ವಾಷಿಂಗ್ಟನ್: ಅಮೆರಿಕದಲ್ಲಿರುವ ಅನಧಿಕೃತ ವಲಸೆಗಾರರನ್ನು ವಾಪಸ್ಸು ಕರೆಸಿಕೊಳ್ಳುವಲ್ಲಿ ಅಸಹಕಾರ ತೋರುತ್ತಿರುವ ಭಾರತ ಮತ್ತು ಚೀನಾ ಸೇರಿದಂತೆ 22 ದೇಶದ ನಾಗರಿಕರಿಗೆ ವಲಸೆ ಮತ್ತು ವಲಸೆಯೇತರ ವೀಸಾ ವಿತರಿಸದಂತೆ ಅಮೆರಿಕದ ಹಿರಿಯ ಸಂಸದ ಚಕ್ ಗ್ರೇಸ್ಲಿ ಒಬಾಮ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕೊಲೆಗಾರರು ಸೇರಿದಂತೆ ಹಲವು ಅಪರಾಧಿಗಳು ದಿನವೂ ಅಮೆರಿಕದ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ. ಇವರಲ್ಲಿ ಹಲವು ವಿದೇಶಿ ಪ್ರಜೆಗಳಿದ್ದು, ಅವರನ್ನು ವಾಪಸ್ಸು ಕರೆಸಿಕೊಳ್ಳಲು ಅವರ ಮಾತೃ ದೇಶಗಳು ವಿನಾಕಾರಣ ವಿಳಂಬ ತೋರುತ್ತಿವೆ. ಅಮೆರಿಕದೊಂದಿಗೆ ಸಹಕರಿಸುತ್ತಿಲ್ಲ, 2015ರಲ್ಲಿ 2166 ಜನರು ಬಿಡುಗಡೆ ಹೊಂದಿದ್ದಾರೆ. ಇವರನ್ನು ಅವರ ಮಾತೃ ದೇಶಗಳು ಹಿಂದಕ್ಕೆ ಕರೆಸಿಕೊಂಡಿಲ್ಲ. ಮುಂದಿನ 2 ವರ್ಷಗಳಲ್ಲಿ 6,100 ಜನರು ಜೈಲುಗಳಿಂದ ಬಿಡುಗಡೆ ಹೊಂದಲಿದ್ದಾರೆ. ಹಾಗಾಗಿ ಭವಿಷ್ಯದಲ್ಲಿ 22 ದೇಶಗಳ ನಾಗರಿಕರಿಗೆ ವೀಸಾ ವಿತರಿಸಬಾರದು ಎಂದು ರಿಪಬ್ಲಿಕನ್ ಸಂಸದ ಚಕ್ ಗ್ರೇಸ್ಲಿ ಮಾತೃಭೂಮಿ ಭದ್ರತಾ ಕಾರ್ಯದರ್ಶಿ ಜೇ ಜಾನ್ಸನ್ಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಪ್ರಸ್ತುತ ಅಮೆರಿಕ ಸರ್ಕಾರ ಅಕ್ರಮ ವಲಸಿಗರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಅಸಹಕಾರ ತೋರುತ್ತಿರುವ 23 ರಾಷ್ಟ್ರಗಳ ಪಟ್ಟಿ ಸಿದ್ಧಪಡಿಸಿದೆ. ಈ ಪಟ್ಟಿಯಲ್ಲಿ ಕ್ಯೂಬಾ, ಚೀನಾ, ಸೊಮಾಲಿಯಾ, ಭಾರತ ಮತ್ತು ಘಾನಾ ಅಗ್ರ 5 ಸ್ಥಾನ ಪಡೆದಿವೆ ಎಂದು ಗ್ರೇಸ್ಲಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
Comments are closed.