Karavali

ಹಿರಿಯ ಹಿಮ್ಮೇಳ ವಾದಕ ವೆಂಕಟೇಶ ಶಾಸ್ತ್ರಿಯವರಿಗೆ ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ. ಪ್ರಾಯೋಜಿತ ಯಕ್ಷ ಶ್ರೀ ರಕ್ಷಾ ಗೌರವ- ವಾರ್ಷಿಕ ವಿಶೇ‍ಷ ಪ್ರಶಸ್ತಿ ಘೋಷಣೆ

Pinterest LinkedIn Tumblr

ದುಬೈ: ದುಬಾಯಿ ಯಕ್ಷಗಾನ ಅಭ್ಯಾಸ ತರಗತಿ (YAKU) ಪ್ರಾಯೋಜಕತ್ವದಲ್ಲಿ ದುಬಾಯಿ ಅಥವಾ ತಾಯಿನಾಡಿನ ಯಕ್ಷಗಾನ ರಂಗದ ಸಾಧಕರೊಬ್ಬರನ್ನು ಗುರುತಿಸಿ, ವಿಶೇಷವಾಗಿ ವಾರ್ಷಿಕ ಯಕ್ಷಶ್ರೀ ರಕ್ಷಾ ಗೌರವ ಪ್ರಶಸ್ತಿ ನೀಡಲು ಉದ್ದೇಶಿಸಿದಂತೆ, 2023-2024 ನೇ ಸಾಲಿನ ಪ್ರಶಸ್ತಿಗೆ, ಸ್ಥಳೀಯ ಯಕ್ಷಗಾನ ಹಿಮ್ಮೇಳ ಕಲಾವಿದರೂ, ನಮ್ಮ ಯಕ್ಷಗಾನ ಅಭ್ಯಾಸ ಕೇಂದ್ರದ ಹಿರಿಯ ಸದಸ್ಯರೂ ಆದ ಶ್ರೀಯುತ ವೆಂಕಟೇಶ ಶಾಸ್ತ್ರಿ ಪುತ್ತಿಗೆಯವರನ್ನು ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ.

ವೆಂಕಟೇಶ ಶಾಸ್ತ್ರಿಯವರು, ಪುತ್ತಿಗೆ ರಾಮಚಂದ್ರ ಶಾಸ್ತ್ರಿ – ಜಾನಕಿ ಆರ್ ಶಾಸ್ತ್ರಿ ದಂಪತಿಯವರ ಪುತ್ರನಾಗಿರುವ ವೆಂಕಟೇಶ ಶಾಸ್ತ್ರಿಯವರು 1966 ಅಕ್ಟೋಬರ್ 12ರಂದು ಜನಿಸಿದರು. ಇಲೆಕ್ಟ್ರಿಕಲ್ ಹಾಗೂ ಇಲೆಕ್ಟ್ರಾನಿಕ್ಸ್ ನಲ್ಲಿ ಬಿ.ಇ. ಪದವೀಧರರಾದ ಇವರು ಗುರುಗಳಾದ ಗುರುಪುರ ಅಣ್ಣಿ ಭಟ್, ಮಧೂರು ಲಕ್ಷ್ಮೀನಾರಾಯಣ ಶರ್ಮ ಅವರಿಂದ ಚೆಂಡೆ-ಮದ್ದಳೆ ಕಲಿತು ಓರ್ವ ಸಮರ್ಥ ಹವ್ಯಾಸೀ ಚೆಂಡೆ – ಮದ್ದಳೆ ವಾದಕರಾಗಿ ಪ್ರಸಿದ್ಧರಾಗಿದ್ದಾರೆ. ದುಬಾಯಿಯಲ್ಲಿ ನಡೆಯುತ್ತಿರುವ ಪ್ರತಿ ಯಕ್ಷಗಾನ ಪ್ರದರ್ಶನದಲ್ಲಿ ಹಿಮ್ಮೇಳದಲ್ಲಿ ಸಹಕರಿಸುತ್ತಿರುವ ಇಬರು ಹಿರಿಯ ಬಲಿಪ ನಾರಾಯಣ ಭಾಗವತರು, ಪುರುಷೋತ್ತಮ ಪೂಂಜ, ದಿನೇಶ್ ಅಮ್ಮಣ್ಣಾಯ, ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ, ಪಟ್ಲ ಸತೀಶ್ ಶೆಟ್ಟಿ, ಪ್ರಸಾದ್ ಬಲಿಪ, ರವಿಚಂದ್ರ ಕನ್ನಡಿಕಟ್ಟೆ, ಗಿರೀಶ್ ರೈ, ಅಮೃತ ಅಡಿಗ, ಪದ್ಮನಾಭ ಉಪಾಧ್ಯಾಯರು, ಮೋಹನ್ ಶೆಟ್ಟಿಗಾರ್ ಮಿಜಾರು, ದಯಾನಂದ ಶೆಟ್ಟಿಗಾರ್ ಮಿಜಾರು, ಚೈತನ್ಯ ಪದ್ಯಾಣ, ಸವಿನಯ ನೆಲ್ಲಿತೀರ್ಥ, ಮೊದಲಾದ ಹಿರಿಯ – ಕಿರಿಯ ಹಿಮ್ಮೇಳದ ಕಲಾವಿದರ ಜೊತೆ ಸಾಥ್ ನೀಡಿದ್ದಾರೆ. ಯಕ್ಷಗಾನ ಅಭ್ಯಾಸ ತರಗತಿ ದುಬಾಯಿ ಸಂಸ್ಥೆಯಲ್ಲಿ ಸಕ್ರಿಯ ಸದಸ್ಯರಾದ ಶ್ರೀಯುತರು ಯಕ್ಷಗಾನದ ಸಂಪೂರ್ಣ ಪರಿಜ್ಞಾನ ಹೊಂದಿದ ಓರ್ವ ಹವ್ಯಾಸಿ ಕಲಾವಿದರಾಗಿದ್ದಾರೆ. ಮುಚ್ಚೂರು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರ ಕುಟುಂಬದ ಅಂಬಾ ವೆಂಕಟೇಶ ಶಾಸ್ತ್ರಿ ಇವರ ಧರ್ಮಪತ್ನಿ, ಇಬ್ಬರು ಮಕ್ಕಳು ಚರಣ ಶಾಸ್ತ್ರಿ ಮತ್ತು ಶರಣ್ಯ ಶಾಸ್ತ್ರಿ ಉನ್ನತ ಉದ್ಯೋಗದಲ್ಲಿದ್ದಾರೆ. ಇವರಲ್ಲಿ ಶರಣ್ಯ ಶಾಸ್ತ್ರಿ ಯಕ್ಷಗಾನ ಕಲಾವಿದೆಯಾಗಿ ದುಬಾಯಿಯಲ್ಲಿ ಮನೆಮಾತಾದವರು.

