ಅಂತರಾಷ್ಟ್ರೀಯ

ಪುಂಡ ಮಗನನ್ನು ಕರಡಿಗಳ ಕಾಡಲ್ಲಿ ಬಿಟ್ಟ ಹೆತ್ತವರು; ಬದುಕುಳಿದ ಬಾಲಕ !

Pinterest LinkedIn Tumblr

Japan Boy-700ಟೋಕಿಯೋ : ಆತ ಏಳು ವರ್ಷದ ಬಾಲಕ. ಆದರೆ ತುಂಬಾ ಪುಂಡಾಟಿಕೆಯವ. ಕಳೆದ ಶನಿವಾರ ತಮ್ಮ ಈ ತುಂಟ ಮಗನನ್ನು ಕರೆದುಕೊಂಡು ಆತನ ಹೆತ್ತವರು ಉತ್ತರ ಜಪಾನಿನ ಪರ್ವತ ಪ್ರದೇಶಕ್ಕೆ ಚಾರಣಕ್ಕೆಂದು ಹೋಗಿದ್ದರು.

ಅಲ್ಲಿ ಈ ಬಾಲಕ ತನ್ನ ಪಂಡಾಟಿಕೆಯ ಪರಮಾವಧಿ ಎಂಬಂತೆ ದಾರಿ ಹೋಕರ ಮೇಲೆ ಕಲ್ಲೆಸೆದು ಅವರನ್ನು ಗಾಯಗೊಳಿಸಿದ; ತನ್ನ ಹೆತ್ತವರ ಕಾರಿನ ಮೇಲೂ ಕಲ್ಲೆಸೆದು ಅದನ್ನೂ ತೀವ್ರವಾಗಿ ಹಾನಿಗೊಳಿಸಿದ !

ಸಿಟ್ಟಿಗೆದ್ದ ಹೆತ್ತವರು ಶಿಕ್ಷೆಯ ರೂಪದಲ್ಲಿ ಬಾಲಕನನ್ನು ಕರಡಿಗಳಿಂದ ತುಂಬಿದ ಆ ಪರ್ವತಾರಣ್ಯದ ಆ ಪ್ರದೇಶದಲ್ಲಿ ಕಾರಿನಿಂದ ಕೆಳಗಿಳಿಸಿ “ಎಲ್ಲಿ ಬೇಕಾದರೂ ಹೋಗಿ ಸಾಯು’ ಎಂದು ಶಪಿಸಿ ಅವನನ್ನು ಅವನ ಪಾಡಿಗೆ ಬಿಟ್ಟು ನಿರ್ದಯತೆಯಿಂದ ಮರಳಿ ಬಂದರು. ಮನೆಗೆ ಮರಳಿದ ಬಳಿಕ ತಮ್ಮ ಮಗ ಕಾಣೆಯಾಗಿದ್ದಾನೆ ಎಂದವರು ಪೊಲೀಸರಿಗೆ ದೂರು ನೀಡಿದರು. ಆ ಪ್ರಕಾರ ಪೊಲೀಸರು ಬಾಲಕನನ್ನು ಎಲ್ಲೆಡೆ ಹುಡುಕಾಡಲು ತೊಡಗಿ ವಿಫ‌ಲರಾಗಿ ಬಳಿಕ ಸೇನೆಯ ನೆರವನ್ನು ಕೋರಿದರು !

ಅತ್ತ ಪರ್ವತಾರಣ್ಯದಲ್ಲಿ ಕಳೆದ ಶನಿವಾರ ಹೆತ್ತವರಿಂದ ಕಾರಿನಿಂದ ಇಳಿಸಲ್ಪಟ್ಟಿದ್ದ ಪುಂಡ ಬಾಲಕ, ದಿಕ್ಕು ದಿಸೆಯಿಲ್ಲದೆ, ಹೊಟ್ಟೆಗೆ ಆಹಾರವಿಲ್ಲದೆ, ಐದಾರು ಕಿ.ಮೀ. ದೂರ ನಡೆದ. ಕರಡಿಗಳಿಂದ ತುಂಬಿದ್ದ ಆ ಪರ್ವತಾರಣ್ಯದಲ್ಲಿ ಕಾಡಿನ ಯಾವುದೇ ಮೃಗಗಳಿಗೆ ಆಹಾರವಾಗದೇ ಆತ ಬದುಕಿಕೊಂಡದ್ದೇ ಒಂದು ಪವಾಡವೆನಿಸಿತು. ಗೊತ್ತು ಗುರಿಯಿಲ್ಲದೆ ನಡೆಯುತ್ತಾ ಬಂದ ಬಾಲಕನಿಗೆ ಒಂದೆಡೆ ಸಣ್ಣದೊಂದು ಗುಡಿಸಲು ಕಂಡು ಬಂತು. ಆ ಗುಡಿಸಲಿನ ಹೊರಗೆ ಇದ್ದ ನಳ್ಳಿಯನ್ನು ತಿರುಗಿಸಿ ಆತ ನೀರು ಕುಡಿದ.

ಇಷ್ಟಾಗುವಾಗ ಅಲ್ಲೇ ಸಮಿಪವಿದ್ದ ಸೇನಾ ನೆಲೆಯ ಸ್ವರಕ್ಷಣೆ ಪಡೆಯ ಅಧಿಕಾರಿಯೊಬ್ಬರು ಈ ಅನಾಥ ಬಾಲಕನನ್ನು ಗುರುತಿಸಿದರು. ಬಹುತೇಕ ದಯನೀಯ ಸ್ಥಿತಿಯಲ್ಲಿದ್ದ ಬಾಲಕನನ್ನು ಅವರು ತಮ್ಮೊಂದಿಗೆ ಸೇನಾ ನೆಲೆಯ ಶೆಡ್‌ಗೆ ಕರೆದೊಯ್ದರು. ಬಾಲಕ ತನಗೆ ತೀವ್ರವಾಗಿ ಹಸಿವಾಗುತ್ತಿದೆ ಎಂದು ಹೇಳಿದಾಗ ಆತನಿಗೆ ತಿನ್ನಲು ಕೊಟ್ಟು ಉಪಚರಿಸಿದರು.

