂಕ್ ಹೆಸರಿನ ಈ ಸಾಫ್ಟವೇರ್ ಕಂಪನಿ ಇದೀಗ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಿಂದೆ ಬಿದ್ದಿದೆ. ಪ್ರಸಿದ್ಧ ಕಂಪನಿ ವೆರಿಝೋನ್ ಯಾಹೂವನ್ನು 32 ಸಾವಿರ ಕೋಟಿ ರೂ.ಗಳಿಗೆ ಖರೀದಿ ಮಾಡಿದ್ದು, ಒಂದರ್ಥದಲ್ಲಿ ಯಾಹೂವಿನ ಅಧ್ಯಾಯ ಮುಗಿದಿದೆ. ಈ ಹಿನ್ನೆಲೆಯಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಯಾಹೂ ಬಿದ್ದಿದ್ದು ಹೇಗೆ? ಯಾಹೂ ಹಿಂದಿನ ಕಥೆಯೇನು ಎಂಬ ಕುರಿತ ವಿವರಗಳು ಇಲ್ಲಿವೆ.
ಅಮೆರಿಕದಲ್ಲಿ ಶುರುವಾಗಿದ್ದ ಕಂಪನಿ 1994ರಲ್ಲಿ ಯಹೂ ಜನ್ಮತಳೆದಿದ್ದು. ಇದಕ್ಕೆ ಕಾರಣ ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಡೇವಿಡ್ ಫಿಲೋ ಮತ್ತು ಜೆರ್ರಿ ಯಂಗ್. ಇಂಟರ್ನೆಟ್‌ನಲ್ಲಿ ಡೈರೆಕ್ಟರಿ ಮಾದರಿ ತಾಣವೊಂದನ್ನು ಅಭಿವೃದ್ಧಿಪಡಿಸುವ ಇರಾದೆ ಇವರಿಗಿತ್ತು. ಆರಂಭದಲ್ಲಿ ಇದಕ್ಕೆ “ಜೆರಿ ಆ್ಯಂಡ್ ಡೇವಿಡ್ಸ್ ಗೈಡ್ ಟು ವಲ್ಡ್ ವೈಡ್ ವೆಬ್’ ಎಂಬ ಹೆಸರಿಡಲಾಗಿತ್ತು. ಇತರ ವಿವಿಧ ವೆಬ್‌ಸೈಟ್‌ಗಳ ವಿಳಾಸ ಮಾಹಿತಿಗಳನ್ನು ಇದರಲ್ಲಿ ಕೊಡಲಾಗುತ್ತಿತ್ತು. 1995ರಲ್ಲಿ ಇದರ ಹೆಸರನ್ನು “ಯಾಹೂ’ ಎಂದು ಬದಲಿಸಲಾಯಿತು. ಅಂದರೆ Yet Another Hierarchically Organized Oracle- YAHOO!!
