ಅಂತರಾಷ್ಟ್ರೀಯ

71 ಯೋಧರ ಶವವಿದ್ದ World War II ಸಬ್ ಮರೈನ್ ಪತ್ತೆ! ಅಚ್ಚರಿಯೇ

Pinterest LinkedIn Tumblr

British Submarineಲಂಡನ್‌ : ಈಗ ಸರಿ ಸುಮಾರು 73 ವರ್ಷಗಳ ಹಿಂದೆ, ಎರಡನೇ ಮಹಾಯುದ್ಧದ ವೇಳೆ ನಾಪತ್ತೆಯಾಗಿದ್ದ ಬ್ರಿಟನ್‌ನ ರಾಯಲ್‌ ನೇವಿಯ ಜಲಾಂತರ್ಗಾಮಿಯೊಂದು ಇದೀಗ ಇಟಲಿ ಕರಾವಳಿಯ ದೂರ ಸಮುದ್ರದಾಳದಲ್ಲಿ ಪತ್ತೆಯಾಗಿದೆ.

ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಶತ್ರು ದೇಶಗಳಿಂದ ಸಮುದ್ರದಾಳದಲ್ಲಿ ಹುಗಿಯಲ್ಪಟ್ಟಿದ್ದ ನೆಲ ಬಾಂಬ್‌ ಸ್ಫೋಟಗೊಂಡು ನಾಶವಾಯಿತೆಂದು ಭಾವಿಸಲಾಗಿದ್ದ ಈ ಜಲಾಂತರ್ಗಾಮಿಯೊಳಗೆ ಆ ಸಂದರ್ಭದಲ್ಲಿ ಇದ್ದ 71 ಮಂದಿ ಚಾಲಕ ಸಿಬಂದಿಗಳ ಮೃತ ದೇಹಗಳು ಕೂಡ ಯಥಾಸ್ಥಿತಿಯಲ್ಲಿ ಪತ್ತೆಯಾಗಿರುವುದು ಅಚ್ಚರಿಯ ಸಂಗತಿಯಾಗಿದೆ.

ಇಟಲಿಯ ಸಾರ್ಡಿನಿಯಾದ ಈಶಾನ್ಯ ಕರಾವಳಿಯಲ್ಲಿನ ಟ್ಯಾವೋಲಾರಾ ದ್ವೀಪಕ್ಕೆ ಸಮೀಪ, ಸುಮಾರು 100 ಮೀಟರ್‌ ಸಮುದ್ರದಾಳದಲ್ಲಿ ಶೋಧ ಕಾರ್ಯ ಕೈಗೊಂಡ ಮುಳುಗು ತಜ್ಞರ ತಂಡಕ್ಕೆ 1,290 ಟನ್‌ ಸಾಮರ್ಥ್ಯದ ಈ ಜಲಾಂತರ್ಗಾಮಿ ಈಚೆಗೆ ಪತ್ತೆಯಾಯಿತು.

1943ರ ಜನವರಿ 2ರಂದು ಬ್ರಿಟನ್‌ನ ಈ ಜಲಾಂತರ್ಗಾಮಿಯು ಯಾವುದೇ ಸುಳಿವಿಲ್ಲದೆ ನಾಪತ್ತೆಯಾಗಿತ್ತು. ಓಲ್‌ಬಿಯಾ ಕೊಲ್ಲಿಯಲ್ಲಿನ ಸಾಗರದಾಳದಲ್ಲಿ ಶತ್ರು ಸೇನೆಗಳು ಹುಗಿದಿಟ್ಟಿದ್ದ ನೆಲ ಬಾಂಬ್‌ ಸ್ಫೋಟಕ್ಕೆ ಈ ಜಲಾಂತರ್ಗಾಮಿ ಧ್ವಂಸಗೊಂಡಿತ್ತೆಂದು ನಂಬಲಾಗಿತ್ತು.