ಒಂದು ವಾರದಿಂದ ಪರ್ವಾತರಣ್ಯ ಪ್ರದೇಶದಲ್ಲಿ ಅನ್ನ – ನೀರು ಇಲ್ಲದೆ ಅಂಡಲೆಯುತ್ತಿದ್ದ ಬಾಲಕನ ದೇಹಾರೋಗ್ಯವನ್ನು ಪರೀಕ್ಷಿಸಿ ಸೂಕ್ತ ಚಿಕಿತ್ಸೆ ದೊರಕಿಸಲು ಆತನನ್ನು ಆ ಅಧಿಕಾರಿ ಹೆಲಿಕಾಪ್ಟರ್‌ನಲ್ಲಿ ಸೇನಾ ಆಸ್ಪತ್ರೆಗೆ ಒಯ್ದರು. ಅಲ್ಲಿ ಚೇತರಿಸಿಕೊಂಡ ಬಾಲಕ ತನ್ನ ಹೆಸರು ಯಮಾತೋ ತನೂಕಾ ಎಂದು ಹೇಳಿಕೊಂಡ. ಬಳಿಕ ಆತನಿಂದ ಹೆತ್ತವರ ಬಗ್ಗೆ ಮಾಹಿತಿ ಪಡೆದ ಆ ಅಧಿಕಾರಿ ಆತನನ್ನು ಹೆತ್ತವರೊಂದಿಗೆ ಸೇರಿಸುವಲ್ಲಿ ಸಫ‌ಲರಾದರು !

ತಮ್ಮ ಏಳು ವರ್ಷದ ಪುತ್ರನನ್ನು ತಾವು ಆತ ತೋರಿದ ಪುಂಡಾಟಕ್ಕಾಗಿ ಪರ್ವತಾರಣ್ಯ ಪ್ರದೇಶದಲ್ಲಿ ಬಿಟ್ಟು ಬಂದುದನ್ನು ಒಪ್ಪಿಕೊಂಡ ಬಾಲಕನ ಹೆತ್ತವರು ತಮ್ಮ ಕೃತ್ಯಕ್ಕಾಗಿ ಮರುಗಿದರು. ಹುಡುಗನ ತಂದೆ ತಮ್ಮ ಮಗನನ್ನು ತಬ್ಬಿಕೊಂಡು “ಸಾರಿ’ ಎಂದು ಹೇಳಿದರು. ಬಾಲಕ ಅದಕ್ಕೆ ಮೆಲ್ಲಗೆ ತಲೆಯಾಡಿಸಿದ ! ಪೊಲೀಸರು ಬಾಲಕನ ಹೆತ್ತವರ ಗುರುತು, ಹೆಸರು ಇತ್ಯಾದಿಗಳನ್ನು ಬಹಿರಂಗಪಡಿಸಿಲ್ಲ !

ಕೇಳಲು ಒಳ್ಳೆಯ ಸಿನಿಮೀಯ ಕಥೆಯಂತಿರುವ ಈ ಘಟನೆ ಉತ್ತರ ಜಪಾನಿನ ಹೊಕಾಯ್‌ಡೋ ದ್ವೀಪದಲ್ಲಿ ನಡೆದಿದ್ದು ಜಪಾನಿನ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ. ಬಾಲಕನನ್ನು ರಕ್ಷಿಸಿರುವ ಉತ್ತರ ಜಪಾನಿನ ಪೊಲೀಸ್‌ ವಕ್ತಾರ ತಮೋಹಿತೋ ತಮೂರಾ ಅವರು “ಮಕ್ಕಳು ಪುಂಡಾಟ ತೋರುತ್ತಾರೆಂಬ ಕಾರಣಕ್ಕೆ ಹೆತ್ತವರು ತಮ್ಮ ಮಕ್ಕಳಿಗೆ ಈ ರೀತಿಯ ಅಮಾನುಷ ಶಿಕ್ಷೆ ನೀಡಬಾರದು’ ಎಂದು ಹೇಳಿದರು.

ಜಪಾನ್‌ ಆದ್ಯಂತ ಟ್ವಿಟರ್‌ನಲ್ಲಿ ಚರ್ಚೆಗೆ ಕಾರಣವಾಗಿರುವ ಈ ಘಟನೆಯು ಅಲ್ಲಿನ ಜನರಲ್ಲಿ ಬಾಲಕನ ಹೆತ್ತವರ ಬಗ್ಗೆ ಸಿಟ್ಟು, ಆಕ್ರೋಶ, ಜುಗುಪ್ಸೆ ಹುಟ್ಟಿಸಿದೆ. ಇದೊಂದು ಅಮಾನುಷಕರ ಘಟನೆ ಎಂದವರು ವ್ಯಾಪಕವಾಗಿ ಇದನ್ನು ಖಂಡಿಸಿದ್ದಾರೆ.

ಅಂದಹಾಗೆ ಪೊಲೀಸರೀಗ ಬಾಲಕನ ಹೆತ್ತವರ ಮೇಲೆ ಮಗುವಿನ ಮೇಲೆ ನಿರ್ಲಕ್ಷ್ಯ ತೋರಿದ ಆರೋಪವನ್ನು ಹೊರಿಸಿ ಕೇಸು ದಾಖಲಿಸಿಕೊಂಡಿದ್ದಾರೆ.
-ಉದಯವಾಣಿ

Comments are closed.