ಪ್ರಶಸ್ತಿ ಪುರಸ್ಕ್ರತ ವೆಂಕಟೇಶ ಶಾಸ್ತ್ರಿಯವರಿಗೆ ಅಭಿನಂದನೆಗಳನ್ನು ಸಲ್ಲಿಸುವ ಜೊತೆಗೆ, ಅವರ ಶೇಷ ಜೀವನ ಸುಖ, ಸಂತೋಷ, ಸಮೃದ್ಧಿಗಳಿಂದ ನಡೆವಂತೆ, ಅವರ ಕೈಯಿಂದ ಇನ್ನಷ್ಟು ಕಲಾ -ಸಾಮಾಜಿಕ-ಧಾರ್ಮಿಕ ಸೇವೆ ನಡೆವಂತೆ ನಾವು ಪೂಜಿಸುವ ಕಲಾಮಾತೆ ಕಟೀಲು ದುರ್ಗಾಪರಮೇಶ್ವರಿ, ಮಹಾಗಣಪತಿ ಮತ್ತು ಈ ವರ್ಷ ಯಕ್ಷರಾಧನೆಯಿಂದ ಕೊಂಡಾಡಲ್ಪಡುವ ಶ್ರೀರಾಮ ಸದಾ ಅನುಗ್ರಹಪೂರ್ವಕ ಹರಸಲೆಂದು ಸಮಸ್ತ ದುಬಾಯಿಯ ಯಕ್ಷಕಲಾರಾಧಕರ ಪರವಾಗಿ ಹಾರೈಕೆ.

ಜೂ.9 2024ರ ರವಿವಾರ ದುಬಾಯಿಯ ಶೇಖ್ ರಶೀದ್ ಅಡಿಟೋರಿಯಂನಲ್ಲಿ ದುಬಾಯಿ ಯಕ್ಷೋತ್ಸವ 2024 ಇದರ ಅಂಗವಾಗಿ ನಡೆಯಲಿರುವ ‘ದಾಶರಥಿ ದರ್ಶನ’ ಯಕ್ಷಗಾನ ಪ್ರದರ್ಶನದ ವೇದಿಕೆಯಲ್ಲಿ, ಗಣ್ಯರ ಉಪಸ್ಥಿತಿಯಲ್ಲಿ, ಈ ವಿಶೇಷ ಪ್ರಶಸ್ತಿಯನ್ನು ನೀಡಿ ಪುತ್ತಿಗೆ ಶ್ರೀ ವೆಂಕಟೇಶ ಶಾಸ್ತ್ರಿಯವರನ್ನು ಗೌರವಿಸಲಾಗುವುದೆಂದು ದುಬಾಯಿ ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕರಾದ ಶ್ರೀಯುತ ಕೊಟ್ಟಿಂಜ ದಿನೇಶ ಶೆಟ್ಟಿಯವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಕ್ಷಗಾನ ಅಭ್ಯಾಸ ಕೇಂದ್ರದ ಹಿರಿಯ ಕಲಾವಿದರೂ ಕಾರ್ಯಕರ್ತರಾದ ಭವಾನಿಶಂಕರ ಶರ್ಮ, ಗಿರೀಶ್ ನಾರಾಯಣ್ ಕಾಟಿಪಳ್ಳ, ಜಯಾನಂದ ಪಕ್ಕಳ, ವಸಂತ ಶೆಟ್ಟಿ ಬಾಳೆಪುಣಿಗುತ್ತು, ಪ್ರಕಾಶ್ ಪಕ್ಕಳ, ರಾಜೇಶ್ ಕುತ್ತಾರು, ಬಾಲಕೃಷ್ಣ ಶೆಟ್ಟಿ ಮಾಡೂರು, ಬಾಲಕೃಷ್ಣ ಶೆಟ್ಟಿಗಾರ್ ಕಿನ್ನಿಗೋಳಿ, ವಿಜಯ ಶೆಟ್ಟಿ, ಅಲ್ಲದೆ ಕೇಂದ್ರದ ಗುರುಗಳಾದ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿ‌ ಮತ್ತು ಶರತ್ ಕುಡ್ಲ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.