ಕ್ಷಿಪ್ರ ಬೆಳವಣಿಗೆ ಕಂಡಿದ್ದ ಕಂಪನಿ
1996ರ ಹೊತ್ತಿಗೆ ಸಾಫ್ಟವೇರ್ ತಂತ್ರಜ್ಞಾನ ವಲಯದಲ್ಲಿ ಅತ್ಯಂತ ದೊಡ್ಡ ಸ್ಟಾರ್ಟಪ್ ಕಂಪನಿಯಾಗಿ ಯಾಹೂ ಹೆಸರು ಮಾಡಿತ್ತು. ಕ್ಯಾಲಿಫೋರ್ನಿಯಾದ ಸನ್ನಿವೇಲ್ ನಲ್ಲಿ ಯಾಹೂ ಮುಖ್ಯ ಕಚೇರಿ ಆರಂಭಿಸಿದ್ದು, ಪೋರ್ಟಲ್ ಆಗಿ ಬಡ್ತಿಯಾಗಿತ್ತು. ಯಾಹೂ ಸಿನೆಮಾದಿಂದ ಹಣಕಾಸು ವರೆಗೆ ವಿವಿಧ ಸೇವೆಗಳನ್ನು ನೀಡುವ ತಾಣವಾಗಿ ಪ್ರಸಿದ್ಧಿಯಾಗಿತ್ತು. ಸರ್ಚ್ ಎಂಜಿನ್ ಕೂಡ ಯಾಹೂ ಅಭಿವೃದ್ಧಿ ಪಡಿಸಿದ್ದು, ವಿಶ್ವಾದ್ಯಂತ ಪ್ರಸಿದ್ಧಿಯಾಗಿತ್ತು
ಯಾಹೂ ಭರ್ಜರಿ ಹೆಸರು
ಯಾಹೂ ಮೇಲ್, ಯಾಹೂ ಸರ್ಚ್ ಎಂಜಿನ್ ಭರ್ಜರಿ ಹೆಸರು ಮಾಡಿತ್ತು. ಇದೇ ವೇಳೆ ಆದಾಯವೂ ವೃದ್ಧಿಯಾಗಿದ್ದು ಕಂಪನಿ ಹಲವು ಕಂಪನಿಗಳನ್ನು ಖರೀದಿಸಿತ್ತು. ಯಾಹೂ ಷೇರುಗಳೂ ಭರ್ಜರಿ ಏರಿಕೆ ಕಂಡಿದ್ದವು. ಯಾಹೂ ಸರ್ಚ್ ವಿಶ್ವಾದ್ಯಂತ ವ್ಯಾಪಕವಾಗಿ ಬಳಕೆಯಾಗುತ್ತಿತ್ತು. ಮೆಸೇಜಿಂಗ್, ಸುದ್ದಿ, ವಿಡಿಯೋಗಳಿಗೆ ಯಾಹೂ ಹೆಸರು ಮಾಡಿತ್ತು. 1998ರಲ್ಲಿ ಗೂಗಲ್ ಆರಂಭವಾಗಿದ್ದು, ಯಾಹೂಗೆ ಮತ್ತೋರ್ವ ಪ್ರತಿಸ್ಪರ್ಧಿ ಹುಟ್ಟಿಕೊಂಡಿತು. ಆದಾಗ್ಯೂ 2000 ಇಸವಿ ವರೆಗೆ ಯಾಹೂ ಹಿಡಿಯುವವರೇ ಇರಲಿಲ್ಲ
ಗೂಗಲ್‌ನಿಂದ ಯಾಹೂ ಓವರ್‌ಟೇಕ್!
ಯಾಹೂ ವಿಶ್ವಾದ್ಯಂತ ಪ್ರಸಿದ್ಧವಾಗಿದ್ದ ವೇಳೆ ಗೂಗಲ್ ಕಂಪನಿ ಆರಂಭವಾಗಿತ್ತು. 1998ರಲ್ಲಿ ಸರ್ಚ್ ಎಂಜಿನ್ ಜೊತೆ ಗೂಗಲ್ ಆರಂಭಗೊಂಡಿದ್ದು ಬಳಿಕ ಇಮೇಲ್ ಸೇವೆಯನ್ನು ನೀಡಿತ್ತು. ನಿಧಾನಕ್ಕೆ ಗೂಗಲ್ ಯೂಟ್ಯೂಬ್ ಇತ್ಯಾದಿ ಪ್ರಸಿದ್ಧವಾಗತೊಡಗಿತ್ತು. ಇದಕ್ಕೆ ಕಾರಣ ಗೂಗಲ್ ಇಮೇಲ್‌ನಲ್ಲಿ ಮೇಲ್ ಸಂಗ್ರಹಣೆಗೆ ಹೆಚ್ಚುವರಿ ಸ್ಥಳವಾಕಾಶ, ಹೆಚ್ಚಿನ ಸೌಲಭ್ಯಗಳು ಇತ್ಯಾದಿ. 2008ರ ವೇಳೆಗೆ ಗೂಗಲ್ ಯಾಹೂವನ್ನು ಓವರ್‌ಟೇಕ್ ಮಾಡಿತ್ತು. ಆದಾಗ್ಯೂ ಇಂದಿಗೂ ಯಾಹೂ ಮೇಲ್ ಗೂಗಲ್‌ನ ಜಿಮೇಲ್ ನಂತರ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದೆ.