“ಸಾಗರದಾಳದಲ್ಲಿ ಈ ಜಲಾಂತರ್ಗಾಮಿ ಅಂದು ಹೇಗಿದ್ದಿತೋ ಹಾಗೆ, ಯಾವುದೇ ರೀತಿಯ ಹಾನಿಯನ್ನು ಕಾಣದ ಸ್ಥಿತಿಯಲ್ಲಿ ಪತ್ತೆಯಾಯಿತು. ಯುದ್ಧ ಕಾಲದಲ್ಲಿ ಈ ರೀತಿ ಎರಡೂ ಕಡೆಗಳಲ್ಲಿ ಕಾದಾಡುವ ಸೈನಿಕರನ್ನು ಒಳಗೊಂಡ ಜಲಾಂತರ್ಗಾಮಿಗಳು ದಾಳಿಗೆ ಸಿಲುಕಿ ನಾಶವಾಗುವಾಗ ಅವುಗಳ ಒಳಗಿರುವ ಯೋಧರ ಗತಿ ಏನಾಗಿದ್ದಿರಬಹುದು ಎಂಬ ಆಲೋಚನೆ ನನ್ನ ಮನಸ್ಸನ್ನು ಕಾಡತೊಡಗಿತು. ಆ ಕುತೂಹಲದಿಂದ ಈ ನತದೃಷ್ಟ ಜಲಾಂತರ್ಗಾಮಿಯ ಒಳಗೆ ನೋಡಿದಾಗ, ಅಲ್ಲಿ ಅಂದು ಮೃತಪಟ್ಟಿದ್ದ 71 ಯೋಧರ ಮೃತ ದೇಹಗಳು ಗೋಚರವಾಗಿ, ಮೈ ಜುಂ ಎನಿಸಿತು’ ಎಂದು ಡೈವಿಂಗ್‌ ತಂಡದ ನಾಯಕ ಮ್ಯಾಸಿನೋ ಡೊಮೆನಿಕೋ ಬೋರ್‌ಡೋನ್‌ ಅವರು ಇಟಲಿಯ ಮಾಧ್ಯಮದೊಂದಿಗೆ ಮಾತಾಡುತ್ತಾ ಹೇಳಿದರು.

ಎರಡನೇ ಮಹಾಯುದ್ಧ ಕಾಲದ ದಾಖಲೆಗಳಿಂದ ತಿಳಿದುಬರುವಂತೆ ಈ ನತದೃಷ್ಟ ಜಲಾಂತರ್ಗಾಮಿಯು 1942ರ ಡಿಸೆಂಬರ್‌ 28ರಂದು ಮಾಲ್ಟಾದಿಂದ ಹೊರಟಿತ್ತು. ಲಾ ಮ್ಯಾಡೆಲಿನಾ ಬಂದರಿನಲ್ಲಿ ಲಂಗರು ಹಾಕಲಿದ್ದ ಇಟಲಿಯ ಎರಡು ಸಮರ ನೌಕೆಗಳನ್ನು ನಾಶಪಡಿಸುವುದೇ ಬ್ರಿಟನ್‌ನ ಈ ಜಲಾಂರ್ಗಾಮಿಯ ಪ್ರಪ್ರಥಮ ಗುರಿಯಾಗಿತ್ತು.

ಆದರೆ ಡಿಸೆಂಬರ್‌ 31ರಂದು ತನ್ನ ಮೂಲ ನೆಲೆಗೆ ಸಂದೇಶವೊಂದನ್ನು ರವಾನಿಸಿದ ಬಳಿಕ ಈ ಬ್ರಿಟಿಷ್‌ ಜಲಾಂತರ್ಗಾಮಿಯು ಯಾವುದೇ ಸುಳಿವಿಲ್ಲದೆ ಇದ್ದಕ್ಕಿದ್ದಂತೆಯೇ ನಾಪತ್ತೆಯಾಯಿತು. ಮಿಲಿಟರಿ ಅಧಿಕಾರಿಗಳು ಈ ಜಲಾಂತರ್ಗಾಮಿ ಸಾಗರದಾಳದಲ್ಲಿ ಮುಳುಗಿತೆಂದೇ ಭಾವಿಸಿದರು ಎಂಬುದಾಗಿ ಡೇಲಿ ಎಕ್ಸ್‌ಪ್ರೆಸ್‌ ವರದಿ ಮಾಡಿತು.

