ಕರ್ನಾಟಕ

ಅಪಘಾತದ ಮೊದಲೇ ಎಚ್ಚೆತ್ತುಕೊಳ್ಳಲಿ: ವ್ಯವಸ್ಥೆಯ ಬೇಜವಾಬ್ದಾರಿ

Pinterest LinkedIn Tumblr

Bus-burn-28-7ಬೆಂಗಳೂರಿನಿಂದ ಧಾರವಾಡಕ್ಕೆ ಹೋಗುತ್ತಿದ್ದ ಖಾಸಗಿ ಬಸ್ಸಿಗೆ ಹುಬ್ಬಳ್ಳಿ ಸಮೀಪ ಬೆಂಕಿ ಹತ್ತಿಕೊಂಡ ಪರಿಣಾಮವಾಗಿ ಮೂವರು ಪ್ರಯಾಣಿಕರು ಸ್ಥಳದಲ್ಲೇ ಸುಟ್ಟು ಕರಕಲಾಗಿರುವ ದುರಂತ ಮತ್ತೂಮ್ಮೆ ವ್ಯವಸ್ಥೆ ಮೈಕೊಡವಿ ಎದ್ದೇಳುವಂತೆ ಮಾಡಿದೆ. ಮೂರು ವರ್ಷಗಳ ಹಿಂದೆ ಬೆಂಗಳೂರಿನಿಂದ ಹೈದರಾಬಾದ್‌ಗೆ ಹೋಗುತ್ತಿದ್ದ ಖಾಸಗಿ ವೊಲ್ವೊ ಬಸ್ಸಿಗೆ ಮೆಹಬೂಬನಗರ ಸಮೀಪ ಬೆಂಕಿಹತ್ತಿಕೊಂಡು 48 ಮಂದಿ ದಹಿಸಿ ಹೋದ ಭೀಕರ ಘಟನೆಯನ್ನು ಬುಧವಾರ ಹುಬ್ಬಳ್ಳಿಯಲ್ಲಿ ನಡೆದ ಘಟನೆ ನೆನಪಿಸಿದೆ. ಹುಬ್ಬಳ್ಳಿಯಲ್ಲಿ ಸಾವಿನ ಪ್ರಮಾಣ ಕಡಿಮೆಯಿತ್ತು ಎನ್ನುವುದು ಬಿಟ್ಟರೆ ಎರಡೂ ದುರಂತಗಳಲ್ಲಿ ಬಹಳಷ್ಟು ಸಾಮ್ಯತೆಗಳಿವೆ.

ಅಪಘಾತ ಸಂಭವಿಸಿದಾಗ ವ್ಯವಸ್ಥೆ ದಿಢೀರ್‌ ಚುರುಕಾಗುತ್ತದೆ. ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ. ವಾಹನಗಳ ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತದೆ. ನಿಯಮಗಳನ್ನು ಭಾರೀ ಬಿರುಸಿನಿಂದ ಜಾರಿಗೆ ತರುತ್ತಾರೆ. ಅಪಘಾತದ ನೆನಪು ಮಾಸುತ್ತಿದ್ದಂತೆ ನಿಯಮಗಳೆಲ್ಲ ಮರಳಿ ಕಡತ ಸೇರುತ್ತವೆ. ಸಿಬಂದಿ ಮಾಮೂಲು ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ಎಲ್ಲವೂ ಹಿಂದಿನಂತೆ ಯಥಾಸ್ಥಿತಿಗೆ ಬರುತ್ತದೆ. ಮತ್ತೂಮ್ಮೆ ಅವರು ಎಚ್ಚೆತ್ತುಕೊಳ್ಳಬೇಕಾದರೆ ಇನ್ನೊಂದು ದೊಡ್ಡ ಅಪಘಾತ ಆಗಬೇಕು. ಇದು ದೇಶದಲ್ಲಿ ಲಾಗಾಯ್ತಿನಿಂದ ನಡೆದುಕೊಂಡು ಬಂದಿರುವ ಪದ್ಧತಿ.

