ಅಂತರಾಷ್ಟ್ರೀಯ

ಬಲ್ಲಿರಾ ? 1,200 ಜ್ಯೋತಿರ್ವರ್ಷ ದೂರದಲ್ಲಿದೆ ಭೂಮಿಯಂತಹ ಭೂಮಿ !

Pinterest LinkedIn Tumblr

Earth-like-Earth-600ವಾಷಿಂಗ್ಟನ್‌ : ಸಮಸ್ತ ಜೀವ ಸಂಕುಲಕ್ಕೆ ನೆಲೆಯಾಗಿರುವ ನಾವಿರುವ ಭೂಮಿಯನ್ನೇ ಹೋಲುವ ಇನ್ನೊಂದು ಭೂಮಿ ಈ ಬ್ರಹ್ಮಾಂಡದಲ್ಲಿ ಇದ್ದೀತೇ ಎಂಬ ಕುತೂಹಲ ವಿಜ್ಞಾನಿಗಳನ್ನು ಕಾಡುತ್ತಲೇ ಬಂದಿದೆ. ಅಂತೆಯೇ ಇದೀಗ ಸುಮಾರು 1,200 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ನಮ್ಮ ಭೂಮಿಯನ್ನೇ ಹೋಲುವ ಇನ್ನೊಂದು ಭೂಮಿ ಇರುವುದನ್ನು ಕ್ಯಾಲಿಫೋರ್ನಿಯಾ – ಲಾಸ್‌ ಏಂಜಲ್ಸ್‌ ವಿಶ್ವವಿದ್ಯಾಲಯದ ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಸಂಶೋಧಕರು ಹೇಳುವಂತೆ ತಾವು ಪತ್ತೆ ಹಚ್ಚಿರುವ ನಮ್ಮ ಭೂಮಿಯಂತಹ ಈ ಗ್ರಹದಲ್ಲಿ ಮೇಲ್ಪದರಲ್ಲೇ ನೀರಿದೆ; ಗುಡ್ಡ ಬೆಟ್ಟ ಪರ್ವತಗಳು ಇವೆ, ಸಾಗರಗಳೂ ಇವೆ. ಆದುದರಿಂದ ಈ ಗ್ರಹದಲ್ಲಿ ನಿಶ್ಚಿತವಾಗಿಯೂ ಜೀವ ಸಂಕುಲವಿದೆ ಮತ್ತು ಅಲ್ಲಿ ಜೀವ ಚಟುವಟಿಕೆಗಳು ಬಹುಕಾಲದಿಂದಲೂ ನಡೆಯುತ್ತಿರಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ಹೊಸದಾಗಿ ಪತ್ತೆ ಹಚ್ಚಲಾಗಿರುವ ಈ ಭೂಮಿಯಂತಹ ಭೂಗ್ರಹಕ್ಕೆ ವಿಜ್ಞಾನಿಗಳು ಕೆಪ್ಲರ್‌ 62ಎಫ್ ಎಂದು ವೈಜ್ಞಾನಿಕವಾಗಿ ನಾಮಕರಣ ಮಾಡಿದ್ದಾರೆ. ಈ ಗ್ರಹವು ಭೂಮಿಗಿಂತ ಗಾತ್ರದಲ್ಲಿ ಶೇ.40ರಷ್ಟು ದೊಡ್ಡದಿದೆ ಮತ್ತು ಇದು ಲಿರಾ ತಾರಾ ಖಚಿತ ಸಮೂಹಗಳ ದಿಕ್ಕಿನಲ್ಲಿದೆ.

ಭೂಮಿಯನ್ನೇ ಹೋಲುವ ಈ ನವಶೋಧಿತ ಗ್ರಹದ ಗಾತ್ರವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಸಹಜವಾಗಿಯೇ ಅದರಲ್ಲಿ ಪರ್ವತಗಳು, ಸಾಗರಗಳು ಇರುವ ಸಾಧ್ಯತೆ ಹೆಚ್ಚಿದೆ ಮತ್ತು ಇದರ ಮೇಲ್ಪದರಲ್ಲೇ ನೀರು ದ್ರವ ರೂಪದಲ್ಲಿ ಇರುವ ಸಾಧ್ಯತೆಯೂ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ನಾಸಾದ ಕೆಪ್ಲರ್‌ ಅನ್ವೇಷಣ ಅಭಿಯಾನವು ಭೂಮಿಯಂತಹ ಈ ಗ್ರಹವನ್ನು 2013ರಲ್ಲೇ ಪತ್ತೆ ಹಚ್ಚಿತ್ತಾದರೂ ಅದರ ರೂಪ, ಗುಣ ಲಕ್ಷಣ ಇತ್ಯಾದಿಗಳ ಬಗ್ಗೆ ಸತತ ಅಧ್ಯಯನ ನಡೆಸುತ್ತಲೇ ಬಂದಿತ್ತು.