ಇದೀಗ 73 ವರ್ಷಗಳ ತರುವಾಯ ಪತ್ತೆಯಾಗಿರುವ ಈ ಬ್ರಿಟಿಷ್‌ ಜಲಾಂತರ್ಗಾಮಿಯ ಅವಶೇಷಗಳು ಅಚ್ಚರಿ ಹುಟ್ಟಿಸುವಷ್ಟು ಯಥಾಸ್ಥಿತಿಯಲ್ಲೇ ಇದೆ. ಜಲಾಂತರ್ಗಾಮಿಯ ಒಂದು ಸಣ್ಣ ಭಾಗ ಮಾತ್ರವೇ ಹಾನಿಗೀಡಾಗಿರವುದು ಕಂಡು ಬಂದಿದೆ.

ಡೈವಿಂಗ್‌ ಟೀಮ್‌ನ ಕ್ಯಾಪ್ಟನ್‌ ಬೋರ್‌ಡೋನ್‌ ಹೀಗೆ ಹೇಳುತ್ತಾರೆ : ಜಲಾಂತರ್ಗಾಮಿಯ ಒಳಗಿನಿಂದ ಗಾಳಿಯು ಸಂಪೂರ್ಣವಾಗಿ ಮುಚ್ಚಲ್ಪಟ್ಟ ಸ್ಥಿತಿಯಲ್ಲಿ ಉಂಟಾದ ಒತ್ತಡದಿಂದ ಅದು ಮುಳುಗಿರುವ ಸಾಧ್ಯತೆ ಇದೆ. ಹಾಗೆಯೇ ಜಲಾಂತರ್ಗಾಮಿಯ ಒಳಗಿದ್ದ 71 ಯೋಧರು ಈ ಕಾರಣದಿಂದಾಗಿ ಆಮ್ಲಜನಕವಿಲ್ಲದೆ ಉಸಿರುಗಟ್ಟಿ ಸತ್ತಿದ್ದಾರೆ.ಆದುದರಿಂದ ಮಾನವೀಯ ನೆಲೆಯಲ್ಲಿ ಹೇಳುವುದಾದರೆ ಈ ಬಗೆಯ ಯುದ್ಧಾವಶೇಷಗಳನ್ನು ನಾವು ಗೌರವದಿಂದ ಕಾಣುವ ಅಗತ್ಯವಿದೆ.

ಈ ನಡುವೆ ಬ್ರಿಟನ್‌ನ ರಾಯಲ್‌ ನೇವಿ ಕೂಡ ಇಟಲಿಯ ದೂರ ಸಾಗರದಾಳದಲ್ಲಿ ಪತ್ತೆಯಾಗಿರುವ ಎರಡನೇ ಮಹಾಯುದ್ಧದ ತನ್ನ ಜಲಾಂತರ್ಗಾಮಿಯ ಅವಶೇಷವನ್ನು ಗೌರವದಿಂದ ಕಾಣಲಾಗುವುದೆಂದು ತಾನು ನಿರೀಕ್ಷಿಸುವುದಾಗಿ ಹೇಳಿದೆ. ಜತೆಗೆ ತಾನು ಜಲಾಂತರ್ಗಾಮಿಯು ಗುರುತು ದೃಢೀಕರಿಸುವ ಕೆಲಸವನ್ನು ಬೇಗನೆ ಮಾಡುವುದಾಗಿ ಹೇಳಿದೆ.

“ಇಟಲಿ ದೂರ ಸಾಗರದಾಳದಲ್ಲಿ ಪತ್ತೆಯಾಗಿರುವ ಈ ಜಲಾಂತರ್ಗಾಮಿಯು ರಾಯಲ್‌ ನೇವಿಯದ್ದು ಹೌದೇ ಅಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ದಾಖಲೆಪತ್ರಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಬ್ರಿಟನ್‌ನ ರಾಯಲ್‌ ನೇವಿ ಹೇಳಿದೆ.
-ಉದಯವಾಣಿ

Comments are closed.