ನಮ್ಮ ದೇಶದಲ್ಲಿ ಅತಿ ಹೆಚ್ಚು ಜನರು ಸಾಯುವುದು ರೋಗಗಳಿಂದಲೂ ಅಲ್ಲ, ಭಯೋತ್ಪಾದನೆಯಿಂದಲೂ ಅಲ್ಲ; ಬದಲಾಗಿ ರಸ್ತೆ ಅವಘಡಗಳಲ್ಲಿ. ಪ್ರತಿ ವರ್ಷ ಲಕ್ಷಕ್ಕೂ ಅಧಿಕ ಮಂದಿ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಾರೆ. 2014ರಲ್ಲಿ 1.40 ಲಕ್ಷ ಮಂದಿ ರಸ್ತೆ ಅವಘಡಗಳಲ್ಲಿ ಸಾವನ್ನಪ್ಪಿದ್ದಾರೆ ಹಾಗೂ ಸುಮಾರು 4.5 ಲಕ್ಷ ಮಂದಿ ಗಾಯಗೊಂಡಿದ್ದಾರೆ. ಇದು ರಾಷ್ಟ್ರೀಯ ಅಪರಾಧ ವಿಭಾಗ ಒದಗಿಸಿರುವ ಅಂಕಿಅಂಶ. ಅಂದರೆ ಪ್ರತಿ ತಾಸಿಗೆ ಸರಾಸರಿ 16 ಮಂದಿಯಂತೆ, ದಿನಕ್ಕೆ 400 ಮಂದಿಯಂತೆ ರಸ್ತೆಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಾರೆ. ರಸ್ತೆ ಅಪಘಾತಗಳಲ್ಲಿ ಈ ಪರಿ ಪ್ರಾಣಹರಣವಾಗುತ್ತಿದ್ದರೂ ನಮ್ಮನ್ನಾಳುವವರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದು ಖೇದದ ವಿಷಯ.

ಒಂದು ಅಂದಾಜಿನ ಪ್ರಕಾರ ದೇಶದ ಆರ್ಥಿಕತೆಗೆ ಜಿಡಿಪಿಯ ಶೇ. 3ರಷ್ಟು ನಷ್ಟ ರಸ್ತೆ ಅವಘಡಗಳಿಂದ ಉಂಟಾಗುತ್ತಿದೆ. ಇದರಲ್ಲಿ ಹೆಚ್ಚಿನವರು 15ರಿಂದ 34 ವರ್ಷದ ನಡುವಿನವರು. ಅತಿ ಹೆಚ್ಚು ವಾಹನ ಅಪಘಾತಗಳು ಸಂಭವಿಸುವ ಟಾಪ್‌ ಟೆನ್‌ ದೇಶಗಳಲ್ಲಿ ಭಾರತವೂ ಒಂದು. ಅಮೆರಿಕ ಮತ್ತು ಚೀನದ ರಸ್ತೆಗಳಲ್ಲಿ ಭಾರತಕ್ಕಿಂತ ಹೆಚ್ಚು ವಾಹನಗಳಿದ್ದರೂ ಅಲ್ಲಿ ಅಪಘಾತಗಳ ಪ್ರಮಾಣ ಕಡಿಮೆ. ದೇಶದಲ್ಲಿ ಅತಿ ಹೆಚ್ಚು ಅಪಘಾತದ ರಾಜ್ಯಗಳ ಪೈಕಿ ಕರ್ನಾಟಕವೂ ಇದೆ.