ಗೂಗಲನ್ನೇ ಖರೀದಿಗೆ ಯೋಜಿಸಿದ್ದ ಯಾಹೂ
ಗೂಗಲ್ ಸಾರ್ವಜನಿಕ ಸೇವೆಗಳಿಗೆ ತೆರೆವ ಮುನ್ನ ಗೂಗಲ್ ಅನ್ನು ಖರೀದಿಸಲು ಯಾಹೂ ಉದ್ದೇಶಿಸಿತ್ತು. ಇದಕ್ಕಾಗಿ ಯಹೂ ಸಹ ಸಂಸ್ಥಾಪಕರು ಮಾತುಕತೆಯನ್ನೂ ನಡೆಸಿದ್ದರು. ಈ ವೇಳೆ 1 ಬಿಲಿಯನ್ ಡಾಲರ್ (ಅಂದಾಜು 6 ಸಾವಿರ ಕೋಟಿ ರೂ.) ನೀಡುವುದಾಗಿ ಹೇಳಿದ್ದರು. ಆದರೆ ಗೂಗಲ್ ಇದನ್ನು ತಿರಸ್ಕರಿಸಿದ್ದು, ಮಾರಾಟವಿಲ್ಲ ಎಂದು ಹೇಳಿತ್ತು. ಇದೇ ರೀತಿ ಯಾಹೂವನ್ನು ಖರೀದಿಸಲು 2005ರಲ್ಲಿ ಮೈಕ್ರೋಸಾಫ್ಟ್ ಮುಂದಾಗಿತ್ತು. 2.97 ಲಕ್ಷ ರೂ.ಗೆ ಅದು ಪ್ರಸ್ತಾಪವಿಟ್ಟಿತ್ತು. ಈ ಸಂದರ್ಭ ಗೂಗಲ್‌ನಿಂದ ಎರಡೂ ಕಂಪನಿಗಳು ತೀವ್ರ ಸ್ಪರ್ಧೆ ಎದುರಿಸಿದ್ದವು. ಕೆಲ ದಿನಗಳ ಬಳಿಕ ಮೈಕ್ರೋಸಾಫ್ಟ್ ಇನ್ನೂ ಹೆಚ್ಚುವರಿ 3 ಸಾವಿರ ಕೋಟಿ ನೀಡುವು ದಾಗಿ ಹೇಳಿತ್ತು. ಆದರೆ ಯಾಹೂ ಅದನ್ನು ತಿರಸ್ಕರಿಸಿತ್ತು.
ಪಾರಮ್ಯ ಉಳಿಸಲು ಯತ್ನ
ಯಾಹೂ ಗೂಗಲ್‌ನಿಂದ ತೀವ್ರ ಪೈಪೋಟಿ ಎದುರಿಸುತ್ತಿದ್ದರೂ, ಅದು ಮಾರುಕಟ್ಟೆ ಪಾರಮ್ಯವನ್ನು ಉಳಿಸಿಕೊಳ್ಳಲು ತೀವ್ರ ಪ್ರಯತ್ನ ಮಾಡಿತ್ತು. ಇದಕ್ಕಾಗಿ ಅದು ಫೊಟೋ ಶೇರಿಂಗ್ ವೆಬ್ ತಾಣ ಫ್ಲಿಕರ್ ಅನ್ನು 2005ರಲ್ಲಿ ಖರೀದಿ ಮಾಡಿತು. 2007ರಲ್ಲಿ ರೈವಲ್ಸ್ ಡಾಟ್ ಕಾಮ್ ಹೆಸರಿನ ಕಾಲೇಜು ಫುಟ್ಬಾಲ್/ಬಾಸ್ಕೆಟ್‌ಬಾಲ್ ಆಯ್ಕೆ ಕುರಿತ ವೆಬ್ ತಾಣ ಖರೀದಿಸಿದ್ದರೆ, 2013ರಲ್ಲಿ ಮೈಕ್ರೋಬ್ಲಾಗಿಂಗ್ ವೆಬ್ ಟಂಬ್ಲಿರ್ ಅನ್ನು ಖರೀದಿಸಿತು. ಅಷ್ಟೇ ಅಲ್ಲದೇ ಚೀನಾದ ಅಲಿಬಾಬಾದಲ್ಲಿ ಪಾಲನ್ನು ಹೊಂದಿತ್ತು.