ಕೆಪ್ಲರ್‌ 62 ಎಫ್ ಎಂದು ನಾಮಕರಣ ಮಾಡಲಾಗಿರುವ ಈ ಗ್ರಹವು ಸೂರ್ಯನಿಗಿಂತ ಕಡಿಮೆ ತಣ್ಣಗಿರುವ ನಕ್ಷತ್ರವೊಂದನ್ನು ಹೊರವಲಯದ ಕಕ್ಷೆಯಲ್ಲಿ ಪರಿಭ್ರಮಿಸುತ್ತಿರುವ ಐದು ಗ್ರಹಗಳ ಪೈಕಿ ಒಂದೆಂಬುದನ್ನು ಸಂಶೋಧಕರು ಗುರುತಿಸಿದ್ದಾರೆ.

ಆದರೆ ಸಂಶೋಧಕರು ಈ ಭೂಮಿಯಂತಹ ಭೂಗ್ರಹದ ವಾತಾವಾರಣದ ಬಗೆಗಾಗಲೀ, ಅದರ ಪರಿಭ್ರಮಣ ಕಕ್ಷೆಯನ್ನಾಗಲೀ ಅಥವಾ ಅದರ ಗಾತ್ರವನ್ನಾಗಲೀ ಬಹಿರಂಗಪಡಿಸಿಲ್ಲ. ಆದರೆ ಈ ಗ್ರಹದಲ್ಲಿ ಜೀವ ಸಂಕುಲ ಮತ್ತು ಜೀವ ಚಟುವಟಿಕೆ ಇರುವ ಸಾಧ್ಯತೆಗಳನ್ನು ಅನ್ವೇಷಿಸಲು ವಿಜ್ಞಾನಿಗಳು ಈ ಗ್ರಹದ ಪರ್ಯಾವರಣ ಮಾಹಿತಿಗಳು, ಗುರುತ್ವ ಮತ್ತು ಅದರ ಪರಿಭ್ರಮಣ ಕಕ್ಷೆಯ ವಿವರಗಳನ್ನು ಶೋಧಿಸುತ್ತಿದ್ದಾರೆ.

ಈ ನವಶೋಧಿಕ ಭೂರೂಪೀ ಗ್ರಹವು ತನ್ನ ಸೂರ್ಯನಿಗಿಂತ (ನಮ್ಮ ಭೂಮಿ ಮತ್ತು ಸೂರ್ಯನ ನಡುವಿನ ದೂರಕ್ಕಿಂತಲೂ ಅಧಿಕ) ದೂರದಲ್ಲಿರುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಭೂಮಿಯಂತೆ ಈ ನೂತನ ಗ್ರಹದ ಪರ್ಯಾವರಣ ಕೂಡ ಶಾಖಯುಕ್ತವಾಗಿರುವುದರಿಂದ ಇದರ ನೆಲದ ಮೇಲ್ಪದರದಲ್ಲೇ ನೀರು ದ್ರವರೂಪದಲ್ಲಿರುವ ಸಾಧ್ಯತೆ ಇದೆ. ಆದುದರಿಂದ ಇದು ಜೀವಸಂಕುಲಕ್ಕೆ ಅನುಕೂಲಕರವಾಗಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೋಬಯಾಲಜಿ ನಿಯತಕಾಲಿಕದ ಆನ್‌ಲೈನ್‌ನಲ್ಲಿ ಈ ನೂತನ ಸಂಶೋಧನ ವಿವರಗಳನ್ನು ಪ್ರಕಟಿಸಲಾಗಿದೆ.
-ಉದಯವಾಣಿ

Comments are closed.