ಚಾಲಕರ ನಿರ್ಲಕ್ಷ್ಯ, ಮಾಲಕರ ದುರಾಸೆ, ಅಧಿಕಾರಿಗಳ ಬೇಜವಾಬ್ದಾರಿ, ಕೆಟ್ಟ ರಸ್ತೆಗಳು, ಅವೈಜ್ಞಾನಿಕ ಕಾನೂನುಗಳು, ಜನರ ನಿರ್ಲಕ್ಷ್ಯ, ಹಳೆ ವಾಹನಗಳು ಹೀಗೆ ಅಪಘಾತಗಳಿಗೆ ಕಾರಣವಾಗುವ ನೂರಾರು ಅಂಶಗಳಿವೆ. ಎಲ್ಲಕ್ಕೂ ಮಿಗಿಲಾಗಿ ಕಾನೂನು ಇರುವುದೇ ಮುರಿಯಲು ಎಂಬ ಭಾವನೆ ಜನರಲ್ಲಿರುವುದು. ಈಗಲೂ ಮೋಟಾರು ವಾಹನಗಳನ್ನು ನಿಯಂತ್ರಿಸುವುದು ಪುರಾತನ ಮೋಟಾರು ವಾಹನ ಕಾಯಿದೆ. ಇದನ್ನು ಸಾಕಷ್ಟು ಸಲ ಪರಿಷ್ಕರಿಸಿದ್ದರೂ ಇನ್ನೂ ಅದು ಪರಿಪೂರ್ಣವಾಗಿಲ್ಲ. ರಸ್ತೆಗಳನ್ನು ಸುರಕ್ಷಿತ ಮಾಡಬೇಕೆಂಬ ಕಾಳಜಿಯಿಂದ ಕೇಂದ್ರ ಸಾರಿಗೆ ಸಚಿವಾಲಯ ಹೊಸ ಕಾನೂನನ್ನೇನೋ ರಚಿಸಿದೆ. ಅದಕ್ಕಿನ್ನೂ ಅಂಗೀಕಾರದ ಭಾಗ್ಯ ದೊರೆತಿಲ್ಲ. ಹೀಗೆ ಒಟ್ಟಾರೆ ವ್ಯವಸ್ಥೆಯೇ ಜಡವಾದ್ದರಿಂದ‌ ಅಪಘಾತಗಳು ಸಂಭವಿಸುತ್ತಿರುತ್ತವೆ. ಜನರನ್ನು ಸಾಗಿಸುವ ವಾಹನಗಳಲ್ಲಿ ಸರಕುಗಳನ್ನು, ಅಂತೆಯೇ ಸರಕುಗಳನ್ನು ಸಾಗಿಸುವ ವಾಹನಗಳಲ್ಲಿ ಜನರನ್ನು ಸಾಗಿಸುವುದು ಇಲ್ಲಿ ಸಾಮಾನ್ಯ ವಿಷಯ. ಯಾರಿಗೂ ಇದು ಅಪರಾಧ ಎಂದು ಅನ್ನಿಸುವುದಿಲ್ಲ.

ಹುಬ್ಬಳ್ಳಿಯಲ್ಲಿ ಅಪಘಾತಕ್ಕೀಡಾದ ಬಸ್ಸಿನಲ್ಲೂ ಸಿಗರೇಟ್‌, ರಾಸಾಯನಿಕದಂತಹ ದಹ್ಯ ವಸ್ತುಗಳಿದ್ದವು ಎನ್ನಲಾಗಿದೆ. ಅಂದರೆ ಒಂದು ಭೀಕರ ಅಪಘಾತ ಸಂಭವಿಸಿದ ಅನಂತರವೂ ನಮ್ಮ ಬೇಜವಾಬ್ದಾರಿ ಮುಂದುವರಿದಿದೆ ಅಂತಾಯಿತು. ಸಾರಿಗೆ ಇಲಾಖೆಯಲ್ಲಿರುವ ಭ್ರಷ್ಟಾಚಾರ ಮತ್ತು ಕಾನೂನು ಅನುಷ್ಠಾನಿಸುವವರ ಬೇಜವಾಬ್ದಾರಿ ಕೊನೆಯಾಗುವ ತನಕ ಅಪಘಾತಗಳಿಂದ ಮುಕ್ತಿ ಸಾಧ್ಯವಿಲ್ಲ. ಅಪಘಾತ ಸಂಭವಿಸಿದಾಗೊಮ್ಮೆ ಕಾನೂನು ಎಂಬ ಧೋರಣೆ ಬಿಟ್ಟು ಕಡ್ಡಾಯವಾಗಿ ಕಾನೂನು ಪಾಲನೆಗೆ ಮುಂದಾದರೆ ಮಾತ್ರ ಪರಿಸ್ಥಿತಿಯಲ್ಲಿ ಸುಧಾರಣೆಯನ್ನು ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಸರಕಾರ, ಸಾರಿಗೆ ಇಲಾಖೆ, ವಾಹನ ಮಾಲಕರು ಮತ್ತು ಚಾಲಕರು ಜತೆಯಾಗಿ ಚಿಂತಿಸಬೇಕು.
-ಉದಯವಾಣಿ

Comments are closed.