ಮುಗ್ಗರಿಸಿದ ಯಾಹೂ
ಯಾಹೂ ಕೆಲ ಪ್ರಯತ್ನಗಳನ್ನು ಮಾಡಿದ್ದರೂ ಮಾರುಕಟ್ಟೆಯಲ್ಲಿ ಅದು ಯಾವುದೇ ಪ್ರಯೋಜನಕ್ಕೆ ಬರಲಿಲ್ಲ. 2015ರಲ್ಲಿ ಅದು 4.4 ಬಿಲಿಯನ್ ಡಾಲರ್ (ಅಂದಾಜು 29ಸಾವಿರ ಕೋಟಿ ರೂ.) ನಷ್ಟಕ್ಕೊಳಗಾಗಿತ್ತು. ಆದಾಯವೂ ಕುಸಿತವಾಗಿದ್ದು 36 ಸಾವಿರ ಕೋಟಿ ರೂ. ಆಗಿತ್ತು. ಯಾಹೂ ನೌಕರರ ಕಡಿತಕ್ಕೆ ಮುಂದಾಗಿತ್ತು. 11 ಸಾವಿರಷ್ಟಿದ್ದ ನೌಕರರನ್ನು ಹಂತ ಹಂತವಾಗಿಅದು ಕಡಿ ತಗೊಳಿಸುತ್ತ ಬಂದಿತ್ತು.
YAHOO!ಟೈಂ ಲೈನ್
1994 ಯಾಹೂ ಸ್ಥಾಪನೆ
1996 ಅತಿ ದೊಡ್ಡ ಟೆಕ್ ಸ್ಟಾರ್ಟ್ ಅಪ್ ಎಂಬ ಪಟ್ಟ
1997 ಉಚಿತ ಇಮೇಲ್ ವ್ಯವಸ್ಥೆ ಪ್ರಾರಂಭ
2000 ಸರ್ಚ್ ಎಂಜಿನ್‌ಗೆ ಗೂಗಲ್ ಜೊತೆಗೆ ಒಪ್ಪಂದ
2002 ಗೂಗಲ್ ಖರೀದಿ ಯತ್ನಕ್ಕೆ ಹಿನ್ನೆಡೆ
2004 ಗೂಗಲ್ ಜೊತೆ ಒಪ್ಪಂದ ಕೈಬಿಟ್ಟ ಯಾಹೂ
2005 ಚೀನಾದ ಅಲಿಬಾಬಾದಲ್ಲಿ ಯಾಹೂ ಹೂಡಿಕೆ
2008 ಯಾಹೂ ಖರೀದಿಸಲು ಮುಂದಾಗಿದ್ದ ಮೈಕ್ರೋಸಾಫ್ಟ್
2013 ಟಂಬ್ಲಿರ್ ಬ್ಲಾಗಿಂಗ್ ಸೈಟ್ ಯಾಹೂವಿನಿಂದ ಖರೀದಿ
2015 ಯಾಹೂಗೆ ಅತಿ ದೊಡ್ಡ ನಷ್ಟ (29 ಸಾವಿರ ಕೋಟಿ ರೂ.)
2016 ವೆರಿಝೋನ್‌ನಿಂದ ಯಾಹೂ ಖರೀದಿಗೆ ಒಪ್ಪಂ¨
-ಉದಯವಾಣಿ
Comments are closed.